ಅರುಣಾಚಲ ಪ್ರದೇಶದಲ್ಲಿ ಭೂಕುಸಿತಗಳು ತೀವ್ರ ವಿನಾಶವನ್ನು ಉಂಟುಮಾಡಿವೆ. ಪಶ್ಚಿಮ ಕಮೆಂಗ್ ಜಿಲ್ಲೆಯ ಸಪ್ಪರ್ ಕ್ಯಾಂಪ್ ಬಳಿಯ ದಿರಾಂಗ್-ತವಾಂಗ್ ರಸ್ತೆಯಲ್ಲಿ ಭಾರೀ ಪ್ರಮಾಣದ ಬಂಡೆಗಳು ಮತ್ತು ಮಣ್ಣು ಕುಸಿದು ಬಿದ್ದಿದೆ.
ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ವಾಹನಗಳ ಮೇಲೆ ದೊಡ್ಡ ಬಂಡೆಗಳು ಬಿದ್ದು ಹಲವು ವಾಹನಗಳು ಧ್ವಂಸವಾಗಿವೆ. ಭೂಕುಸಿತದಿಂದಾಗಿ ದಿರಾಂಗ್-ತವಾಂಗ್ ನಡುವಿನ 120 ಮೀಟರ್ ರಸ್ತೆ ಹಾಳಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಗುಡ್ಡದಿಂದ ಬಂಡೆಗಳು ಬೀಳುತ್ತಿರುವುದನ್ನು ಗಮನಿಸಿದ ಕೆಲವರು ತಮ್ಮ ಕಾರುಗಳಿಂದ ಇಳಿದು, “ಮೇಲಿಂದ ಏನೋ ಬೀಳುತ್ತಿದೆ, ಬೇಗ ಕಾರುಗಳನ್ನು ಹಿಂದಕ್ಕೆ ತೆಗೆದುಕೊಳ್ಳಿ, ಬ್ಯಾಕ್ ಮಾರು… ಬ್ಯಾಕ್ ಮಾರು… ಓ ಭಾಯ್, ಬ್ಯಾಕ್ ಕರೋ, ಬ್ಯಾಕ್” ಎಂದು ಕೂಗಾಡುತ್ತಾ ಓಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ.
“ಇನ್ನಷ್ಟು ಬರುತ್ತಿವೆ, ಬೇಗ ಹೋಗಿ, ಹೋಗಿ” ಎಂದು ಇನ್ನೊಬ್ಬರು ಕೂಗುವುದು ಕೇಳಿಸುತ್ತದೆ. ಕೆಲವು ವಾಹನಗಳ ಮೇಲೆ ಬಂಡೆಗಳು ಮತ್ತು ಮಣ್ಣು ಬಿದ್ದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ಪ್ರಸ್ತುತ, ರಸ್ತೆಯ ಪುನಃಸ್ಥಾಪನೆ ಕಾರ್ಯಗಳು ಭರದಿಂದ ಸಾಗುತ್ತಿವೆ. ಬುಧವಾರದಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡುವ ಸಾಧ್ಯತೆ ಇದೆ.
https://x.com/Dhruv_Axom/status/1960149292594979042