Home ಬೆಂಗಳೂರು ಚಾಲಕ–ನಿರ್ವಾಹಕರ ಕಾರ್ಯವೈಖರಿ ಪರಿಶೀಲನೆಗೆ ಮಾಸ್ಕ್ ಧರಿಸಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಸಚಿವ ಬೈರತಿ ಸುರೇಶ್; ಕೊನೆಗೆ...

ಚಾಲಕ–ನಿರ್ವಾಹಕರ ಕಾರ್ಯವೈಖರಿ ಪರಿಶೀಲನೆಗೆ ಮಾಸ್ಕ್ ಧರಿಸಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಿದ ಸಚಿವ ಬೈರತಿ ಸುರೇಶ್; ಕೊನೆಗೆ ಆಗಿದ್ದೇನು ಗೊತ್ತಾ?

0

ಬೆಂಗಳೂರು: ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ದೊರೆಯುತ್ತಿರುವ ಸೇವೆಯ ಗುಣಮಟ್ಟವನ್ನು ಖುದ್ದಾಗಿ ಪರಿಶೀಲಿಸಲು ಸಾರಿಗೆ ಸಚಿವ ಬೈರತಿ ಸುರೇಶ್ ಅವರು ಶನಿವಾರ ಸಂಜೆ ಯಾರಿಗೂ ಮಾಹಿತಿ ನೀಡದೆ ಮಾಸ್ಕ್ ಧರಿಸಿ ಸಾಮಾನ್ಯ ಪ್ರಯಾಣಿಕರಂತೆ ಬಸ್‌ಗಳಲ್ಲಿ ಸಂಚರಿಸಿದರು. ಸುಮಾರು ಸಂಜೆ 7 ಗಂಟೆಯಿಂದ ರಾತ್ರಿ 9.10ರವರೆಗೆ ಅವರು ಜಯಮಹಲ್ ಹಾಗೂ ಹೆಣ್ಣೂರು ಡಿಪೋ ವ್ಯಾಪ್ತಿಯ ಹಲವು ಬಸ್‌ಗಳಲ್ಲಿ ಪ್ರಯಾಣಿಸಿ ಚಾಲಕರು ಮತ್ತು ನಿರ್ವಾಹಕರ ಕಾರ್ಯವೈಖರಿಯನ್ನು ನೇರವಾಗಿ ಅವಲೋಕಿಸಿದರು.

ಈ ವೇಳೆ ಜನಸಂದಣಿಯಲ್ಲೇ ನಿಂತುಕೊಂಡು ಪ್ರಯಾಣಿಸಿದ ಸಚಿವರಿಗೆ, ಕೆಲವು ಬಸ್‌ಗಳಲ್ಲಿ ಚಾಲಕರು ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ.

ಭೂಪಸಂದ್ರದಿಂದ ಹೆಬ್ಬಾಳಕ್ಕೆ ತೆರಳುವ ವೇಳೆ ಸಚಿವರು ಎರಡು ಟಿಕೆಟ್‌ಗಳಿಗೆ ₹100 ನೀಡಿದಾಗ, ನಿರ್ವಾಹಕರು ₹12 ಚಿಲ್ಲರೆ ನೀಡುವಂತೆ ಕೇಳಿದ್ದಾರೆ. ತಮ್ಮ ಬಳಿ ಚಿಲ್ಲರೆ ಇಲ್ಲ ಎಂದು ಸಚಿವರು ತಿಳಿಸಿದಾಗ, “ಹಾಗಾದರೆ ಬಸ್‌ನಿಂದ ಕೆಳಗಿಳಿಯಿರಿ” ಎಂದು ನಿರ್ವಾಹಕರು ಸೂಚಿಸಿದ್ದಾರೆ. ಸಚಿವರ ಗುರುತು ತಿಳಿಯದ ಕಾರಣ ಅವರು ಸಾಮಾನ್ಯ ಪ್ರಯಾಣಿಕರಂತೆಯೇ ಬಸ್‌ನಿಂದ ಇಳಿದಿದ್ದಾರೆ.

ಈ ಘಟನೆಯಿಂದ ಚಿಲ್ಲರೆ ಹಣದ ನೆಪದಲ್ಲಿ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಲಾಗುತ್ತಿರುವ ವಾಸ್ತವ ಸ್ಥಿತಿ ಸಚಿವರ ಗಮನಕ್ಕೆ ಬಂದಿದೆ. ತಕ್ಷಣವೇ ಸಂಬಂಧಿತ ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪರಿಶೀಲನೆ ವೇಳೆ ನಿಗದಿತ ಬಸ್ ನಿಲ್ದಾಣಗಳನ್ನು ಬಿಟ್ಟು ಬೇರೆಡೆ ಬಸ್ ನಿಲ್ಲಿಸುವುದು, ಅತಿವೇಗದ ಚಾಲನೆ, ಪ್ರಯಾಣಿಕರೊಂದಿಗೆ ಅಸಭ್ಯ ಹಾಗೂ ನಿರ್ಲಕ್ಷ್ಯದ ವರ್ತನೆ, ಚಿಲ್ಲರೆ ಹಣ ನೀಡದಿರುವುದು ಸೇರಿದಂತೆ ಹಲವು ಸಮಸ್ಯೆಗಳು ಬೆಳಕಿಗೆ ಬಂದಿವೆ. ಈ ಎಲ್ಲ ಲೋಪಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು, ಬಿಎಂಟಿಸಿ ಸೇವೆಯನ್ನು ಪ್ರಯಾಣಿಕ ಸ್ನೇಹಿಯಾಗಿಸುವಂತೆ ಸಚಿವ ಬೈರತಿ ಸುರೇಶ್ ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದ್ದಾರೆ.

You cannot copy content of this page

Exit mobile version