ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಸಾಮಾಜಿಕ ಜಾಲತಾಣ ಖಾತೆಯೊಂದರಲ್ಲಿ ಮಾಡಿದ್ದ ಪೋಸ್ಟ್ ಒಂದರ ಅನುವಾದ ತಪ್ಪಾಗಿ ತೋರಿಸಿದ್ದಕ್ಕಾಗಿ ಫೇಸ್ ಬುಕ್ ಸಂಸ್ಥೆಯ ಮಾತೃ ಸಂಸ್ಥೆ ಮೆಟಾ ಕ್ಷಮೆ ಕೋರಿದೆ.
ಜೊತೆಗೆ ತಪ್ಪು ಕನ್ನಡ ಅನುವಾದದ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಮೆಟಾ ವಕ್ತಾರರು ತಿಳಿಸಿದ್ದಾರೆ. ಈ ಘಟನೆಗೆ ಅವರು ಕ್ಷಮೆಯಾಚಿಸಿದ್ದಾರೆ. ಅನುವಾದದಲ್ಲಿ AI ಉಪಕರಣ ಯಂತ್ರದಲ್ಲಿನ ದೋಷದಿಂದಾಗಿ ಇದು ಸಂಭವಿಸಿದೆ ಎಂದು ಕಂಪನಿ ಫೇಸ್‌ಬುಕ್ ಪೋಸ್ಟ್ ಮೂಲಕ ತಿಳಿಸಿದೆ.
ಅನುವಾದದ ಸುಧಾರಣೆಯ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಸಂಸ್ಥೆ ತಿಳಿಸಿದೆ.
ಇತ್ತೀಚೆಗೆ ನಿಧನರಾಗಿದ್ದ ಸರೋಜಾ ದೇವಿಯವರ ಅಂತಿಮ ದರ್ಶನಕ್ಕೆ ಹೋಗಿ ಬಂದ ಕುರಿತು ಕನ್ನಡದಲ್ಲಿ ಮುಖ್ಯಮಂತ್ರಿಯವ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಇದನ್ನು ಮೆಟಾ ತಪ್ಪಾಗಿ ಅನುವಾದಿಸಿರುವುದನ್ನು ಮಾಜಿ ಸಚಿವ ಸುರೇಶ್ ಕುಮಾರ್ ತಮ್ಮ ಖಾತೆಯಲ್ಲಿ ಶೇರ್ ಮಾಡಿದ್ದರು.
ಈ ಕುರಿತು ಸುರೇಶ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.