Home ರಾಜಕೀಯ ಆರು ತಿಂಗಳು ಕಾಯುತ್ತೇವೆ: ತಮಿಳುನಾಡು ರಾಜಕೀಯ ಸಂಘರ್ಷದ ನಡುವೆ ಎಂ.ಕೆ. ಸ್ಟಾಲಿನ್ ಮಹತ್ವದ ಹೇಳಿಕೆ

ಆರು ತಿಂಗಳು ಕಾಯುತ್ತೇವೆ: ತಮಿಳುನಾಡು ರಾಜಕೀಯ ಸಂಘರ್ಷದ ನಡುವೆ ಎಂ.ಕೆ. ಸ್ಟಾಲಿನ್ ಮಹತ್ವದ ಹೇಳಿಕೆ

0

ಚೆನ್ನೈ: ತಮಿಳುನಾಡಿನ ಚುನಾವಣಾ ಫಲಿತಾಂಶದ ನಂತರ ಸರ್ಕಾರ ರಚನೆಯಲ್ಲಿ ತಲೆದೂರಿರುವ ಗೊಂದಲದ ನಡುವೆಯೇ, ತಮಿಳುನಾಡು ಉಸ್ತುವಾರಿ ಮುಖ್ಯಮಂತ್ರಿ ಮತ್ತು ಡಿಎಂಕೆ (DMK) ಮುಖ್ಯಸ್ಥ ಎಂ.ಕೆ. ಸ್ಟಾಲಿನ್ ಅವರು ಅತ್ಯಂತ ಪ್ರಮುಖ ಹೇಳಿಕೆ ನೀಡಿದ್ದಾರೆ. ವಿಜಯ್ ನೇತೃತ್ವದ ಟಿ.ವಿ.ಕೆ (TVK) ಸರ್ಕಾರ ರಚಿಸುವುದನ್ನು ತಾವು ತಡೆಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಚುನಾವಣಾ ಫಲಿತಾಂಶದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್, ರಾಜ್ಯದಲ್ಲಿ ಟಿ.ವಿ.ಕೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವುದರಿಂದ ಅವರು ಸರ್ಕಾರ ರಚಿಸಲಿ ಎಂದು ಹೇಳಿದರು. “ನಾವು ಆರು ತಿಂಗಳ ಕಾಲ ವಿಜಯ್ ಅವರ ಆಡಳಿತವನ್ನು ಗಮನಿಸುತ್ತೇವೆ, ಆನಂತರವಷ್ಟೇ ನಾನು ಪ್ರತಿಕ್ರಿಯಿಸುತ್ತೇನೆ. ಈಗಲೇ ಮತ್ತೆ ಚುನಾವಣೆಗೆ ಹೋಗುವ ಉದ್ದೇಶ ನಮ್ಮ ಪಕ್ಷಕ್ಕಿಲ್ಲ,” ಎಂದು ಅವರು ತಿಳಿಸಿದರು.

ಇದೇ ವೇಳೆ ಟಿ.ವಿ.ಕೆ ನೀಡಿದ ಚುನಾವಣಾ ಭರವಸೆಗಳ ಬಗ್ಗೆ ಮಾತನಾಡಿದ ಸ್ಟಾಲಿನ್, “ಚುನಾವಣೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವುದು ಅಸಾಧ್ಯ. ವಿಶೇಷವಾಗಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ನೀಡುವುದು ಸಾಧ್ಯವಿಲ್ಲದ ಮಾತು. ಹಿಂದೆ ನಾವು ನೀಡಿದಂತೆ 1,000 ರೂಪಾಯಿ ನೀಡಿದರೆ ಸಾಕು. ಅಲ್ಲದೆ, ಡಿಎಂಕೆ ಸರ್ಕಾರ ಜಾರಿಗೆ ತಂದಿದ್ದ ಜನಕಲ್ಯಾಣ ಯೋಜನೆಗಳನ್ನು ಮುಂದುವರಿಸಬೇಕು,” ಎಂದು ಸಲಹೆ ನೀಡಿದರು.

ಸರ್ಕಾರ ರಚನೆಯಲ್ಲಿನ ತಾಂತ್ರಿಕ ಸಂಕಷ್ಟ: ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆ 118. ಪ್ರಸ್ತುತ ಲೆಕ್ಕಾಚಾರದ ಪ್ರಕಾರ ವಿಜಯ್ ನೇತೃತ್ವದ ಟಿ.ವಿ.ಕೆ 107 ಸ್ಥಾನಗಳನ್ನು ಹೊಂದಿದೆ. ವಿಜಯ್ ಅವರು ಎರಡು ಕ್ಷೇತ್ರಗಳಲ್ಲಿ ಗೆದ್ದಿರುವುದರಿಂದ ಒಂದು ಕ್ಷೇತ್ರಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ, ಆಗ ಅವರ ಬಲ 106ಕ್ಕೆ ಇಳಿಯಲಿದೆ.

ಟಿ.ವಿ.ಕೆ ಪಕ್ಷಕ್ಕೆ ಬೆಂಬಲ ನೀಡುತ್ತಿರುವ ಕಾಂಗ್ರೆಸ್ ಪಕ್ಷವು 5 ಸ್ಥಾನಗಳನ್ನು ಹೊಂದಿದೆ. ಇವೆರಡೂ ಸೇರಿದರೆ ಒಟ್ಟು ಬಲ 111 ಆಗುತ್ತದೆ. ಮ್ಯಾಜಿಕ್ ಸಂಖ್ಯೆ ತಲುಪಲು ವಿಜಯ್ ಅವರಿಗೆ ಇನ್ನೂ 7 ಶಾಸಕರ ಬೆಂಬಲದ ಅಗತ್ಯವಿದೆ. ಸ್ಪಷ್ಟ ಬಹುಮತ ಇಲ್ಲದ ಕಾರಣ ರಾಜ್ಯಪಾಲರು ಸರ್ಕಾರ ರಚನೆಗೆ ಇನ್ನೂ ಹಸಿರು ನಿಶಾನೆ ತೋರಿಸಿಲ್ಲ. ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜಕೀಯದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

You cannot copy content of this page

Exit mobile version