ಮಳೆ ಕೊರತೆ ಗ್ರಾಮೀಣ ಜನರಿಗೆ ವಿಬಿ-ಜಿರಾಮ್‌ಜಿ ಉದ್ಯೋಗ ನೀಡಲು ಸಚಿವ ಖಂಡ್ರೆ ನಿರ್ದೇಶನ

ಬೆಂಗಳೂರು : ರಾಜ್ಯದ ಗ್ರಾಮೀಣ ಭಾಗದಲ್ಲಿ ತೀವ್ರಗೊಳ್ಳುತ್ತಿರುವ ಬರ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ಒಟ್ಟು 178 ತಾಲೂಕುಗಳಲ್ಲಿ ಮಳೆ ಕೊರತೆ ಕಾಣಿಸಿಕೊಂಡಿದ್ದು, ಈ ಪೈಕಿ 60 ತಾಲೂಕುಗಳು ಭೀಕರ ಸ್ಥಿತಿ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಗ್ರಾಮೀಣ ಜನರು ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಬಿ. ಖಂಡ್ರೆ (Eshwar Khandre) ತಿಳಿಸಿದ್ದಾರೆ.

ಕುಡಿಯುವ ನೀರಿಗೆ 117 ಕೋಟಿ ರೂ. ಮುಂಗಡ ಬಿಡುಗಡೆ:
ಹಳ್ಳಿಗಳಲ್ಲಿ ಜಲಕ್ಷಾಮ ತಲೆದೋರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ 117 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ. ಇದರಲ್ಲಿ 95 ಕೋಟಿ ರೂಪಾಯಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಈಗಾಗಲೇ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಇನ್ನುಳಿದ 25 ಕೋಟಿ ರೂಪಾಯಿ ಜಿಲ್ಲಾ ಮಟ್ಟದಲ್ಲಿ ಲಭ್ಯವಿದೆ. ಗ್ರಾಮ ಅಥವಾ ಲಂಬಾಣಿ ತಾಂಡಾಗಳಲ್ಲಿ ಸರ್ಕಾರಿ ಬೋರ್‌ವೆಲ್‌ಗಳು ಬತ್ತಿ ಹೋಗಿದ್ದರೆ, ಖಾಸಗಿ ಬಾವಿ ಹಾಗೂ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಲಾಗಿದೆ. ಅತ್ಯಂತ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಸ ಕೊಳವೆ ಬಾವಿ ಕೊರೆಯಲು ಅನುಮತಿ ನೀಡಲಾಗಿದೆ. ಒಂದು ವೇಳೆ ಮುಂದಿನ 3-4 ತಿಂಗಳು ಮಳೆ ಬರದಿದ್ದರೂ, ಮುಂದಿನ ವರ್ಷದ ಮುಂಗಾರು ಆರಂಭದವರೆಗೂ ನೀರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ರೈತರಿಗೆ ಬೆಳೆ ವಿಮೆ ಮಾಡಿಸಲು ಸಚಿವರ ಕರೆ:
ಬ್ಯಾಂಕ್ ಸಾಲ ಬಾಕಿ ಉಳಿಸಿಕೊಂಡಿರುವ ಹಾಗೂ ಒನ್‌ ಟೈಮ್ ಸೆಟಲ್‌ಮೆಂಟ್ (OTS) ಮಾಡಿಕೊಂಡಿರುವ ರೈತರಿಗೂ ಸಮುದಾಯ ಸೇವಾ ಕೇಂದ್ರಗಳ ಮೂಲಕ ಬೆಳೆ ವಿಮೆ ಕಂತು ಪಾವತಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ರೈತರು ಆತಂಕ ಪಡದೆ ತಮ್ಮ ಬಿತ್ತನೆ ಬೆಳೆಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು ಎಂದು ಸಚಿವರು ಸಲಹೆ ನೀಡಿದ್ದಾರೆ. ಇದೇ ವೇಳೆ ಇತ್ತೀಚೆಗೆ ಹೆಚ್ಚುತ್ತಿರುವ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಕಳವಳ ವ್ಯಕ್ತಪಡಿಸಿದ ಅವರು, “ಅನ್ನದಾತರು ದೇಶದ ಬೆನ್ನೆಲುಬು. ಯಾವುದೇ ಕಾರಣಕ್ಕೂ ರೈತರು ಧೃತಿಗೆಟ್ಟು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಕ್ಕೆ ಕೈ ಹಾಕಬಾರದು. ಸರ್ಕಾರ ಸದಾ ನಿಮ್ಮ ರಕ್ಷಣೆಗೆ ಇರಲಿದೆ,” ಎಂದು ಧೈರ್ಯ ತುಂಬಿದರು.

ನರೇಗಾ ಮಾದರಿ ಯೋಜನೆಯಡಿ ಉದ್ಯೋಗ ಭರವಸೆ:
ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಅನುಪಾತವನ್ನು 90:10 ರಿಂದ 60:40 ಕ್ಕೆ ಬದಲಾಯಿಸಿರುವುದರಿಂದ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಬಿದ್ದಿದೆ. ಆದರೂ ಬಡವರು, ದಲಿತರು ಹಾಗೂ ಗ್ರಾಮೀಣ ಜನತೆಯ ಹಿತದೃಷ್ಟಿಯಿಂದ ಜುಲೈ 1 ರಿಂದಲೇ ವಿಶೇಷ ಉದ್ಯೋಗ ಯೋಜನೆ ಜಾರಿಗೆ ತರಲಾಗಿದೆ. ಇದರ ಅಡಿಯಲ್ಲಿ ಈಗಾಗಲೇ 5 ಲಕ್ಷ ಉದ್ಯೋಗ ಸೃಷ್ಟಿಸಲಾಗಿದ್ದು, ಉದ್ಯೋಗ ಚೀಟಿ (ಜಾಬ್ ಕಾರ್ಡ್) ಹೊಂದಿರುವ ಪ್ರತಿಯೊಬ್ಬರಿಗೂ ವರ್ಷಕ್ಕೆ 125 ದಿನಗಳ ಕೆಲಸ ಖಾತರಿಪಡಿಸಲಾಗುವುದು.

ಈ ಯೋಜನೆಯಡಿ ಶಾಲೆಗಳು, ಆರೋಗ್ಯ ಕೇಂದ್ರಗಳು, ಸರ್ಕಾರಿ ಕಟ್ಟಡಗಳ ನವೀಕರಣ, ಕೃಷಿ ಹೊಂಡ, ಕಾಲುವೆ ನಿರ್ಮಾಣ, ಹನಿ ನೀರಾವರಿ ಹಾಗೂ ಕಿರು ಅರಣ್ಯ ಬೆಳೆಸುವಿಕೆ ಸೇರಿದಂತೆ 318 ಬಗೆಯ ಕಾಮಗಾರಿಗಳಿಗೆ ಅವಕಾಶವಿದ್ದು, ಹೊಸ ಯೋಜನೆಗಳನ್ನು ಸೇರಿಸಲು ಪೋರ್ಟಲ್ ಮುಕ್ತವಾಗಿದೆ. ಪ್ರಸಕ್ತ ತಿಂಗಳ ಅಂತ್ಯದ ವೇಳೆಗೆ 10 ಲಕ್ಷ ಮಾನವ ದಿನಗಳನ್ನು ತಲುಪುವ ಗುರಿ ಹೊಂದಲಾಗಿದ್ದು, ಮೊದಲ ತ್ರೈಮಾಸಿಕದಲ್ಲಿ 2,900 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಪ್ರತಿ ತಿಂಗಳು 1.25 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವ ಗುರಿ ಇರುವುದರಿಂದ ಗ್ರಾಮೀಣ ಭಾಗದಲ್ಲಿ ಕೆಲಸದ ಅಭಾವ ಎದುರಾಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Related Articles

ಇತ್ತೀಚಿನ ಸುದ್ದಿಗಳು