“ಮಾರಿಕೊಂಡ” ಗೋದಿ ಮಾಧ್ಯಮದ ಸತ್ಯ ತಿರುಚುವ ಹೇಸಿಗೆ ಉದ್ಯಮ!

“..ಭಾರತವು ಜಾಗತಿಕವಾಗಿ “ವಿಶ್ವಾಸಾರ್ಹತೆಯಲ್ಲಿ ನಂ. 1″ ಎಂದು ಶೀರ್ಷಿಕೆಯು ಸುಳ್ಳು ಘೋಷಣೆ ಮಾಡಿದೆ! ಮೊತ್ತಮೊದಲಾಗಿ ​ಇದು ಜಾಗತಿಕ ಸಮೀಕ್ಷೆಯೇ ಅಲ್ಲ! ಹಾಗಾದರೆ ಏನು!?” ಓದಿ.. ನಿಖಿಲ್ ಕೋಲ್ಪೆಯವರ ವಿಮರ್ಶಾತ್ಮಕ ಬರಹದಲ್ಲಿ

“ಮಾರಿಕೊಂಡ” ಗೋದಿ ಮಾಧ್ಯಮವು ಹೇಗೆ ಮೋದಿ ಮತ್ತು ಬಿಜೆಪಿ ಸರಕಾರದ ಹೊಗಳಿಕೆ ಮತ್ತು ವಿಜ್ರಂಭಣೆಗಾಗಿ ತಿರುಚಿದ, ವಿರೂಪಗೊಳಿಸಿದ, ಕಣ್ಣುಕಟ್ಟಿನ ವರದಿಗಳನ್ನು ನಿರಂತರವಾಗಿ ಪ್ರಕಟಿಸುತ್ತಿವೆ ಎಂಬುದಕ್ಕೆ ಚಿತ್ರದಲ್ಲಿರುವ “ವರದಿ” ಒಂದು ಉದಾಹರಣೆಯಾಗಿದೆ. ಈ ಸುದ್ದಿಯ ಶೀರ್ಷಿಕೆಯು ವಾಸ್ತವಿಕ ದತ್ತಾಂಶವನ್ನು ಹೇಗೆ ಕುತಂತ್ರದಿಂದ ತಿರುಚಿದೆ ಎಂದು ನೋಡೋಣ.

Image

ಈ ತಿರುಚಿದ ಸುದ್ದಿಯು ಆಸ್ಟ್ರೇಲಿಯಾದಲ್ಲಿ ನೆಲೆ ಹೊಂದಿರುವ ಪ್ರಸಿದ್ಧ ಅಂತರರಾಷ್ಟ್ರೀಯ ನೀತಿ ಚಿಂತಕರ ಚಾವಡಿ “ಲೋವಿ ಇನ್‌ಸ್ಟಿಟ್ಯೂಟ್‌”ನ ವರದಿಯನ್ನು ತನ್ನ ಸುಳ್ಳಿನ ಕಣ್ಣುಕಟ್ಟಿಗಾಗಿ ಉಲ್ಲೇಖಿಸುತ್ತದೆ. ಅದರಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ಅಂಕಿಅಂಶಗಳು – ಭಾರತಕ್ಕೆ 50 ಶೇಕಡಾ ನಂಬಿಕೆ, ಯುಎಸ್ಎಗೆ 31 ಶೇಕಡಾ, ಚೀನಾಕ್ಕೆ 28 ಶೇಕಡಾ ಮತ್ತು ರಷ್ಯಾಕ್ಕೆ 11 ಶೇಕಡಾ ಎಂಬ ಅಂಕಿಅಂಶವೇನೋ ನಿಜ. ಆದರೆ, ಇದು 2020ರ ಜೂನ್ ಅಂತ್ಯದಲ್ಲಿ ಬಿಡುಗಡೆಯಾದ ಐದು ವರ್ಷ ಹಳೆಯ ಲೋವಿ ಇನ್‌ಸ್ಟಿಟ್ಯೂಟ್ ಸಮೀಕ್ಷೆಯ ಅಂಕಿಅಂಶ! ಇದನ್ನು ಸಂಪೂರ್ಣ ಮರೆಮಾಚಿ, ಇಸವಿಯನ್ನು ನಮೂದಿಸದೇ, ಕೇವಲ “ಜೂನ್ 20ರಂದು ಬಿಡುಗಡೆಯಾದ” ಎಂದು ಮಾತ್ರ ಬರೆದು, ಅಂಕಿ ಅಂಶಗಳು ತೀರಾ ಇತ್ತೀಚಿನವು ಎಂಬಂತೆ ಬಿಂಬಿಸಿ , ಈ ವರದಿಯು ಓದುಗರನ್ನು ವಂಚಿಸಿದೆ. ಅಲ್ಲದೆ, “ಭಾರತದ ಮೇಲಿನ ಪ್ರಪಂಚದ ವಿಶ್ವಾಸ ಹೆಚ್ಚುತ್ತಲೇ ಇದ್ದು, ಇತ್ತೀಚೆಗೆ ಬಿಡುಗಡೆಯಾದ ವಿಶ್ವಾಸಾರ್ಹತೆ ಶ್ರೇಯಾಂಕದಲ್ಲಿ ಅಮೆರಿಕ, ಚೀನಾ ಮತ್ತು ರಷ್ಯಾವನ್ನು ಭಾರತ ಹಿಂದಿಕ್ಕಿದೆ” ಎಂದು ಹೇಳಿದೆ. ಇದರಲ್ಲಿ “ಇತ್ತೀಚೆಗೆ” ಎಂಬುದು ಮೊದಲ ಹಸಿಹಸಿ ಸುಳ್ಳು! “ಹಿಂದಿಕ್ಕಿದೆ” ಎಂಬುದು ಅದಕ್ಕಿಂತ ದೊಡ್ಡ ಸುಳ್ಳು.

​ಭಾರತವು ಜಾಗತಿಕವಾಗಿ “ವಿಶ್ವಾಸಾರ್ಹತೆಯಲ್ಲಿ ನಂ. 1” ಎಂದು ಶೀರ್ಷಿಕೆಯು ಸುಳ್ಳು ಘೋಷಣೆ ಮಾಡಿದೆ! ಮೊತ್ತಮೊದಲಾಗಿ ​ಇದು ಜಾಗತಿಕ ಸಮೀಕ್ಷೆಯೇ ಅಲ್ಲ! ಈ ಸಮೀಕ್ಷೆಯು ಆಸ್ಟ್ರೇಲಿಯಾದಲ್ಲಿ ವಾಸಿಸುವ ಜನರು ನಿರ್ದಿಷ್ಟ ಪ್ರಮುಖ ದೇಶಗಳನ್ನು ಎಷ್ಟರ ಮಟ್ಟಿಗೆ ನಂಬುತ್ತಾರೆ ಎಂಬುದರ ಕುರಿತು ಮಾತ್ರವೇ ಸಮೀಕ್ಷೆ ನಡೆಸಿತ್ತು. ಇದು ಎಷ್ಟು ಮಾತ್ರಕ್ಕೂ ಜಾಗತಿಕ ಅಭಿಪ್ರಾಯ ಪ್ರತಿಫಲನವಲ್ಲ ಮತ್ತು ಆಗುವುದು ಸಾಧ್ಯವೂ ಇಲ್ಲ!

​ನಿಜವೆಂದರೆ, ಸಮೀಕ್ಷೆಯಲ್ಲಿ ಭಾರತವು ಅತ್ಯುನ್ನತ ಶ್ರೇಯಾಂಕ ಪಡೆದ ದೇಶವಾಗಿರಲಿಲ್ಲ: ಆಸ್ಟ್ರೇಲಿಯಾದ ಸಮೀಕ್ಷೆಗೊಳಗಾದ ಜನರಲ್ಲಿ ಕೂಡಾ ಭಾರತವು ಮೊದಲ ಸ್ಥಾನದಿಂದ ದೂರವಿತ್ತು. ಪೂರ್ಣ ಸಮೀಕ್ಷೆಯಲ್ಲಿ ಯುನೈಟೆಡ್ ಕಿಂಗ್‌ಡಮ್ ಜಪಾನ್ ಮತ್ತು ಜರ್ಮನಿ – ಗಮನಾರ್ಹವಾಗಿ ಹೆಚ್ಚಿನ ವಿಶ್ವಾಸಾರ್ಹ ಅಂಕಗಳನ್ನು ಪಡೆದಿದ್ದವು. (ಸರಾಸರಿ 60 ಶೇಕಡಾದಿಂದ 80 ಶೇಕಡಾಕ್ಕೂ ಹೆಚ್ಚು). ಆ ನಿರ್ದಿಷ್ಟ ವರ್ಷದಲ್ಲಿ ಯುಎಸ್, ಚೀನಾ ಮತ್ತು ರಷ್ಯಾದ ಇರುವ ನಿರ್ದಿಷ್ಟ ಗುಂಪಿನಲ್ಲಿ ಮಾತ್ರವೇ ಭಾರತ (50 ಶೇಕಡಾ) ಮೇಲ್ಮಟ್ಟದಲ್ಲಿ ಇರುವುದು. ಹಲವು ದೇಶಗಳು ಇವೆಲ್ಲಕ್ಕಿಂತ ಮುಂದಿವೆ.
2020ರ ಮೂಲ ವರದಿಯಲ್ಲಿ ಯುನೈಟೆಡ್ ಕಿಂಗ್‌ಡಮ್ (84 ಶೇಕಡಾ) ಮತ್ತು ಜಪಾನ್ (82 ಶೇಕಡಾ) ನಂತಹ ದೇಶಗಳು ಅತ್ಯಂತ ಹೆಚ್ಚಿನ ವಿಶ್ವಾಸ ಗಳಿಸಿದ್ದವು. ಕೇವಲ ಅಮೆರಿಕ, ಚೀನಾ ಮತ್ತು ರಷ್ಯಾಗೆ ಹೋಲಿಸಿದಾಗ ಮಾತ್ರ ಭಾರತದ 50 ಶೇಕಡಾ ಮುಂಚೂಣಿಯಲ್ಲಿ ಕಾಣಿಸುತ್ತದೆಯೇ ಹೊರತು, ಒಟ್ಟಾರೆ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಕೆಲವಕ ಸ್ಥಾನಗಳೇ ಇರಲಿಲ್ಲ!
​ಯುಎಸ್ಎಯ ವಿಶ್ವಾಸಾರ್ಹತೆಯು ಆಸ್ಟ್ರೇಲಿಯಾದಲ್ಲಿ 31 ಶೇಕಡಾಕ್ಕೆ ಇಳಿದದ್ದು ನಿಜ. ಆ ನಿರ್ದಿಷ್ಟ 2020ರ ಸಮೀಕ್ಷೆಯ ವಾಸ್ತವದಲ್ಲಿ ನೆಲೆಗೊಂಡಿದೆ. ಆ ಸಮಯದಲ್ಲಿ, ಡೊನಾಲ್ಡ್ ಟ್ರಂಪ್ ಅಧ್ಯಕ್ಷತೆಯಲ್ಲಿ, ವಿದೇಶಾಂಗ ನೀತಿ ಮತ್ತು ಜಾಗತಿಕ ಆಡಳಿತದ ಮೇಲಿನ ಭಿನ್ನಾಭಿಪ್ರಾಯಗಳಿಂದಾಗಿ, ವಿಶ್ವದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವ ಅಮೆರಿಕದ ಮೇಲಿನ ಆಸ್ಟ್ರೇಲಿಯಾದ ಸಾರ್ವಜನಿಕ ನಂಬಿಕೆ ಸಮೀಕ್ಷೆಯ ಇತಿಹಾಸದಲ್ಲಿ ಸಾರ್ವಕಾಲಿಕ ಕನಿಷ್ಟ ಮಟ್ಟವನ್ನು ತಲುಪಿತ್ತು. ಆ ಒಂದು ವರದಿಯನ್ನೇ ಕುಟಿಲವಾಗಿ ತಿರುಚಿ, ಭಾರತ ಮತ್ತು ಮೋದಿಯನ್ನು ನಂ.1 ಎಂದು ಸುಳ್ಳಾಗಿ ಬಿಂಬಿಸುವ ಕೆಲಸವನ್ನು ಈ ವರದಿ ಮಾಡಿದೆ.

​ಲೋವಿ ಇನ್‌ಸ್ಟಿಟ್ಯೂಟ್‌ನ ಅಂಕಿಅಂಶಗಳು ಅವುಗಳ ಸ್ಥಾನದಲ್ಲಿ (ಅಂದರೆ, ಒಂದು ಗುಂಪಿನ ಒಳಗಡೆ) ನಿಜವಾಗಿದ್ದರೂ, ಚಿತ್ರದಲ್ಲಿರುವ ಪತ್ರಿಕಾ ವರದಿಯು ಜಗತ್ತಿನ ಜನರು “ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ, ಷಿ ಜಿನ್‌ಪಿಂಗ್ ನೇತೃತ್ವದ ಚೀನಾ ಮತ್ತು ವ್ಲಾಡಿಮಿರ್ ಪುಟಿನ್ ನೇತೃತ್ವದ ರಷ್ಯಾಗಿಂತ ಪ್ರಧಾನಿ ಮೋದಿ ನೇತೃತ್ವದ ಭಾರತವನ್ನು ಹೆಚ್ಚು ನಂಬುತ್ತಾರೆ” ಎಂದು ಮೋದಿಯನ್ನು ಹೊಗಳುವ ಸಲುವಾಗಿ ಸಮೀಕ್ಷೆಯಲ್ಲಿ ಇಲ್ಲದ ವಿಶ್ವನಾಯಕರ ಹೆಸರುಗಳನ್ನು “ಎಕ್ಟ್ರಾ ಫಿಟ್ಟಿಂಗ್” ಮಾಡಿ, “ಅವರೆಲ್ಲರಿಗಿಂತ ಮೋದಿ ದೊಡ್ಡವ” ಎಂಬ ಭ್ರಮೆಯನ್ನು ಓದುಗರ ಮನಸ್ಸಿನಲ್ಲಿ ಮೂಡಿಸಲು ಯತ್ನಿಸಿದೆ.

ಜೊತೆಗೆ ನೀಡಲಾದ ಇನ್ನೊಂದು ಬಾಕ್ಸ್ ಸುದ್ದಿಯೂ ಭಾರತೀಯರ ಅಭಿಪ್ರಾಯವನ್ನು ಜಾಗತಿಕ ಅಭಿಪ್ರಾಯ ಎಂಬಂತೆ ಬಿಂಬಿಸಿದೆ. ಅದು “ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಟ್ರ್ಯಾಕರ್” ಸಮೀಕ್ಷೆಯನ್ನು ಉಲ್ಲೇಖಿಸಿ, “ಕುಗ್ಗದ ನಂಬಿಕೆ: ಪ್ರಧಾನಿ ಮೋದಿಯವರು ಸತತ 12 ವರ್ಷಗಳಿಂದ ಅಧಿಕಾರದಲ್ಲಿದ್ದರೂ, ಅವರು ಮತ್ತು ಅವರ ನಾಯಕತ್ವದ ಮೇಲಿನ ಜಗತ್ತಿನ ನಂಬಿಕೆ ಕುಗ್ಗಿಲ್ಲ ಎಂಬುದನ್ನು ಈ ಹಿಂದಿನ ಸಮೀಕ್ಷೆಗಳೂ ತೋರಿಸಿವೆ. ಕಳೆದ ವರ್ಷ ‘ಮಾರ್ನಿಂಗ್ ಕನ್ಸಲ್ಟ್ ಗ್ಲೋಬಲ್ ಲೀಡರ್ ಅಪ್ರೂವಲ್ ಟ್ರ್ಯಾಕರ್’ ಸಮೀಕ್ಷೆಯು ಪ್ರಧಾನಿ ಮೋದಿಗೆ ಶೇ. 75ರಷ್ಟು ಅಪ್ರೂವಲ್ ರೇಟಿಂಗ್ ನೀಡಿತ್ತು. ಈ ಮೂಲಕ ಮೋದಿ ಸತತ ಐದನೇ ಬಾರಿ ಅಗ್ರಸ್ಥಾನ ಪಡೆದಿದ್ದರು” ಎಂದು ಹೇಳಿದೆ! ಈ ರೇಟಿಂಗ್ ನಿಜ. ಆದರೆ ಇದರಲ್ಲಿ ಅಡಗಿಸಲಾದ ಸತ್ಯ ಏನು? ಇದು ಖಂಡಿತವಾಗಿಯೂ “ಜಗತ್ತಿನ ನಂಬಿಕೆ”ಯಲ್ಲ! ಭಾರತದ 2000 ಆನ್‌ಲೈನ್ ಮತದಾರರ ನಂಬಿಕೆ!

ವಾಸ್ತವವಿಕ ಸಂಗತಿ ಏನು ಎಂದರೆ, ಅದು ಸಮೀಕ್ಷೆಯ ದೇಶಗಳಲ್ಲಿ 2000 ಆಯಾ ದೇಶಗಳ ಜನರ ಆನ್ಲೈನ್ ಸಮೀಕ್ಷೆಯ ಆಧಾರದಲ್ಲಿ ಶ್ರೇಯಾಂಕ ನೀಡುತ್ತದೆ. ಮೊದಲ ಪ್ರಶ್ನೆ ಎಂದರೆ, 140 ಕೋಟಿ ಜನಸಂಖ್ಯೆಯ ದೇಶದ ಜನರ ಆಯ್ಕೆ ಅಥವಾ ಇಚ್ಛೆಯನ್ನು 2000 ಜನರ ಸಮೀಕ್ಷೆ ಪ್ರತಿಫಲಿಸುತ್ತದೆಯೇ ಎಂಬುದು. ಎರಡನೆಯದಾಗಿ, ಇದು ನಗರಗಳಲ್ಲಿರುವ, ಶಿಕ್ಷಿತ, ಹೆಚ್ಚು ಆದಾಯವುಳ್ಳ, ತಾಂತ್ರಿಕ ಪರಿಣತಿ ಹೊಂದಿರುವ ಜನವರ್ಗವನ್ನು ಮಾತ್ರವೇ ಆನ್‌ಲೈನ್ ಸಮೀಕ್ಷೆ ನಡೆಸುತ್ತದೆಯೇ ಹೊರತು, ಅದಕ್ಕೆ ಭಾರತದ ಸಾಮಾನ್ಯ ಬಡಜನರ ಸಂಪರ್ಕ ಸಿಗುವುದಿಲ್ಲ. ಮೂರನೆಯದಾಗಿ, ಈ ಸಮೀಕ್ಷೆಯು ಆಯಾ ದೇಶದ ಜನರಿಗೆ ಆಯಾ ದೇಶದ ನಾಯಕರ ನಡುವೆ ಆಯ್ಕೆ ಮಾಡಲು ಹೇಳುತ್ತದೆಯೇ ಹೊರತು ಜಾಗತಿಕ ನಾಯಕರ ನಡುವೆ ತುಲನೆ ಮಾಡಲು ಹೇಳುವುದಿಲ್ಲ. ಅಂದರೆ, ಇದು ಜಾಗತಿಕವಾಗಿ ನಡೆಯುವ ದೇಶ ಮಟ್ಟದ ಸಮೀಕ್ಷೆಯೇ ಹೊರತು, ಜಾಗತಿಕ ಮಟ್ಟದ ಸಮೀಕ್ಷೆಯಲ್ಲ. ನಾಲ್ಕನೆಯದಾಗಿ, ತೀರಾ ಧ್ರುವೀಕರಣಗೊಂಡ ಮತ್ತು ಒಂದೊಂದು ಪಕ್ಷದಲ್ಲಿಯೂ ಹಲವು ಜನಪ್ರಿಯ ನಾಯಕರಿರುವ ಪಾಶ್ಚಾತ್ಯ ಪ್ರಜಾಪ್ರಭುತ್ವಗಳಲ್ಲಿ ಯಾರೂ ದೊಡ್ಡ ಶೇಕಡಾವಾರು ವೈಯಕ್ತಿಕ ಮತ ಗಳಿಸುವುದು ಸಾಧ್ಯವಿಲ್ಲ. ಭಾರತದಲ್ಲಿ ಅತಿದೊಡ್ಡ ಪಕ್ಷವಾದ ಬಿಜೆಪಿಯ ಮಟ್ಟಿಗೆ ಏಕೈಕ ನಾಯಕ ಮೋದಿಯಾಗಿದ್ದು, ಪ್ರತಿಪಕ್ಷಗಳು ಹಲವಿದ್ದು, ಅವುಗಳ ಒಳಗೇ ಹಲವು ನಾಯಕರಿರುವುದರಿಂದ ಆತನಿಗೆ ಹೆಚ್ಚು ಶೇಕಡಾವಾರು ಮತ ಸಿಗುವುದು ಸಹಜವೇ ಆಗಿದೆ.

ಈ ರೀತಿಯ ವಿದೇಶಿ ಮತ್ತು ಹಳೆಯ ವರದಿಗಳನ್ನು ತಿರುಚಿ ಬರೆದರೆ ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭ್ರಮೆ ಗೋದಿ ಮಾಧ್ಯಮದಲ್ಲಿ ಇರಬಹುದು. ಅಥವಾ ನಮ್ಮ ದೊಡ್ಡ ಸಂಖ್ಯೆಯ ಓದುಗರು ಸುಳ್ಳನ್ನು ನಂಬಲಿ; ಸತ್ಯ ಹೊರಬಂದರೂ ಸಣ್ಣ ಸಂಖ್ಯೆಯ ಜನರಿಗೆ ಸುಳ್ಳು ಗೊತ್ತಾಗುತ್ತದೆ ಎಂಬ ಧಾರ್ಷ್ಟ್ಯವೂ ಇರಬಹುದು.

ಒಟ್ಟಿನಲ್ಲಿ ಸಾಕಷ್ಟು ವಿಶ್ವಾಸಾರ್ಹವಾದ ಎರಡು ಹಳೆಯ ಸಮೀಕ್ಷೆಗಳನ್ನು ತಾಜಾ ಎಂಬಂತೆ ನಂಬಿಸಿ, ಅಂಕಿಅಂಶಗಳನ್ನು ದಾರಿತಪ್ಪಿಸುವ ರೀತಿಯಲ್ಲಿ ಪ್ರತಿಬಿಂಬಿಸಿ, ದೇಶ ಮಟ್ಟದ ಅಭಿಪ್ರಾಯಗಳನ್ನು ಅಂತಾರಾಷ್ಟ್ರೀಯ ಮಟ್ಟದ ಅಭಿಪ್ರಾಯಗಳೆಂದು ಓದುಗರನ್ನು ವಂಚಿಸಿ, “ವಿಶ್ವಾಸಾರ್ಹತೆಯಲ್ಲಿ ಭಾರತ ನಂ.1” ಎಂದು ಅಪ್ಪಟ ಸುಳ್ಳು ಹೇಳಿ, ಮೋದಿಯನ್ನು ವಿಜ್ರಭಿಸಲೆಂದೇ ಬರೆಯಲಾದ ವಂಚಕ ವರದಿ ಪ್ರಕಟಿಸಿದವರ ಪತ್ರಿಕಾವೃತ್ತಿಯ “ವಿಶ್ವಾಸಾರ್ಹತೆ”ಯೇ ಪ್ರಶ್ನಾರ್ಹ.

Related Articles

ಇತ್ತೀಚಿನ ಸುದ್ದಿಗಳು