ಬೆಂಗಳೂರು: ರಾಜ್ಯದ ಅತಿ ದೊಡ್ಡ ಕಾರಾಗೃಹಗಳಲ್ಲಿ ಒಂದಾದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮತ್ತೊಮ್ಮೆ ಭದ್ರತಾ ಲೋಪ ಬೆಳಕಿಗೆ ಬಂದಿದೆ. ಜೈಲಿನ ಟವರ್-2ರ ಬಿ ಬ್ಯಾರಕ್‌ನಲ್ಲಿ ನಡೆಸಿದ ಆಕಸ್ಮಿಕ ತಪಾಸಣೆ ವೇಳೆ ಶಿಕ್ಷೆ ಅನುಭವಿಸುತ್ತಿದ್ದ ಕೈದಿಯೊಬ್ಬನ ಬಳಿ ನಿಷೇಧಿತ ಮೊಬೈಲ್ ಫೋನ್ ಪತ್ತೆಯಾಗಿದ್ದು, ಪೊಲೀಸರು ಮತ್ತು ಜೈಲು ಅಧಿಕಾರಿಗಳು ತಕ್ಷಣ ಅದನ್ನು ವಶಕ್ಕೆ ಪಡೆದಿದ್ದಾರೆ.
ಜೈಲಿನೊಳಗೆ ನಿಷೇಧಿತ ವಸ್ತುಗಳ ಬಳಕೆ ಹಾಗೂ ಕೈದಿಗಳ ಅನಧಿಕೃತ ಸಂಪರ್ಕ ಜಾಲದ ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಯಿತು. ಕೈದಿಗಳು ಮೊಬೈಲ್ ಫೋನ್ ಮೂಲಕ ಹೊರಜಗತ್ತಿನೊಂದಿಗೆ ಅನಧಿಕೃತ ಸಂಪರ್ಕ ಸಾಧಿಸುತ್ತಿದ್ದಾರೆ ಎಂಬ ಅನುಮಾನ ಅಧಿಕಾರಿಗಳನ್ನು ಕಾಡುತ್ತಿತ್ತು.
ಪತ್ತೆಯಾದ ಫೋನ್ ಜೈಲಿನೊಳಗೆ ಹೇಗೆ ಬಂತು, ಇದರ ಹಿಂದೆ ಯಾವುದೇ ಸಿಬ್ಬಂದಿ ಅಥವಾ ಹೊರಗಿನ ವ್ಯಕ್ತಿಗಳ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆ ಚುರುಕುಗೊಂಡಿದೆ. ಸಂಬಂಧಿತ ಕೈದಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಕೂಡ ಹಲವು ಭದ್ರತಾ ಲೋಪ ಮತ್ತು ಅಕ್ರಮ ಚಟುವಟಿಕೆಗಳ ಪ್ರಕರಣಗಳಿಂದ ಸುದ್ದಿಯಾಗಿದ್ದ ಈ ಜೈಲಿನಲ್ಲಿ ಭದ್ರತಾ ವ್ಯವಸ್ಥೆ ಬಲಪಡಿಸಲು ಕಾರಾಗೃಹ ಇಲಾಖೆ ಆಗಾಗ ವಿಶೇಷ ತಪಾಸಣೆ ನಡೆಸುತ್ತಿದೆ. ಆದರೂ ಮರುಕಳಿಸುತ್ತಿರುವ ಇಂತಹ ಘಟನೆಗಳು ಜೈಲು ಆಡಳಿತದ ವಿಶ್ವಾಸಾರ್ಹತೆಗೆ ಮತ್ತೆ ಪ್ರಶ್ನಾರ್ಥಕ ಚಿಹ್ನೆ ಹಾಕಿವೆ.
