ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ ತಲೆದಂಡವಾಗಿದೆ.
ಪ್ರತಿಪಕ್ಷಗಳು ಇದನ್ನೇ ದೊಡ್ಡ ಅಸ್ತ್ರವನ್ನಾಗಿ ಮಾಡಿ ಸರ್ಕಾರವನ್ನು ಮುಜುಗರಕ್ಕೆ ಸಿಕ್ಕಿಸುವ ತಂತ್ರ ಹೆಣೆದಿತ್ತು. ಅದರ ಭಾಗವಾಗಿಯೇ ಇಂದು ಬಿಜೆಪಿ ನಾಯಕರ ನಿಯೋಗ ರಾಜ್ಯಪಾಲರ ಭೇಟಿ ಮಾಡಿ ಸಚಿವ ಬಿ.ನಾಗೇಂದ್ರ ವಜಾಗೊಳಿಸಲು ಒತ್ತಾಯಿಸಿತ್ತು.
ಇದರ ಮುಂದಿನ ಬೆಳವಣಿಗೆಯಾಗಿ ಇಂದು ಬೆಂಗಳೂರಿನ ಗೃಹ ಕಚೇರಿ ಕೃಷ್ಣಗೆ ಆಗಮಿಸಿದಂತ ಸಚಿವ ಬಿ.ನಾಗೇಂದ್ರ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ನೀಡಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಹಗರಣದ ಬಗ್ಗೆ ಕೆಲಕಾಲ ಸಿಎಂ ಜೊತೆಗೆ ಚರ್ಚೆ ನಡೆಸಿದರು. ಆ ಬಳಿಕ ಈ ಪ್ರಕರಣದ ಹೊಣೆ ಹೊತ್ತಂತ ಬಿ.ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಹಾಗೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿತ್ತು. ಈ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಿದೆ.