1930 ರ ದಶಕದಲ್ಲಿ, ಔಂಧ್‌ನ ಅರಸ ಬಾಳಾಸಾಹೇಬ್ ಪಂತ್ ಪ್ರತಿನಿಧಿಯವರು, ಮಹಾತ್ಮ ಗಾಂಧಿಯವರ ಜೊತೆಗೂಡಿ ರಚಿಸಿದ ಸಂವಿಧಾನದ ಅಡಿಯಲ್ಲಿ 'ತನ್ನ ಪ್ರಜೆಗಳಿಗೆ ಸಂಪೂರ್ಣ ಸ್ವಯಂ ಆಡಳಿತ'ವನ್ನು ನೀಡಿದರು - ಅನು ಕುಮಾರ್
ಅಗಸ್ಟ್ 11, 1940 ರಂದು ಮಹಾತ್ಮಾ ಗಾಂಧಿಯವರು ತಮ್ಮ ವಾರಪತ್ರಿಕೆ ಹರಿಜನ್‌ನಲ್ಲಿ ಒಂದು ಸಣ್ಣ ಲೇಖನವನ್ನು ಬರೆದರು. ಒಂದು ಪ್ರಾಂತ್ಯವನ್ನೂ, ಅದರ ಅರಸನನ್ನೂ ಹೊಗಳುತ್ತಾ ಲೇಖನವನ್ನು ಆರಂಭಿಸುತ್ತಾರೆ…. “ಚಿಕ್ಕ ಔಂಧ್ ಯಾರಿಗೂ ಗೊತ್ತಿಲ್ಲವೇ? ಅದರ ಗಾತ್ರ ಮತ್ತು ಸಂಪತ್ತು ಸಣ್ಣದಿರಬಹುದು, ಆದರೆ ಅದರ ಮುಖ್ಯಸ್ಥನು ತನ್ನ ಜನರಿಗೆ ಪೂರ್ಣ ಸ್ವರಾಜ್ಯದ ವರವನ್ನು ನೀಡುವ ಮೂಲಕ ಅದು ತನ್ನನ್ನು ತಾನು ಶ್ರೇಷ್ಠ ಮತ್ತು ಪ್ರಸಿದ್ಧನನ್ನಾಗಿ ಮಾಡಿಕೊಂಡಿದ್ದಾನೆ.”
ಗಾಂಧಿಯವರು ಔಂಧ್ ರಾಜಪ್ರಭುತ್ವದ ಅರಸನ ಪ್ರಮುಖ ನಿರ್ಧಾರವನ್ನು ಉಲ್ಲೇಖಿಸುತ್ತಾರೆ. ನವೆಂಬರ್ 1938 ರಲ್ಲಿ, ಬಾಳಾಸಾಹೇಬ್ ಪಂತ್ ಪ್ರತಿನಿಧಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಭವನರಾವ್ ಶ್ರೀನಿವಾಸರಾವ್ ಪಂತ್ ಪ್ರತಿನಿಧಿಯು “ತನ್ನ ಪ್ರಜೆಗಳಿಗೆ ಪೂರ್ಣ ಸ್ವಯಂ ಆಡಳಿತ”ವನ್ನು ನೀಡಿದ್ದರು.
ಈ ಬದಲಾವಣೆಯನ್ನು ಜಾರಿಗೆ ತರಲು, ಗಾಂಧಿ, ಬಾಳಾಸಾಹೇಬರ ಮಗ ಅಪ್ಪಾಸಾಹೇಬ್ ಪಂತ್ ಮತ್ತು ಪಾಲಿಷ್-ಯಹೂದಿ ಮೂಲದ ಮಿಸ್ಟಿಕ್-ಎಂಜಿನಿಯರ್ ಮೌರಿಸ್ ಫ್ರೈಡ್‌ಮನ್ ಅವರು ಔಂಧ್‌ಗಾಗಿ ಒಂದು ರಾಜ್ಯ ಸಂವಿಧಾನವನ್ನು ರಚಿಸಿದರು. ಇದನ್ನು ಜನವರಿ 14, 1939 ರಂದು ಜಾರಿಗೆ ತರಲಾಯಿತು.
ಸುಮಾರು ನಾಲ್ಕು ಪುಟಗಳ ಈ ಸಂವಿಧಾನವು ಆಳವಾದ ಪ್ರಗತಿಪರ ಚಿಂತನೆಯನ್ನು ಒಳಗೊಂಡಿದ್ದ ದಾಖಲೆಯಾಗಿತ್ತು. ಇದು ಔಂಧ್ ಜನರಿಗೆ ತಾರತಮ್ಯ ರಹಿತ ಮತ್ತು ಸಾರ್ವತ್ರಿಕ ಮತ್ತು ಉಚಿತ ಪ್ರಾಥಮಿಕ ಶಿಕ್ಷಣವನ್ನು ಭರವಸೆ ನೀಡುವುದರ ಜೊತೆಗೆ ವಾಕ್, ಪತ್ರಿಕಾ, ಸಭೆ ಮತ್ತು ಪೂಜಾ ಸ್ವಾತಂತ್ರ್ಯಗಳನ್ನು ಖಾತರಿಪಡಿಸಿತು. ಎಲ್ಲಕ್ಕಿಂತ ಮುಖ್ಯವಾಗಿ, ಇದು ಅಧಿಕಾರವನ್ನು ವಿಕೇಂದ್ರೀಕರಿಸಿತು.
ರಾಜ್ಯ ಸಂವಿಧಾನವು ಶ್ರೇಣೀಕೃತ ಆಡಳಿತ ವ್ಯವಸ್ಥೆಯೊಂದಿಗೆ ಗಾಂಧಿಯವರ ಹೃದಯಕ್ಕೆ ಪ್ರಿಯವಾದ ಗ್ರಾಮ ಪ್ರಜಾಪ್ರಭುತ್ವವನ್ನು ಸ್ಥಾಪಿಸಿತು. ಇದರಲ್ಲಿ ಐದು ಸದಸ್ಯರ ಗ್ರಾಮ ಪಂಚಾಯತ್‌ಗಳು, ತಾಲೂಕು ಪಂಚಾಯತ್‌ಗಳು ಮತ್ತು ಪಂಚಾಯತ್ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಮತ್ತು ಆಡಳಿತಗಾರರಿಂದ ನಾಮನಿರ್ದೇಶಿತರಾದ ಐದು ಜನರನ್ನು ಒಳಗೊಂಡ ಸಭೆ ಇತ್ತು.

ಈ ಸುಧಾರಣೆಯನ್ನು ಮೆಚ್ಚಿದ ಗಾಂಧಿ ತಮ್ಮ ಹರಿಜನ್ ನಿಯತಕಾಲಿಕೆಯಲ್ಲಿ ಹೀಗೆ ಬರೆಯುತ್ತಾರೆ: “ಈ ಸಣ್ಣ ರಾಜ್ಯವು ಪ್ರಗತಿಪರವಾಗಿದೆ. ಔಂಧ್‌ನ ಆಡಳಿತಗಾರನು ತನ್ನ ಜನರ ಅಗತ್ಯಗಳನ್ನು ನಿರೀಕ್ಷಿಸಿದ್ದಾನೆ ಮತ್ತು ಸಾಮಾಜಿಕ ವಿಚಾರಗಳಲ್ಲಿಯೂ ಅವರಿಗಿಂತ ಆತ ಮುಂದಿದ್ದಾನೆ. ಸಂಪೂರ್ಣ ಜವಾಬ್ದಾರಿಯ ಘೋಷಣೆಯು ಆಡಳಿತಗಾರನ ಹಿಂದಿನ ಕಾರ್ಯಗಳ ಸ್ವಾಭಾವಿಕ ಪರಿಣಾಮವಾಗಿದೆ.”
1910 ರಲ್ಲಿ ಬಾಳಾಸಾಹೇಬರ ಪ್ರವೇಶ ಅನಿರೀಕ್ಷಿತವಾಗಿತ್ತು. ಮರಾಠಾ ಸಾಮ್ರಾಜ್ಯದ ಅವಶೇಷಗಳಿಂದ ರೂಪುಗೊಂಡ ಸಣ್ಣ ರಾಜ್ಯವಾದ ಔಂಧ್, 1849 ರಲ್ಲಿ ಪೇಶ್ವೆಯ ಸೋಲಿನ ನಂತರ ಬ್ರಿಟಿಷ್ ನಿಯಂತ್ರಣಕ್ಕೆ ಬಂದಿತು. 20 ನೇ ಶತಮಾನದ ಆರಂಭದ ವೇಳೆಗೆ ಇದು ಛಿದ್ರವಾಗಿ, ಸತಾರಾ ಮತ್ತು ಬಿಜಾಪುರದ ಹಳ್ಳಿಗಳು ಬ್ರಿಟಿಷ್ ಆಡಳಿತದ ಭೂಮಿಯಲ್ಲಿ ಹರಡಿಕೊಂಡವು.
1907 ರಲ್ಲಿ, ಬಾಳಾಸಾಹೇಬರ ಚಿಕ್ಕಪ್ಪ ಮತ್ತು ಆಗಿನ ಆಡಳಿತಗಾರ ಗೋಪಾಲಕೃಷ್ಣರಾವ್ ಪರಶುರಾಮ್ (ನಾನಾಸಾಹೇಬ) ಅವರನ್ನು ಬ್ರಿಟಿಷರು ನೇಮಿಸಿದ ಖರ್ಬರಿ (ಪ್ರಧಾನಿ) ಜಾಕೋಬ್ ಬಾಪೂಜಿಯವರ ಹತ್ಯೆಯ ಪಿತೂರಿಯಲ್ಲಿ ಭಾಗಿಯಾಗಿದ್ದರು. ಆಡಳಿತಗಾರನ ಇಬ್ಬರು ಸಹಚರರು ಮತ್ತು ಜೈಲು ವಾರ್ಡನ್ ಕೂಡ ಆರೋಪಿಗಳಾಗಿದ್ದರು. ತನಿಖಾ ಅಧಿಕಾರಿ ಆರ್ಸೆನಿಕ್ ವಿಷದಿಂದ (ಸಂಕಪಾಷಾಣ) ಸಾವನ್ನಪ್ಪಿದ್ದು ಪ್ರಕರಣದ ನಿಗೂಢತೆಯನ್ನು ಮತ್ತಷ್ಟು ಹೆಚ್ಚಿಸಿತು. ನಾನಾಸಾಹೇಬನನ್ನು ಬಲವಂತವಾಗಿ ಸಿಂಹಾಸನ ಕಿತ್ತೆಸಯಲಾಯಿತು. ಎರಡು ವರ್ಷಗಳ ಮಧ್ಯಂತರ ಆಡಳಿತದ ನಂತರ, ಆಗ 43 ವರ್ಷದ ಬಾಳಾಸಾಹೇಬ ಪ್ರತಿನಿಧಿ ಅಥವಾ ಆಡಳಿತಗಾರನಾದರು.
ಪೂನಾದ ಡೆಕ್ಕನ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಬಾಳಾಸಾಹೇಬ್ ಪದವಿ ಪಡೆದ ಕೆಲವೇ ಕೆಲವು ಭಾರತೀಯ ರಾಜಕುಮಾರರಲ್ಲಿ ಒಬ್ಬರಾಗಿದ್ದರು. ಅವರ ಗುರುಗಳಾದ ಇತಿಹಾಸಕಾರ ಮತ್ತು ಸುಧಾರಕ ರಾಮಕೃಷ್ಣ ಗೋಪಾಲ್ ಭಂಡಾರ್ಕರ್ ಅವರ ಮೇಲೆ ಶಾಶ್ವತವಾದ ಪ್ರಭಾವ ಬೀರಿದರು. ಭಂಡಾರ್ಕರ್ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಮೊದಲ ಸಭೆಗಳಲ್ಲಿ ಒಂದರಲ್ಲಿ, ಬಾಳಾಸಾಹೇಬ್ ಜನಪ್ರಿಯ ಸಚಿತ್ರ ಮಹಾಭಾರತವನ್ನು ನಿರ್ಮಿಸಲು 1 ಲಕ್ಷ ರುಪಾಯಿಗಳನ್ನು ದೇಣಿಗೆಯಾಗಿ ನೀಡಿದರು.
ಇದು 1916 ರಲ್ಲಿ ಪ್ರಕಟವಾದ ಚಿತ್ರ ರಾಮಾಯಣ ( ಇಲ್ಲಸ್ಟ್ರೇಟೆಡ್ ರಾಮಾಯಣ ) ವಿಶೇಷವಾಗಿ ಬಾಳಾಸಾಹೇಬರ ವರ್ಣ ಚಿತ್ರಗಳಿಗಾಗಿ ವ್ಯಾಪಕವಾಗಿ ಖ್ಯಾತಿಯನ್ನು ಪಡೆಯಿತು. ಇಲ್ಲಸ್ಟ್ರೇಟೆಡ್ ಲಂಡನ್ ನ್ಯೂಸ್ ಇದನ್ನು ಬ್ರಿಟಿಷ್ ಓದುಗರಿಗೆ ಮಾಡಿದ ಮಹಾಕಾವ್ಯದ “ಆದರ್ಶ ಪರಿಚಯ” ಎಂದು ಕರೆದಿದೆ: “ಇದು ಅತ್ಯಂತ ಸರಳತೆವಾಗಿದೆ, ಮತ್ತು ಚಿತ್ರಗಳು ಹಾಗೂ ನಿರೂಪಣೆ ಎರಡರಲ್ಲೂ ನಿಜವಾದ ಭಾರತೀಯತೆಯನ್ನು ಹೊಂದಿದೆ.” ಬ್ರಿಟಿಷ್ ಆಡಳಿತಗಾರ ಮತ್ತು ಬಾಳಾಸಾಹೇಬರ ಮಿತ್ರ ಚಾರ್ಲ್ಸ್ ಕಿನ್‌ಕೈಡ್ ಇದಕ್ಕೆ ಬರೆದ ಮುನ್ನುಡಿಯಲ್ಲಿ ಬರೆದಿದ್ದಾರೆ:
"ರಾಮಾಯಣವು ಈಗ ಹೊಸ ರೂಪದಲ್ಲಿ ನಮ್ಮ ಮುಂದೆ ಬರುತ್ತಿದೆ, ನಾವು ತಿಳಿದಿರುವ ಮತ್ತು ಪ್ರೀತಿಸುವ ಭಾರತದ ಮೇಲೆ ಮಂದ ಭೂತಕಾಲದ ಪ್ರಭಾವವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ. ತನ್ನ ಜನರ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಎಲ್ಲರಿಗೂ ಅಗತ್ಯವಿರುವ ಜ್ಞಾನ ಇದು. ತಿಳುವಳಿಕೆ ಇಲ್ಲದೆ ನಿಜವಾದ ಸಹಾನುಭೂತಿ ಬರುವುದಿಲ್ಲ."
ಆಮೂಲಾಗ್ರ ಪರಿವರ್ತನೆ
ಔಂಧ್‌ನಲ್ಲಿ ಪ್ರತಿನಿಧಿ ಸರ್ಕಾರದ ಬೇರುಗಳು 1920 ರ ದಶಕದಷ್ಟು ಹಿಂದಿನವು. ಅಪ್ಪಾಸಾಹೇಬ್ ಪಂತ್ ಅವರು ಇಂದಿರಾ ರೋಥರ್‌ಮಂಡ್ ಅವರ ದಿ ಔಂಧ್ ಎಕ್ಸ್‌ಪರಿಮೆಂಟ್ (1983) ಗೆ ಬರೆದ ಮುನ್ನುಡಿಯಲ್ಲಿ, ರಾಜನಿಗೆ ಸಲಹೆ ನೀಡಲು 1923 ರಲ್ಲಿ ರಚಿಸಲಾದ ಶಾಸಕಾಂಗ ಮಂಡಳಿಯಾದ ರಾಯತ್ ಸಭೆಯು ಕ್ರಮೇಣ ಹೇಗೆ ಸಬಲೀಕರಣಗೊಂಡಿತು ಎಂಬುದನ್ನು ನೆನಪಿಸಿಕೊಳ್ಳುತ್ತಾರೆ.
1935 ರ ಹೊತ್ತಿಗೆ, ಸಭೆಯ ಸದಸ್ಯರೊಬ್ಬರನ್ನು ಪ್ರಾಥಮಿಕ ಶಿಕ್ಷಣ, ಆರೋಗ್ಯ ಮತ್ತು ಕೃಷಿ ಸುಧಾರಣೆಗಳ ಸಚಿವರನ್ನಾಗಿ ನೇಮಿಸಲಾಯಿತು. ಇದರ ಜೊತೆಗೆ, ಅವರನ್ನು ರಾಜ ಮತ್ತು ದಿವಾನರೊಂದಿಗೆ ಮೂvರು ಸದಸ್ಯರ ಆಡಳಿತ ತಂಡದ ಭಾಗವಾಗಿ ಮಾಡಲಾಯಿತು.
1927 ರಲ್ಲಿ, ಬಾಳಾಸಾಹೇಬ್ ಒಂದು ಆಮೂಲಾಗ್ರ ಪ್ರಸ್ತಾಪವನ್ನು ಮುಂದಿಟ್ಟರು: ಅವರು ಸರ್ಕಾರ ಮತ್ತು ಅವರ ವೈಯಕ್ತಿಕ ಬಜೆಟ್ ಎರಡನ್ನೂ ಪರಿಷತ್ತಿನ ನಿಯಂತ್ರಣದಲ್ಲಿ ಇರಿಸಿದರು. “ಭಾರತೀಯ ರಾಜಕುಮಾರರಲ್ಲಿ ಅನೇಕರ ಕೈಯಲ್ಲಿದ್ದ ಬೃಹತ್ ಖಾಸಗಿ ಆದಾಯ ಮತ್ತು ಅವರ ವೈಯಕ್ತಿಕ ದುಂದುವೆಚ್ಚಗಳ” ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದ ಸಮಯದಲ್ಲಿ ಇಂತಹ ಕ್ರಮವು ಬಲವಾದ ಸಾರ್ವಜನಿಕ ಪ್ರಭಾವ ಬೀರಿತು ಎಂದು ಚಿಕಾಗೋ ಪತ್ರಿಕೆಯ ಡೈಲಿ ಹೆರಾಲ್ಡ್ ವರದಿ ಮಾಡಿದೆ.
ಬಾಳಾಸಾಹೇಬ್ ಕೇವಲ ಕಲೆಗಳ ಪ್ರಗತಿಪರ ಪೋಷಕನಾಗಿರಲಿಲ್ಲ: ಅವರು ದೂರದೃಷ್ಟಿಯುಳ್ಳವರಾಗಿದ್ದರು, ಸ್ವದೇಶಿ ಮತ್ತು ಸ್ವಾವಲಂಬನೆಯ ಬಗ್ಗೆ ಅವರಿಗಿದ್ದ ಬದ್ಧತೆಯ ಕಾರಣದಿಂದಾಗಿ ಸ್ಥಳೀಯ ಕೈಗಾರಿಕೆಗಳನ್ನು ಪ್ರೋತ್ಸಾಹಿಸಿದರು. ಮೂಢನಂಬಿಕೆಯ ಪರಿಣಾಮವಾಗಿ ರೈತರು ಆರಂಭದಲ್ಲಿ ತೋರಿದ ಪ್ರತಿರೋಧದ ಹೊರತಾಗಿಯೂ ಬಾಳಾಸಾಹೇಬ್ ಅವರು ಕಬ್ಬಿಣದ ನೇಗಿಲುಗಳ ಕಾರ್ಖಾನೆಯನ್ನು ಸ್ಥಾಪಿಸಲು ಲಕ್ಷ್ಮಣರಾವ್ ಕಿರ್ಲೋಸ್ಕರ್ ಅವರಿಗೆ ಬೆಂಬಲವನ್ನು ನೀಡಿದರು. ನಂತರ ಕಿರ್ಲೋಸ್ಕರ್ ಶ್ರೀಪಾದ ಪ್ರಭಾಕರ್ ಒಗಲೆ ಮತ್ತು ಅವರ ಸಹೋದರರು ಕಿರ್ಲೋಸ್ಕರ್ವಾಡಿಯಲ್ಲಿ ಗಾಜಿನ ಕೆಲಸ ಕಾರ್ಖಾನೆಯನ್ನು ಸ್ಥಾಪಿಸಲು ಸಹಾಯ ಮಾಡಿದರು.
ಬಾಳಾಸಾಹೇಬರ ಮತ್ತೊಬ್ಬ ಸ್ನೇಹಿತ ವಾಜಿರಾವ್ ರಾಮರಾವ್ ಗುತ್ತಿಕರ್, ಮಹಿಳೆಯರಿಗೆ ಕೆಲಸ ಸುಲಭವಾಗಲಿ ಎಂದು ಮಲ್ಟಿ-ಡಿಶ್ ಕುಕ್ಕರ್ ಅನ್ನು ಕಂಡುಹಿಡಿದರು – ಇದು ಇನ್ಸ್ಟಾಂಟ್ ಪಾಟ್ ನ ಆರಂಭದ ರೂಪವಾಗಿತ್ತು – ಆದರೆ ಅದು ಜನಪ್ರಿಯವಾಗಲಿಲ್ಲ.
1932 ರಲ್ಲಿ, ಚಿಕಾಗೋ ಟ್ರಿಬ್ಯೂನ್ ಮಾಡಿದ ವರದಿ ಪ್ರಕಾರ, ಔಂಧ್‌ನಲ್ಲಿ ಭಾರತದ ಮೊದಲ ಗ್ಲೈಡರ್ಸ್ ಅಸೋಸಿಯೇಷನ್ ಪ್ರಾರಂಭವಾಯಿತು. ಇದಕ್ಕೆ ಬಾಳಾಸಾಹೇಬ್ ಮೊದಲ ಎಂಟು ಮೋಟಾರ್ ರಹಿತ ಏರ್‌ಕ್ರಾಫ್ಟ್‌ಗಳನ್ನು ದಾನ ಮಾಡಿದರು. ಸ್ವದೇಶಿ ಪ್ರತಿಪಾದಕರಾಗಿದ್ದರೂ, ಅವರು ಮತ್ತು ಅವರ ಸಹಚರರು ಆಧುನಿಕ ಸಂಶೋಧನೆಗಳ ಬಗ್ಗೆ ಅತೀವ ಉತ್ಸಾಹವನ್ನು ಹೊಂದಿದ್ದರು. ಅಕ್ಟೋಬರ್ 1927 ರಲ್ಲಿ ಕಿರ್ಲೋಸ್ಕರ್ ಖಬರ್, ಚಾರ್ಲ್ಸ್ ಲಿಂಡ್‌ಬರ್ಗ್ ಅವರ ಐತಿಹಾಸಿಕ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟದ ನಂತರ “ಮಿಸ್ ಇಂಡಿಯಾ” ಅವರನ್ನು “ಅಂಕಲ್ ಸ್ಯಾಮ್” ಅಭಿನಂದಿಸುವ ವ್ಯಂಗ್ಯಚಿತ್ರವನ್ನು ಪ್ರಕಟಿಸಿತ್ತು.
ಬಾಳಾಸಾಹೇಬ್ ಅವರ ದೈಹಿಕ ಸದೃಢತೆ
1938 ರಲ್ಲಿ, ಬಾಳಾಸಾಹೇಬ್ ಅವರು ಭಾರತೀಯ ಮತ್ತು ಯುರೋಪಿಯನ್ ಕೃತಿಗಳನ್ನು ಪ್ರದರ್ಶಿಸುವ ಕಲಾ ವಸ್ತುಸಂಗ್ರಹಾಲಯವಾದ ಶ್ರೀ ಭವಾನಿ ಸಂಗ್ರಹಾಲಯವನ್ನು ತೆರೆದರು. ಆ ವರ್ಷ ಲಂಡನ್‌ನಲ್ಲಿ ಜೆ.ಎಂ. ಡೆಂಟ್ ಪ್ರಕಟಿಸಿದ ಹತ್ತು ಹಂತದ ಯೋಗ ಪದ್ಧತಿಯಾದ ಸೂರ್ಯ ನಮಸ್ಕಾರದ ಕುರಿತಾದ ಅವರ ಪುಸ್ತಕದ ನಾಲ್ಕನೇ ಆವೃತ್ತಿಯನ್ನು ಸಹ ಬಿಡುಗಡೆಯಾಯಿತು. ಅದಕ್ಕೆ ಮುನ್ನುಡಿಯನ್ನು ಬರೆದವರು ಪತ್ರಕರ್ತೆ ಲೂಯಿಸ್ ಮಾರ್ಗನ್ ಸಿಲ್.
ಬಾಳಾಸಾಹೇಬರನ್ನು ಭೇಟಿಯಾದಾಗ ತಾನು ಕಂಡ ಅಚ್ಚರಿಯನ್ನು ಮಾರ್ಗನ್ ನೆನಪಿಸಿಕೊಳ್ಳುತ್ತಾಳೆ. ಆಕೆ ಈ ಬಾಳಾಸಾಹೇಬರನ್ನು 70 ವರ್ಷದ ನರಪೇತಲ ಮನುಷ್ಯ ಇರಬಹುದು ಎಂದುಕೊಂಡಿದ್ದಳು, ಆದರೆ ಆಕೆ ಕಂಡಿದ್ದು ಒಬ್ಬ “ಯೌವನದ ಚುರುಕಾದ, ಮೃದು ನಡಿಗೆಯ, ಯುವಕನಂತೆ ಹೊಳೆಯುವ ಕಣ್ಣುಗಳು, ಬಲವಾದ, ಅದ್ಭುತವಾದ ಬಿಳಿ ಹಲ್ಲುಗಳು, ಸದೃಢವಾದ ಸ್ನಾಯುಗಳು, ಕಾಂತಿಯುತ ನಗು ಮತ್ತು ಬೇಸಿಗೆಯ ಮಿಂಚಿನಂತೆ ಕೆಲಸ ಮಾಡುವ ಮನಸ್ಸು ಹೊಂದಿರುವ ವ್ಯಕ್ತಿಯನ್ನು..”
ಗಾಂಧಿವಾದಿ ಯೋಗ ವಿದ್ವಾಂಸರಾದ ಶ್ರೀಪಾದ ದಾಮೋದರ್ ಸತ್ವಲೇಕರ್ ಅವರ ಮಾರ್ಗದರ್ಶನದಲ್ಲಿ ಬಾಳಾಸಾಹೇಬ್ ಶಾಲೆಗಳಲ್ಲಿ ಮತ್ತು ನಾಗರಿಕರಲ್ಲಿ ಸೂರ್ಯ ನಮಸ್ಕಾರವನ್ನು ಪ್ರಚಾರ ಮಾಡಿದರು. ಇದು ಬಾಳಾಸಾಹೇಬ್ ಅವರ ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ವಾವಲಂಬಿ ಜನತೆಯನ್ನು ಬೆಳೆಸುವ ವಿಶಾಲ ದೃಷ್ಟಿಕೋನವನ್ನು ತೋರಿಸುತ್ತದೆ.
ಔಂಧ್‌ನ ಜನರು ದೈಹಿಕವಾಗಿ ಸದೃಢರಾಗಬೇಕೆಂದು ಅವರು ಬಯಸಿದಂತೆಯೇ, ಅವರಲ್ಲಿ ಸೌಂದರ್ಯದ ಅರಿವು ಕೂಡ ಇರಬೇಕೆಂದು ಬಾಳಾಸಾಹೇಬ್ ಬಯಸಿದ್ದರು.
ಇತಿಹಾಸಕಾರ ದೀಪ್ತಿ ಮುಲ್ಗುಂದ್ ಅವರ ಪ್ರಕಾರ, ಅವರ ಶ್ರೀ ಭವಾನಿ ಸಂಗ್ರಹಾಲಯವು ಮಧ್ಯಕಾಲೀನ ಚಿಕಣಿ ಚಿತ್ರಗಳು, ಬಂಗಾಳ ಶಾಲೆಯ ವರ್ಣಚಿತ್ರಗಳು ಮತ್ತು ಪಾಶ್ಚಿಮಾತ್ಯ ಕಲಾಕೃತಿಗಳು ಮತ್ತು ಪಾತ್ರವರ್ಗಗಳನ್ನು ಒಳಗೊಂಡಂತೆ ಭಾರತೀಯ ಹಾಗೂ ಪಾಶ್ಚಿಮಾತ್ಯ ಕಲೆಗಳ ಮಿಶ್ರಣದ ಮೂಲಕ ಸೌಂದರ್ಯದ ಅರಿವನ್ನು ಬೆಳೆಸಿತು. ಹೆನ್ರಿ ಮೂರ್ ಕೆತ್ತಿದ ತಾಯಿ ಮತ್ತು ಮಗುವಿನ ಮೂರ್ತಿಯನ್ನು ಅಪ್ಪಾಸಾಹೇಬ್ ಪಂತ್ ಅವರು ಆ ಕಲಾವಿದ ಇನ್ನೂ ಜನಪ್ರಿಯನಾಗಿರದ ಕಾಲದಲ್ಲಿಯೇ ಖರೀದಿಸಿದ್ದರು.
1936 ರಲ್ಲಿ ಬ್ರಿಟನ್‌ಗೆ ಭೇಟಿ ನೀಡಿದಾಗ, ಬಾಳಾಸಾಹೇಬ್ ಸೂರ್ಯ ನಮಸ್ಕಾರ ಮತ್ತು ಕಲೆ ಎರಡನ್ನೂ ಪ್ರಚಾರ ಮಾಡಿದರು. ಕಲೆಯ ಕುರಿತು ಉಪನ್ಯಾಸಗಳನ್ನು ನೀಡಿದರು, ಕೃಷಿ ಮತ್ತು ಡೈರಿ ಉಪಕರಣಗಳನ್ನು ತಯಾರಿಸುವ ಕೈಗಾರಿಕೆಗಳಿಗೆ ಭೇಟಿ ನೀಡಿದರು. ತಮ್ಮ ಕುಟುಂಬ ಮತ್ತು ಸ್ನೇಹಿತರು ಸೂರ್ಯ ನಮಸ್ಕಾರವನ್ನು ಪ್ರದರ್ಶಿಸುವ ಚಲನಚಿತ್ರವನ್ನು ಪ್ರದರ್ಶಿಸಿದರು. ಆ ಚಲನಚಿತ್ರವನ್ನು YouTube ನಲ್ಲಿ ನೋಡಬಹುದು.
ಜುಲೈ 12, 1936 ರಂದು ಬಾಲಾಸಾಹೇಬ್ ಬಗ್ಗೆ ಸಂಡೇ ಪೀಪಲ್ ಹೀಗೆ ಹೇಳಿದೆ: “ಔಂಧ್‌ನ ಬಿಳಿ ಕೂದಲಿನ ರಾಜನು ಎಲ್ಲಾ ರಹಸ್ಯಗಳಲ್ಲಿ ಶ್ರೇಷ್ಠವಾದ ಶಾಶ್ವತ ಯೌವನವನ್ನು ಕಂಡುಹಿಡಿದಿದ್ದೇನೆ ಎಂದು ಹೇಳಿಕೊಳ್ಳುತ್ತಾನೆ.” ಕೆಲವು ತಮಾಷೆಯ ಮಾತುಗಳೆಂದರೆ “ಈ ರಾಜನು ದೋಣಿಗಳು, ರೈಲುಗಳು ಮತ್ತು ಕಾರುಗಳಲ್ಲಿಯೂ ಸಹ ತನ್ನ ಅನುಯಾಯಿಗಳಿಗೆ ಆಳವಾದ ಉಸಿರಾಟದ ಅಭ್ಯಾಸವನ್ನು (ಪ್ರಣಾಯಾಮ) ಬಿಡದೆ ಮಾಡಿಸುತ್ತಿದ್ದನು.”
ಸುಮಾರು ಒಂದು ದಶಕದ ಕಾಲ, 1947 ರಲ್ಲಿ ಭಾರತೀಯ ಒಕ್ಕೂಟಕ್ಕೆ ಸೇರುವವರೆಗೆ, ಔಂಧ್ ತಾನೇ ರಚಿಸಿದ ಸಂವಿಧಾನದ ಪ್ರಕಾರ ತನ್ನನ್ನು ತಾನು ಆಳಿಕೊಂಡಿತು. ಬಾಳಾಸಾಹೇಬ್ 1951 ರಲ್ಲಿ 84 ನೇ ವಯಸ್ಸಿನಲ್ಲಿ ನಿಧನರಾದರು.
ಅವರ ಮಗ ಅಪ್ಪಾಸಾಹೇಬ್ ಪಂತ್ ಒಬ್ಬ ಪ್ರಖ್ಯಾತ ಭಾರತೀಯ ರಾಜತಾಂತ್ರಿಕ. ಔಂಧ್‌ನ ಪ್ರಯೋಗದ ನಿರಂತರ ಪರಂಪರೆಯ ಬಗ್ಗೆ ಅವರು ಹೀಗೆ ಬರೆಯುತ್ತಾರೆ:
"ತನ್ನ ಅಧಿಕಾರ ಮತ್ತು ಸಂಪತ್ತನ್ನು ತ್ಯಜಿಸುವ ಮೂಲಕ, ರಾಜನು 'ಸಾಂವಿಧಾನಿಕವಾಗಿ' ಔಂಧ್ ಜನರ 'ಮೊದಲ ಸೇವಕ'ನಾಗಿ ಮತ್ತು ಅವರ ಆತ್ಮಸಾಕ್ಷಿಯ ರಕ್ಷಕನಾಗಿ ಬದಲಾಗಿದ್ದನು. ಈ ಘೋಷಣೆಯೊಂದಿಗೆ ವ್ಯಕ್ತಿಯೊಂದಿಗಿನ ಅಧಿಕಾರದ ಸಂಬಂಧ, ಅಧಿಕಾರದ ಶ್ರೇಣಿಯು ಬದಲಾಯಿತು; ಇದು ಔಂಧ್‌ನ ಗ್ರಾಮಗಳಲ್ಲಿ ಪ್ರಜಾಪ್ರಭುತ್ವದ ಯಶಸ್ವಿ ಕಾರ್ಯನಿರ್ವಹಣೆಗೆ ಬೀಗ ತೆರೆದ ಕೀಲಿಯಾಗಿತ್ತು. ಅಧಿಕಾರ ಸೃಷ್ಟಿಸುವ ಭಯವಿರುವವರೆಗೆ ಅಥವಾ ಅದರ ಬಗ್ಗೆ ಒಲವು ಇರುವ, ಪ್ರಜಾಪ್ರಭುತ್ವವು ಕಾರ್ಯನಿರ್ವಹಿಸಲಾರದು: ಇದು ಔಂಧ್ ಪ್ರಯೋಗದ ಸಂದೇಶವಾಗಿದೆ."
(ಇದು ಸ್ಕ್ರಾಲ್.ಇನ್‌ನಲ್ಲಿ ಪ್ರಕಟವಾದ ಅನು ಕುಮಾರ್ ಅವರ The Indian raja who gave away his powers to the praja ಲೇಖನದ ಕನ್ನಡಾನುವಾದ)