ವಾಷಿಂಗ್ಟನ್ (ಯುಎಸ್ಎ): ವಿಶ್ವದ ಅಗ್ರಗಣ್ಯ ರಾಷ್ಟ್ರವಾದ ಅಮೆರಿಕಾದಲ್ಲಿ ಭೀಕರ ಅಪಘಾತ ಸಂಭವಿಸಿದೆ. ಟೆನ್ನೆಸ್ಸೀ ರಾಜ್ಯದ ಸ್ಫೋಟಕ ವಸ್ತುಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, 19 ಜನರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಸೇನೆ, ಬಾಹ್ಯಾಕಾಶ ಮತ್ತು ವಾಣಿಜ್ಯ ಕೈಗಾರಿಕೆಗಳಿಗೆ ಸ್ಫೋಟಕ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಲ್ಲಿ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಮನೆಗಳೂ ನಡುಗಿದ್ದು, ಜನರು ಭಯಭೀತರಾಗಿದ್ದಾರೆ.
ಏನಾಯಿತು ಎಂದು ತಿಳಿಯದೆ ಎಲ್ಲೆಡೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಫೋಟದ ಭೀಕರತೆಯಿಂದಾಗಿ ಅಗ್ನಿಶಾಮಕ ಸಿಬ್ಬಂದಿಯೂ ಸಮಯಕ್ಕೆ ಸರಿಯಾಗಿ ಸ್ಥಳಕ್ಕೆ ತಲುಪಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿತ್ತು.
ಹಂಫ್ರೀಸ್ ಕೌಂಟಿ ಶೆರಿಫ್ ಕ್ರಿಸ್ ಡೇವಿಸ್ ಮಾತನಾಡಿ, ಇದು ವಿನಾಶಕಾರಿ ಸ್ಫೋಟ ಎಂದು ಬಣ್ಣಿಸಿದರು. ಘಟನೆ ಬೆಳಗಿನ ಸಮಯದಲ್ಲಿ ಸಂಭವಿಸಿದೆ ಎಂದು ಅವರು ತಿಳಿಸಿದರು. “ಅನೇಕ ಜನರ ಸುಳಿವು ಸಿಗುತ್ತಿಲ್ಲ, ಪ್ರಸ್ತುತ ಕೆಲವೇ ಜನರು ಮಾತ್ರ ಜೀವಂತವಾಗಿ ಸಿಕ್ಕಿದ್ದಾರೆ. ಉಳಿದವರೆಲ್ಲರೂ ಮೃತಪಟ್ಟಿರುವ ಸಾಧ್ಯತೆ ಇದೆ” ಎಂದು ಅವರು ಹೇಳಿದರು.
ಶುಕ್ರವಾರ ಬೆಳಿಗ್ಗೆ 7:45 ಕ್ಕೆ ಈ ದುರಂತ ಸಂಭವಿಸಿದೆ ಎಂದು ಅವರು ಮಾಹಿತಿ ನೀಡಿದರು. ಅಪಘಾತದ ನಂತರ ಕಟ್ಟಡವು ಸಂಪೂರ್ಣವಾಗಿ ಶಿಥಿಲಗೊಂಡಿರುವುದರಿಂದ, ಸ್ಫೋಟದ ತೀವ್ರತೆ ಎಷ್ಟಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ದುರಂತದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
https://x.com/MarioNawfal/status/1976690439366303808