ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಹುಬ್ಬಳ್ಳಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಾಜಭವನದ ಹೆಸರು ‘ಲೋಕಭವನ’ ಎಂದು ಬದಲಾಯಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ತಿಳಿಸಿದ್ದರು. ಸಚಿವ ಸಂಪುಟ ಸಭೆ ಕೂಡ ಈ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದೆ.
ಮೂಲದಿಂದ ಇದ್ದಂತಹ ‘ರಾಜಭವನ’ ಹೆಸರನ್ನೇ ಮುಂದುವರೆಸುವಂತೆ ಸರ್ಕಾರದ ಪ್ರತಿನಿಧಿಗಳು ರಾಜ್ಯಪಾಲರ ಬಳಿ ಮನವಿ ಮಾಡಲಿದ್ದಾರೆ ಎಂದು ಹೇಳಿದ್ದಾರೆ.
ಸಚಿವ ಹೆಚ್ ಕೆ ಪಾಟೀಲ ಅವರು, “ರಾಜ್ಯಪಾಲರು ಇರುವ ಭವನ ರಾಜಭವನವೆಂದು ಉಳಿಯಬೇಕು. ಕೇಂದ್ರ ಸರಕಾರದ ಗೃಹ ಸಚಿವಾಲಯದಿಂದ ಅದನ್ನು ‘ಲೋಕಭವನ’ ಎಂದು ಕರೆಯಲು ಮುಂದಾಗುತ್ತಿರುವುದು ಸೂಕ್ತವಲ್ಲ. ಹೆಸರು ಬದಲಾದರೂ ರಾಜ್ಯಪಾಲರನ್ನು ‘ಲೋಕಪಾಲ್’ ಎಂದು ಕರೆದರೆ ಹೇಗಾಗುತ್ತೆ?” ಎಂದು ಪ್ರಶ್ನಿಸಿದರು.
ಈ ಪ್ರಕಾರ, ರಾಜ್ಯ ಸರ್ಕಾರ ಈ ಹೆಸರಿನ ಬದಲಾವಣೆಗೆ ಸಹಮತಿಯಾಗಿಲ್ಲ ಮತ್ತು ರಾಜ್ಯಪಾಲರು ಇರುವ ವರೆಗೂ ಈ ಭವನವನ್ನು ‘ರಾಜಭವನ’ ಎಂದು ಕರೆಯಲಾಗುವುದು ಎಂದು ಹೇಳಿದ್ದಾರೆ.
ಇದರ ಜೊತೆಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ ಮತ್ತು ಇತರ ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸಲು 20ಕ್ಕೂ ಹೆಚ್ಚು ಮಹತ್ವದ ಬಿಲ್‌ಗಳನ್ನು ಮಂಡನೆ ಮಾಡುವ ಯೋಜನೆ ಇರುವುದಾಗಿ ಹೆಚ್ ಕೆ ಪಾಟೀಲ್ ಹೇಳಿದರು.
“ಕಾನೂನು ಸುವ್ಯವಸ್ಥೆ ಸುಧಾರಣೆಗೆ ಈ ಬಿಲ್‌ಗಳ ಮಹತ್ವ ಹೆಚ್ಚಿದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಸಹ ಒಪ್ಪಿಗೆ ದೊರಕಿದೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆಗಳನ್ನು ನಡೆಸಿ ನಂತರ ಜಾರಿಗೆ ತರಲಾಗುವುದು,” ಎಂದು ಅವರು ಹೇಳಿದರು.
