Home ಬ್ರೇಕಿಂಗ್ ಸುದ್ದಿ ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿದಿಲ್ಲ – ನಿಖಿಲ್‌ ಕುಮಾರಸ್ವಾಮಿ

ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಉಳಿದಿಲ್ಲ – ನಿಖಿಲ್‌ ಕುಮಾರಸ್ವಾಮಿ

ಹಾಸನ: ರಾಜ್ಯ ಸರ್ಕಾರದ ಆಡಳಿತ ಹಾಗೂ ರೈತಪರ ನೀತಿಗಳನ್ನು ಟೀಕಿಸಿರುವ ಜೆಡಿಎಸ್‌ ಯುವ ನಾಯಕ ನಿಖಿಲ್‌ ಕುಮಾರಸ್ವಾಮಿ, ರೈತರನ್ನು ಎದುರು ಹಾಕಿಕೊಂಡು ಯಾವ ಸರ್ಕಾರವೂ ಹೆಚ್ಚು ದಿನ ಉಳಿದಿಲ್ಲ ಎಂದು ಹೇಳಿದರು. ಚನ್ನರಾಯಪಟ್ಟಣದ ಎಪಿಎಂಸಿ ಆವರಣದಲ್ಲಿ ರೈತರೊಂದಿಗೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಲಾಶಯಗಳಲ್ಲಿ ನೀರಿದ್ದರೂ ಬೆಳೆಗಳಿಗೆ ನೀರು ಬಿಡಲಿಲ್ಲ. ಜಲಾಶಯಗಳನ್ನು ನಂಬಿ ರೈತರು ಬಿತ್ತನೆ ಮಾಡಬಾರದು ಎಂದು ಹೇಳುವ ಪರಿಸ್ಥಿತಿ ಬಂದಿದೆ. ರಾಜ್ಯದ ಇತಿಹಾಸದಲ್ಲಿ ಈ ರೀತಿಯ ಹೇಳಿಕೆ ನೀಡಿದ ಮೊದಲ ಮುಖ್ಯಮಂತ್ರಿ ಇವರೇ ಎಂದು ಮುಖ್ಯಮಂತ್ರಿ ವಿರುದ್ಧ ವಾಗ್ದಾಳಿ ನಡೆಸಿದರು.

ಸರ್ಕಾರ ಪ್ರಜಾ ಸೇವೆಯ ಮೂಲಕ ಜನರ ಸೇವೆ ಮಾಡುವ ಬದಲು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ ನಿಖಿಲ್‌, ಹಣಕಾಸು ಇಲಾಖೆಯ ಅಧಿಕಾರಿಗಳು ಯಾವುದೇ ಹೊಸ ಯೋಜನೆಗಳನ್ನು ಘೋಷಿಸಬಾರದು ಎಂಬ ಅಧಿಕೃತ ಪತ್ರ ಹೊರಡಿಸಿದ್ದಾರೆಯೇ ಅಥವಾ ಅದು ಸೋರಿಕೆಯಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಸಾಲದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ರಾಜ್ಯ ಸರ್ಕಾರ ₹4.36 ಲಕ್ಷ ಕೋಟಿ ಸಾಲ ಮಾಡಿದ್ದು, ವರ್ಷಕ್ಕೆ ಸುಮಾರು ₹48 ಸಾವಿರ ಕೋಟಿ ಬಡ್ಡಿ ಪಾವತಿಸುತ್ತಿದೆ ಎಂದು ಆರೋಪಿಸಿದರು. ಜನರು ತಮ್ಮ ಕಷ್ಟಗಳನ್ನು ಹೇಳಿಕೊಂಡು ಕಣ್ಣೀರಿಡುತ್ತಾ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರಕ್ಕೆ ತಾಯಿ ಹೃದಯ ಇದೆಯೇ ಎಂದು ಪ್ರಶ್ನಿಸಿದರು.

ಇತ್ತೀಚೆಗೆ ನಡೆದ ವಿಶೇಷ ಅಧಿವೇಶನದ ಕುರಿತು ಮಾತನಾಡಿದ ಅವರು, ಕಸ್ತೂರಿರಂಗನ್‌ ವರದಿ ಬಗ್ಗೆ ಚರ್ಚೆ ನಡೆಸುವುದಾಗಿ ಹೇಳಿ ಒಂದು ದಿನ ಹೆಚ್ಚುವರಿ ಅಧಿವೇಶನ ನಡೆಸಿದರೂ, ಅದು ಕೇವಲ ಮೂಗಿಗೆ ತುಪ್ಪ ಸವರುವ ಕೆಲಸವಾಗಿದೆ ಎಂದು ಟೀಕಿಸಿದರು.

ರೈತರಿಗೆ ₹2,500 ನೀಡುವುದಾಗಿ ಹೇಳುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನಿಖಿಲ್‌, ರೈತರು ಭಿಕ್ಷುಕರಲ್ಲ. ಅವರು ಸ್ವಾಭಿಮಾನಿಗಳು. ರೈತರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಪರಿಣಾಮ ಎದುರಾಗಲಿದೆ ಎಂದು ಹೇಳಿದರು.

ತಮ್ಮ ರಾಜಕೀಯ ಭವಿಷ್ಯದ ಕುರಿತು ಮಾತನಾಡಿದ ಅವರು, ನನ್ನ ಮೇಲೆ ಅನುಕಂಪದಿಂದ ಮಾತನಾಡುವ ಅಗತ್ಯವಿಲ್ಲ. ನಾನು ಧೃತಿಗೆಟ್ಟಿಲ್ಲ. ಸದನದ ಒಳಗೆ ಹೋಗಿ ರೈತರ ಪರ ಧ್ವನಿಯಾಗಿ ಹೋರಾಡುವ ಅವಕಾಶ ಸಿಗದಿದ್ದರೂ ಬೇಸರವಿಲ್ಲ. ಬೀದಿಯಲ್ಲಿ ನಿಂತು ರೈತರ ಪರ ಹೋರಾಟ ಮಾಡುತ್ತೇನೆ ಎಂದರು.

ದೇವೇಗೌಡರು, ಕುಮಾರಸ್ವಾಮಿ ಹಾಗೂ ರೇವಣ್ಣ ಅವರ ಹೆಸರನ್ನು ಉಳಿಸುವ ಕೆಲಸ ಮಾಡುತ್ತೇನೆ. ನಿಖಿಲ್‌ ಕುಮಾರಸ್ವಾಮಿ ದ್ರೋಹ ಬಗೆಯುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದರು.

ಹಾಸನ ಜಿಲ್ಲೆಯ ಕಾರ್ಯಕರ್ತರು ಜೆಡಿಎಸ್‌ ಪಕ್ಷವನ್ನು ತೊರೆದು ಹೋಗಿಲ್ಲ. ಈಗಾಗಲೇ ಜನರು ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಚುನಾವಣೆಗೆ ಇನ್ನೂ ಸುಮಾರು ಒಂದೂವರೆ ವರ್ಷ ಬಾಕಿ ಇದ್ದರೂ ಈಗಾಗಲೇ ಚುನಾವಣಾ ಕಾವು ಆರಂಭವಾಗಿದೆ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

You cannot copy content of this page

Exit mobile version