Home ರಾಜ್ಯ ಒತ್ತುವರಿ ಜಮೀನುಗಳ ಗುತ್ತಿಗೆ ರದ್ದುಮಾಡಿ, ಭೂ ರಹಿತರಿಗೆ ನೀಡಿ ಮರಿಜೋಸೇಫ್ ಆಗ್ರಹ

ಒತ್ತುವರಿ ಜಮೀನುಗಳ ಗುತ್ತಿಗೆ ರದ್ದುಮಾಡಿ, ಭೂ ರಹಿತರಿಗೆ ನೀಡಿ ಮರಿಜೋಸೇಫ್ ಆಗ್ರಹ

0

ಹಾಸನ: ಸರಕಾರವು ಮಲೆನಾಡು ಭಾಗದ ಬೆಳೆಗಾರರಿಗೆ ಒತ್ತುವರಿ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವ ನಿರ್ಧಾರ ರದ್ದುಗೊಳಿಸಿ ಭೂ ರಹಿತರಿಗೆ ನೀಡಬೇಕು ಎಂದು ದಲಿತ ವಿಮೋಚನೆ ಮಾನವ ಹಕ್ಕುಗಳ ವೇದಿಕೆಯ ಮುಖಂಡ ಮರಿ ಜೋಸೆಫ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತಾಡಿದ ಅವರು, ಮಲೆನಾಡು ಭಾಗದಲ್ಲಿ ಕಾಫಿ ಬೆಳೆಗಾರರು ಸಾಕಷ್ಟು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು, ಕಾಫಿ ತೋಟಗಳನ್ನು ನಿರ್ಮಾಣ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಆದರೆ ಸರ್ಕಾರ ಅದಕ್ಕೆ ಪೂರಕವಾಗಿ ಒತ್ತುವರಿ ಮಾಡಿರುವ ಜಾಗವನ್ನು ಅವರಿಗೇ ಗುತ್ತಿಗೆ ಆಧಾರದಲ್ಲಿ ನೀಡಲು ಮುಂದಾಗಿರುವುದು ಖಂಡನೀಯ.

ಸರ್ಕಾರಿ ಜಾಗ ಒತ್ತುವರಿ ಮಾಡಿರುವ ಭೂ ಮಾಲೀಕರ ಪೈಕಿ ಬಹುತೇಕ ಎಲ್ಲರೂ ದೊಡ್ಡ ಮಟ್ಟದಲ್ಲಿ ಭೂಮಿ ಹೊಂದಿರುವವರೆ ಆಗಿದ್ದಾರೆ. ಹಾಗಾಗಿ ಉಳ್ಳವರಿಗೆ ಭೂಮಿ ನೀಡುವ ಬದಲಾಗಿ ಭೂ ರಹಿತರಿಗೆ ಭೂಮಿ ನೀಡುವ ನಿಟ್ಟಿನಲ್ಲಿ ಸರ್ಕಾರ ಯೋಚಿಸಬೇಕಿದೆ. ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು ೪೦ ಸಾವಿರ ಎಕರೆ ಭೂಮಿ ಒತ್ತುವರಿಯಾಗಿದೆ ಒತ್ತುವರಿ ಯಾಗಿರುವ ಜಾಗವನ್ನು ಉಳ್ಳವರಿಗೆ ಕೊಡುವ ಬದಲಾಗಿ ನಿರುದ್ಯೋಗಿ ಯುವ ಜನತೆಗೆ ನೀಡಿದರೆ ತಲಾ ೪ ಎಕರೆ ಯಂತೆ ನೀಡಬಹುದು ಎಂದರು.

ಈಗಾಗಲೇ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಯುವ ಜನತೆಗೆ ಒತ್ತುವರಿ ಜಮೀನು ನೀಡಿದಲ್ಲಿ ಹಾಸನ ಜಿಲ್ಲೆಯಲ್ಲಿ ಸುಮಾರು ೧೦ ಸಾವಿರ ಕುಟುಂಬಗಳ ಜೀವನಕ್ಕೆ ಆಧಾರ ವಾಗಲಿದೆ. ಕಾಡು ಮನೆ ಎಸ್ಟೇಟ್, ಟಾಟಾ ಕಂಪೆನಿ, ನಿರ್ಮಾ ಎಸ್ಟೇಟ್, ಶಂಕರ್ ಎಸ್ಟೇಟ್, ಸೇರಿದಂತೆ ದೊಡ್ಡ ಭೂ ಹಿಡುವಳಿದಾರರು ಸಾವಿರಾರು ಎಕರೆ ಭೂಮಿ ಒತ್ತುವರಿ ಮಾಡಿದ್ದಾರೆ ಕೂಡಲೇ ಅವುಗಳನ್ನು ತೆರವು ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಕಾಡಾನೆ ಮತ್ತು ಮಾನವ ಸಂಘರ್ಷ ತಡೆಗಟ್ಟಲು ಭೂ ಮಾಲೀಕರ ಒತ್ತುವರಿ ಭೂಮಿ ಹಂಚಿಕೆಯಲ್ಲಿ ಆನೆ ಕಾರಿಡರ್ ನಿರ್ಮಾಣಕ್ಕೆ ೧೦ ಸಾವಿರ ಎಕರೆ ಭೂಮಿ ಕಾಯ್ದಿರಿಸಬೇಕು ಎಂಬುದು ಪ್ರಗತಿಪರ ಸಂಘಟನೆಗಳಿಂದ ಸರಕಾರಕ್ಕೆ ಒತ್ತಾಯವಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಗತಿಪರ ಸಂಘಟನೆ ಮುಖಂಡರಾದ ನಾಗರಾಜ್ ಹೆತ್ತೂರು, ಅಂಬುಗ ಮಲ್ಲೇಶ್, ಆರ್.ಪಿ.ಐ. ಸತೀಶ್, ನವೀನ್ ಸದಾ, ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version