ಶಕ್ತಿ ಯೋಜನೆ ವಿರುದ್ಧ ಬಿಜೆಪಿ ನಾಯಕರ ಎದುರೇ ಶಾಸಕ ಆರ್‌ವಿ ದೇಶಪಾಂಡೆ ಅಪಸ್ವರ

ದಾಂಡೇಲಿ: ಸಿದ್ದರಾಮಯ್ಯ ಸರ್ಕಾರ ಜಾರಿಗೆ ತಂದಿರುವ ‘ಶಕ್ತಿ ಯೋಜನೆ’ ಪರಿಣಾಮ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಗಂಡು ಮಕ್ಕಳಿಗೆ ಬಸ್‌ನಲ್ಲಿ ಜಾಗ ಸಿಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಶಾಸಕ ಆರ್.ವಿ.ದೇಶಪಾಂಡೆ ಶನಿವಾರ ಹೇಳಿದ್ದಾರೆ.

ದಾಂಡೇಲಿ-ಅಳ್ನಾವರ ಡೆಮು ರೈಲು ಮರುಪ್ರಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಎದುರಲ್ಲೇ ‘ಶಕ್ತಿ ಯೋಜನೆ’ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, “ಶಕ್ತಿ ಯೋಜನೆ ಕುರಿತು ಕಾಂಗ್ರೆಸ್ ನಾಯಕರೇ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ರಾಜ್ಯ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು” ಎಂದು ಹೇಳಿದರು.

ಅಳ್ನಾವರದಿಂದ ಬೆಳಗಾವಿ ಮತ್ತು ಹುಬ್ಬಳ್ಳಿಗೆ ರೈಲು ಸಂಪರ್ಕ ಕಲ್ಪಿಸಿದರೆ ದಾಂಡೇಲಿ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ರೈಲು ಸಂಪರ್ಕ ಹೆಚ್ಚಿದರೆ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ದೊರೆಯಲಿದೆ ಎಂದು ಸೋಮಣ್ಣ ಹೇಳಿದರು.

ದಾಂಡೇಲಿ-ಅಳ್ನಾವರ ರೈಲು ಪುನರಾರಂಭಕ್ಕೆ ಸಚಿವ ಸೋಮಣ್ಣ ಅವರ ಪ್ರಯತ್ನವೇ ಕಾರಣ ಎಂದು ಪ್ರಶಂಸಿಸಿದ ದೇಶಪಾಂಡೆ, “ಒಳ್ಳೆಯ ಕೆಲಸ ಮಾಡಿದಾಗ ಪ್ರತಿಪಕ್ಷದವರಾದರೂ ಹೊಗಳುತ್ತೇನೆ. ದ್ವೇಷ ಮಾಡುವ ಗುಣ ನನಗಿಲ್ಲ. ಈ ಕಾರಣದಿಂದಲೇ ನಾನು 9 ಬಾರಿ ಶಾಸಕನಾಗಿದ್ದೇನೆ” ಎಂದು ಹೇಳಿದರು.

ಇದೇ ವೇಳೆ, ಸೋಮಣ್ಣ ಅವರು, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ ನಿರ್ಮಾಣಕ್ಕೆ ₹17 ಸಾವಿರ ಕೋಟಿ ವೆಚ್ಚದ ಯೋಜನೆಗೆ ಶೀಘ್ರ ಅನುಮತಿ ಸಿಗಲಿದೆ ಎಂದು ತಿಳಿಸಿದರು. ಅಳ್ನಾವರ-ದಾಂಡೇಲಿ ರೈಲನ್ನು ಹುಬ್ಬಳ್ಳಿವರೆಗೆ ವಿಸ್ತರಿಸುವ ಯೋಜನೆಯೂ ಇದೆ ಎಂದು ಹೇಳಿದರು.

ದಾಂಡೇಲಿ ರೈಲು ನಿಲ್ದಾಣದಲ್ಲಿ ಅಳ್ನಾವರ-ದಾಂಡೇಲಿ (26 ಕಿ.ಮೀ) ಪ್ರಯಾಣಿಕರ ರೈಲು ಮರು ಸಂಚಾರಕ್ಕೆ ಶನಿವಾರ ಚಾಲನೆ ನೀಡಲಾಯಿತು.

Related Articles

ಇತ್ತೀಚಿನ ಸುದ್ದಿಗಳು