ಚಾರಿತ್ರಿಕ ಅನ್ಯಾಯ: ಜನಸಂಖ್ಯೆ ನಿಯಂತ್ರಿಸಿದ್ದಕ್ಕೆ ದಕ್ಷಿಣ ಭಾರತಕ್ಕೆ ಶಿಕ್ಷೆಯೇ? ಕರಾಳ ದಿನಕ್ಕೆ ಸ್ಟಾಲಿನ್ ಕರೆ

ಚೆನ್ನೈ: ಕೇಂದ್ರ ಸರ್ಕಾರದ ಪ್ರಸ್ತಾವಿತ ಕ್ಷೇತ್ರ ಮರುವಿಂಗಡಣೆ (Delimitation) ಪ್ರಕ್ರಿಯೆಯನ್ನು ವಿರೋಧಿಸಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ರಾಜ್ಯಾದ್ಯಂತ ಬೃಹತ್ ‘ಕಪ್ಪು ಬಾವುಟ’ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಜನಸಂಖ್ಯೆ ಆಧಾರಿತ ಮರುವಿಂಗಡಣೆಯು ದಕ್ಷಿಣ ಭಾರತದ ರಾಜ್ಯಗಳಿಗೆ ಮಾಡುವ ‘ಚಾರಿತ್ರಿಕ ಅನ್ಯಾಯ’ ಎಂದು ಅವರು ಗುಡುಗಿದ್ದಾರೆ.

ಒಂದು ವಿಡಿಯೋ ಸಂದೇಶದ ಮೂಲಕ ಜನರನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಕೇಂದ್ರದ ಈ ಬಿಲ್ ತಮಿಳುನಾಡು ಸೇರಿದಂತೆ ಇಡೀ ದಕ್ಷಿಣ ಭಾರತದ ಧ್ವನಿಯನ್ನು ಅಡಗಿಸುವ ಪಿತೂರಿಯಾಗಿದೆ ಎಂದು ಕಿಡಿಕಾರಿದ್ದಾರೆ. “ತಮಿಳುನಾಡಿನ ಪ್ರತಿ ಕುಟುಂಬವು ಕೇಂದ್ರದ ಈ ನಡೆಯ ವಿರುದ್ಧ ಧ್ವನಿ ಎತ್ತಬೇಕಾದ ಸಮಯ ಬಂದಿದೆ. ನಾಳೆ (ಗುರುವಾರ) ಸಂಸತ್ತಿನಲ್ಲಿ ಈ ಮಸೂದೆ ಮಂಡನೆಯಾಗುವ ಸಂದರ್ಭದಲ್ಲಿ ನಮ್ಮ ಮನೆಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ಮಾಡೋಣ,” ಎಂದು ಅವರು ಜನತೆಗೆ ಕರೆ ನೀಡಿದರು.

ಕ್ಷೇತ್ರ ಮರುವಿಂಗಡಣೆ ಮಸೂದೆಯನ್ನು ‘ಕರಾಳ ಕಾನೂನು’ ಎಂದು ಬಣ್ಣಿಸಿದ ಅವರು, ಇದು ಭಾರತವನ್ನು ಕತ್ತಲೆ ಯುಗದತ್ತ ಕೊಂಡೊಯ್ಯಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೇವಲ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಹಂಚಿಕೆ ಮಾಡುವುದು ಸರಿಯಲ್ಲ; ಇದು ಜನಸಂಖ್ಯಾ ಸ್ಫೋಟ ಹೊಂದಿರುವ ಉತ್ತರ ಭಾರತದ ರಾಜ್ಯಗಳಿಗೆ ರಾಜಕೀಯ ಲಾಭ ತಂದುಕೊಡುತ್ತದೆ ಮತ್ತು ಜನಸಂಖ್ಯೆ ನಿಯಂತ್ರಣದಲ್ಲಿ ಯಶಸ್ವಿಯಾದ ದಕ್ಷಿಣದ ರಾಜ್ಯಗಳ ಪ್ರಭಾವವನ್ನು ಕುಗ್ಗಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

“ದೇಶದ ಹಿತದೃಷ್ಟಿಯಿಂದ ಜವಾಬ್ದಾರಿಯುತವಾಗಿ ಜನಸಂಖ್ಯೆ ನಿಯಂತ್ರಣವನ್ನು ಪಾಲಿಸಿದ ದಕ್ಷಿಣ ಭಾರತಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಶಿಕ್ಷೆ ಇದೇನಾ?” ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಅಭಿವೃದ್ಧಿಯ ಪಥದಲ್ಲಿ ಸಾಗಿ ದೇಶದ ಏಳಿಗೆಗೆ ಶ್ರಮಿಸುತ್ತಿರುವ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಳ್ಳುವುದು ಒಕ್ಕೂಟ ವ್ಯವಸ್ಥೆಗೆ ಮಾರಕ ಎಂದು ಅವರು ಎಚ್ಚರಿಸಿದರು.

ಇದೇ ವಿಚಾರವಾಗಿ ಡಿಎಂಕೆ ಸಂಸದರ ತುರ್ತು ಸಭೆ ನಡೆಸಿದ ಸ್ಟಾಲಿನ್, ಸಂಸತ್ತಿನಲ್ಲಿ ಈ ಮಸೂದೆಯ ವಿರುದ್ಧ ತೀವ್ರ ಪ್ರತಿರೋಧ ವ್ಯಕ್ತಪಡಿಸಲು ಸಿದ್ಧತೆ ನಡೆಸಿದ್ದಾರೆ. ತಮಿಳುನಾಡಿನ ಗೋಗರೆತವನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು