ಬೆಂಗಳೂರು: ಶಾಲೆಗಳು ಆರಂಭವಾಗಿ ತಿಂಗಳುಗಳೇ ಕಳೆದಿವೆ. ಮಕ್ಕಳೆಲ್ಲಾ ಈಗಾಗಲೇ ತರಗತಿಗಳಿಗೆ ಹೊಂದಿಕೊಂಡು ಪಾಠ ಪ್ರವಚನಗಳಲ್ಲಿ ಮುಳುಗಿದ್ದಾರೆ. ಆದರೆ, ಈ ನಡುಹೊತ್ತಿನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಾರ್ಮಿಕರ ಮಕ್ಕಳಿಗೆ ಶಾಲಾ ಕಿಟ್ ನೀಡಲು ಮುಂದಾಗಿದೆ! ಮಂಡಳಿಯ ಈ ವಿಚಿತ್ರ ನಡೆ ಈಗ ತೀವ್ರ ಟೀಕೆಗೆ ಗುರಿಯಾಗಿದ್ದು, ಇದರ ಹಿಂದೆ ದೊಡ್ಡ ಮಟ್ಟದ ಕಮಿಷನ್ ದಂಧೆ ಅಡಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇದುವರೆಗೆ ಮಂಡಳಿ ಹಂಚುತ್ತಿದ್ದ ಶಾಲಾ ಕಿಟ್‌ಗಳಲ್ಲಿ ನೋಟ್ ಬುಕ್, ಪೆನ್ಸಿಲ್, ಪೆನ್, ಬುಕ್ ರ‍್ಯಾಪರ್, ಬ್ಯಾಗ್, ಮಾಸ್ಕ್, ವಾಟರ್ ಬಾಟಲ್, ಟಿಫನ್ ಬಾಕ್ಸ್ ಮುಂತಾದ ಸಾಮಗ್ರಿಗಳಿರುತ್ತಿದ್ದವು. ಪ್ರಸ್ತುತ ಬಹುತೇಕ ಖಾಸಗಿ ಶಾಲೆಗಳು ಪೋಷಕರಿಂದ ಹಣ ಪಡೆದು ತಾವೇ ಬುಕ್ಸ್ ನೀಡುತ್ತಿದ್ದರೆ, ಸರ್ಕಾರಿ ಶಾಲೆಗಳಲ್ಲೂ ಸರ್ಕಾರವೇ ಪುಸ್ತಕಗಳನ್ನು ಒದಗಿಸಿದೆ. ಪೋಷಕರು ಕೂಡ ಈಗಾಗಲೇ ತಮ್ಮ ಮಕ್ಕಳಿಗೆ ಅಗತ್ಯವಿರುವ ಉಳಿದ ಶಾಲಾ ಸಾಮಗ್ರಿಗಳನ್ನು ಖರೀದಿಸಿಕೊಟ್ಟಿದ್ದಾರೆ. ಹೀಗಿರುವಾಗ ಈಗ ತಂದು ಕಿಟ್ ಕೊಟ್ಟರೆ ಅದರಿಂದ ಮಕ್ಕಳಿಗೆ ಆಗುವ ಪ್ರಯೋಜನವಾದರೂ ಏನು? ಎಂಬ ಪ್ರಶ್ನೆ ಎದ್ದಿದೆ.
ಗುಜರಿ ಸೇರುತ್ತಿರುವ ಕಿಟ್‌ಗಳು; ವಿಲೇವಾರಿಗೆ ಮ್ಯಾನ್‌ಪವರ್ ಇಲ್ಲ!
ಮಂಡಳಿಯ ಬೇಜವಾಬ್ದಾರಿತನಕ್ಕೆ ಕಳೆದ ವರ್ಷದ ಘಟನೆಯೇ ಸಾಕ್ಷಿ. ಕಳೆದ ವರ್ಷ ಮಕ್ಕಳಿಗೆ ವಿತರಿಸಲು ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಖರೀದಿಸಿದ್ದ ಶಾಲಾ ಕಿಟ್‌ಗಳು ಅರ್ಹ ಫಲಾನುಭವಿಗಳಿಗೆ ತಲುಪದೆಯೇ ಗುಜರಿ ಅಂಗಡಿಯೊಂದರಲ್ಲಿ ಪತ್ತೆಯಾಗಿದ್ದವು! ಅಸಲಿಗೆ, ಕಲ್ಯಾಣ ಮಂಡಳಿ ಖರೀದಿಸುವ ಇಂತಹ ಕಿಟ್‌ಗಳನ್ನು ವ್ಯವಸ್ಥಿತವಾಗಿ ಜಿಲ್ಲಾ ಮಟ್ಟದಲ್ಲಿ ವಿಲೇವಾರಿ ಮಾಡಲು ಮಂಡಳಿಯ ಬಳಿ ಸೂಕ್ತ ಸಿಬ್ಬಂದಿ ಬಲವೇ (ಮ್ಯಾನ್‌ಪವರ್) ಇಲ್ಲ ಎಂಬುದು ಕಹಿ ವಾಸ್ತವ. ಆದರೂ ಪ್ರತಿ ವರ್ಷ ನಿಯಮಿತವಾಗಿ ಖರೀದಿ ಪ್ರಕ್ರಿಯೆ ಮಾತ್ರ ಎಗ್ಗಿಲ್ಲದೆ ನಡೆಯುತ್ತಿದೆ.
ಡಿಬಿಟಿ (DBT)ಗೆ ಹಿಂದೇಟು; ಪ್ರೊಕ್ಯೂರ್‌ಮೆಂಟ್‌ಗೆ ಆತುರ ಯಾಕೆ?
ಕಲ್ಯಾಣ ಮಂಡಳಿಯಿಂದ ಕಾರ್ಮಿಕರ ಮಕ್ಕಳಿಗೆ ನೇರವಾಗಿ ಶೈಕ್ಷಣಿಕ ಸಹಾಯಧನ ನೀಡುವಾಗ ಈ ಕಿಟ್ ರಾಜಕಾರಣ ಯಾಕೆ? ಎಂಬ ಕಾರ್ಮಿಕ ಸಂಘಟನೆಗಳ ಪ್ರಶ್ನೆಗೆ ಮಂಡಳಿಯ ಅಧಿಕಾರಿಗಳ ಬಳಿ ಯಾವುದೇ ಉತ್ತರವಿಲ್ಲ. ಕಳೆದ ಎರಡು ವರ್ಷಗಳಿಂದ ಕಾರ್ಮಿಕರ ಮಕ್ಕಳಿಗೆ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ವಿತರಿಸದೇ ಮಂಡಳಿ ವಿಳಂಬ ಮಾಡುತ್ತಾ ಬಂದಿದೆ.
ನೇರ ನಗದು ವರ್ಗಾವಣೆ (DBT) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಯೋಜನೆಗಳಿಗೆ ಹಿಂದೇಟು ಹಾಕುವ ಕಲ್ಯಾಣ ಮಂಡಳಿ, ಸಾಮಗ್ರಿ ಖರೀದಿ (Procurement) ಯೋಜನೆಗಳಿಗೆ ಮಾತ್ರ ಇಷ್ಟೊಂದು ಆಸಕ್ತಿ ತೋರುತ್ತಿರುವುದರ ಹಿಂದಿನ ಮರ್ಮವೇನು ಎಂಬುದು ಜಗಜ್ಜಾಹೀರಾಗಿದೆ. ಡಿಬಿಟಿ ಯೋಜನೆಯಲ್ಲಿ ಮಧ್ಯವರ್ತಿಗಳ ಕಾಟ ಇರುವುದಿಲ್ಲ ಹಾಗೂ ಅಧಿಕಾರಿಗಳಿಗೆ ‘ವ್ಯವಹಾರ ಕುದುರಿಸಲು’ ಯಾವುದೇ ಅವಕಾಶ ಸಿಗುವುದಿಲ್ಲ. ಅದೇ ಸಾಮಗ್ರಿಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸಿದರೆ ಭಾರಿ ಮೊತ್ತದ ಕಮಿಷನ್ ವ್ಯವಹಾರ ನಡೆಸಬಹುದು ಎಂಬ ಕಾರಣಕ್ಕಾಗಿಯೇ ಅಧಿಕಾರಿಗಳು ತರಹೇವಾರಿ ಕಿಟ್‌ಗಳನ್ನು ಹಂಚುವ ಒಂದಿಲ್ಲೊಂದು ಹೊಸ ಯೋಜನೆಗಳನ್ನು ರೂಪಿಸುತ್ತಿರುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಬಳಕೆಗೆ ಬಾರದ ವೃತ್ತಿ ಆಧಾರಿತ ಕಿಟ್‌ಗಳು!
ಕೇವಲ ಶಾಲಾ ಕಿಟ್ ಮಾತ್ರವಲ್ಲ, ಮಂಡಳಿಯು ಕಾರ್ಮಿಕರಿಗೆ ವಿತರಿಸುವ ಮೆಸನ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್, ಪ್ಲಂಬರ್ ಕಿಟ್, ಬಾರ್ ಬೆಂಡಿಂಗ್ ಕಿಟ್, ಕಾರ್ಪೆಂಟರ್ ಕಿಟ್, ಟೈಲ್ಸ್ ಕಿಟ್, ಪೈಂಟರ್ ಕಿಟ್ ಹೀಗೆ ವೃತ್ತಿ ಆಧಾರಿತ ಕಿಟ್‌ಗಳೂ ಸಹ ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿವೆ. ಸ್ವತಃ ಕಾರ್ಮಿಕರೇ ದೂರುವ ಪ್ರಕಾರ, ಈ ಕಿಟ್‌ಗಳಲ್ಲಿರುವ ಉಪಕರಣಗಳು ಒಮ್ಮೆಯೂ ಬಳಸಲಾಗದಷ್ಟು ಕಳಪೆಯಾಗಿದ್ದು, ಯಾವುದೂ ಬಳಕೆಗೆ ಯೋಗ್ಯವಾಗಿಲ್ಲವೆಂದು ಕೆಲಸಗಾರರು ಆರೋಪಿಸುತ್ತಿದ್ದಾರೆ.
ಈ ನಿರಂತರ ಖರೀದಿ ದಂಧೆಯ ವಿರುದ್ಧ ಸಿಐಟಿಯು (CITU) ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು ಭಾರಿ ಪ್ರತಿಭಟನೆಗಳನ್ನು ನಡೆಸಿ, ಕಮಿಷನ್ ಆಸೆಯ ಖರೀದಿ ವ್ಯವಹಾರಗಳನ್ನು ತಕ್ಷಣ ನಿಲ್ಲಿಸುವಂತೆ ಹಲವು ಬಾರಿ ಆಗ್ರಹಿಸಿವೆ. ಆದರೂ ಅಧಿಕಾರಿಗಳ ಹಾಗೂ ರಾಜಕಾರಣಿಗಳ ಖರೀದಿ ಭರಾಟೆ ಮತ್ತು ಕಮಿಷನ್ ಲೂಟಿ ಮಾತ್ರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಜನಪರ ಹೋರಾಟಗಾರ ಲಿಂಗರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
