ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳದ (KMF) ಪಶು ಆಹಾರ ಘಟಕದಲ್ಲಿ ಭಾರೀ ಗೋಲ್ಮಾಲ್ (Golmaal )ನಡೆದಿದೆ ಎಂಬ ಗಂಭೀರ ಆರೋಪ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಕಳಪೆ ಗುಣಮಟ್ಟದ ನಂದಿನಿ ಪಶು ಆಹಾರ ಸೇವನೆಯಿಂದಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬರೋಬ್ಬರಿ 1,600ಕ್ಕೂ ಅಧಿಕ ಹಸುಗಳು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದ್ದು, ಹೈನುಗಾರರು ಹಾಗೂ ರೈತ ಸಮುದಾಯದಲ್ಲಿ ತೀವ್ರ ಆತಂಕ ಹಾಗೂ ಆಕ್ರೋಶ ಮೂಡಿಸಿದೆ.
ಹೈನುಗಾರಿಕೆಯೇ ಗ್ರಾಮೀಣ ಭಾಗದ ರೈತರ ಪ್ರಮುಖ ಜೀವನಾಡಿಯಾಗಿದ್ದು, ಇವರು ಕೆಎಂಎಫ್ ಪೂರೈಸುವ ಪಶು ಆಹಾರವನ್ನು ನಂಬಿ ತಮ್ಮ ಜಾನುವಾರುಗಳಿಗೆ ನೀಡುತ್ತಿದ್ದರು.
ಆದರೆ, ಇತ್ತೀಚಿನ ದಿನಗಳಲ್ಲಿ ಈ ಕಳಪೆ ಆಹಾರವನ್ನು ಸೇವಿಸಿದ ಹಸುಗಳು ದಿಢೀರ್ ಅನಾರೋಗ್ಯಕ್ಕೆ ತುತ್ತಾಗುತ್ತಿವೆ. ಜೀರ್ಣಾಂಗ ವ್ಯವಸ್ಥೆ ಸಂಪೂರ್ಣವಾಗಿ ಹದೆಗೆಡುತ್ತಿದ್ದು, ಹಾಲು ಉತ್ಪಾದನಾ ಸಾಮರ್ಥ್ಯ ಕುಸಿದು ಕೊನೆಗೆ ಜಾನುವಾರುಗಳು ಪ್ರಾಣಬಿಡುತ್ತಿರುವುದು ದುರಂತದ ಸಂಗತಿಯಾಗಿದೆ.
ಈ ಅಕ್ರಮ ಮತ್ತು ಕಳಪೆ ಆಹಾರ ಸರಬರಾಜಿನ ಹಿಂದೆ ದೊಡ್ಡ ಮಟ್ಟದ ಲಾಭಕೋರತನ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವಿದೆ ಎಂದು ರೈತಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಆಹಾರ ತಯಾರಿಕೆಯಲ್ಲಿ ಕಳಪೆ ಧಾನ್ಯಗಳು ಹಾಗೂ ಹಾನಿಕಾರಕ ಪದಾರ್ಥಗಳನ್ನು ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ರೈತರು, ಈ ಅವ್ಯವಹಾರಕ್ಕೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರವು ಕೂಡಲೇ ಈ ಗಂಭೀರ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಅಲ್ಲದೆ, ನಷ್ಟಕ್ಕೊಳಗಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡ ಹೈನುಗಾರರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು. ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಸರ್ಕಾರಕ್ಕೆ ಕರಾರುವಾಕ್ ಎಚ್ಚರಿಕೆ ನೀಡಿದ್ದಾರೆ.
