“2028ರಲ್ಲಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂಬ ವಿಶ್ವಾಸ ನಮಗಿದೆ. ಕುಮಾರಣ್ಣ ನಾನು ಪರಮೇಶ್ವರ ಅವರು ನಿಮ್ಮನ್ನು ಮುಖ್ಯಮಂತ್ರಿ ಮಾಡಲು ಮುಂದಾದೆವು. ಆಗ ಸಿದ್ದರಾಮಯ್ಯನವರು ಬಂದು 38 ಶಾಸಕರಿದ್ದ ನಿನ್ನನ್ನು ಮುಖ್ಯಮಂತ್ರಿ ಮಾಡಲು 82 ಶಾಸಕರಿದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬರೆದುಕೊಟ್ಟಿದ್ದೆವು. ನಿನಗೆ ಉಪಕಾರ ಸ್ಮರಣೆ ಇರಬೇಕು. ನಿಮ್ಮ ಆಸ್ತಿ ವಿವರಗಳ ಬಗ್ಗೆ ಸರ್ಕಾರ ಜಮೀನು ಕಬಳಿಕೆ ಬಗ್ಗೆ ನೀನೇ ಮನಬಿಚ್ಚಿ ಮಾತಾನಾಡಬೇಕು ಎಂದು ಮನವಿ ಮಾಡುತ್ತೇನೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಇಂದು ಕಾಂಗ್ರೆಸ್ ಪಕ್ಷ ಬಿಜೆಪಿಯ ಪಾದಯಾತ್ರೆಗೆ ಪರ್ಯಾಯವಾಗಿ ಹಮ್ಮಿಕೊಂಡಿದ್ದ ಜನಾಂದೋಲನ ಸಭೆಯ ಮೊದಲ ದಿನ, ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಬಿಜೆಪಿ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ “ಈ ಜನಾಂದೋಲನ ಸಭೆಯನ್ನು ನಾಳೆ ರಾಮನಗರ, ನಾಡಿದ್ದು ಚನ್ನಪಟ್ಟಣ, ಆಚೆ ನಾಡಿದ್ದು ಮದ್ದೂರು, ಆನಂತರ ಮಂಡ್ಯ ಹಾಗೂ ಮೈಸೂರಿನಲ್ಲಿ ಮಾಡಿ ಪ್ರಶ್ನೆ ಕೇಳುತ್ತೇವೆ. ನಾಳೆಯಿಂದ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೂ ಬರುತ್ತಾರೆ. ನೆರೆ ಪೀಡಿತ ಪ್ರದೇಶಗಳ ಬಗ್ಗೆ ಮೇಲ್ವಿಚಾರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅವರು ಇಂದಿನ ಕಾರ್ಯಕ್ರಮಕ್ಕೆ ಬಂದಿಲ್ಲ” ಎಂದು ತಿಳಿಸಿದರು.
“ನಾವು ಪಾದಯಾತ್ರೆ ಮಾಡುವುದಿಲ್ಲ. ಈ ರೀತಿ ಸಾರ್ವಜನಿಕ ಸಭೆ ಮಾಡಿ ಬಿಜೆಪಿ ನಾಯಕರನ್ನು ಪ್ರಶ್ನಿಸುತ್ತೇವೆ. ಬಿಜೆಪಿಯವರು ಬರೀ ಗದ್ದಲ ಮಾಡುತ್ತಾರೆ, ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ. ಕುಮಾರಸ್ವಾಮಿ ಅವರಿಗೆ ಸದನದಲ್ಲಿ ಡಿವಿಜಿ ಅವರ ಸಾಲುಗಳನ್ನು ಹೇಳಿದ್ದೆ. ‘ಎದ್ದೆದ್ದು ಬೀಳುತಿಹೆ, ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ದನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನ ಉದ್ಧಾರವೆಷ್ಟಾಯ್ತೊ? ಮಂಕುತಿಮ್ಮ’ ಎಂದು ಹೇಳಿದ್ದೆ” ಎಂದು ತಿಳಿಸಿದರು.