ವೆಸ್ಟ್ ಇಂಡೀಸ್ ತಂಡದ ಗೆಲುವಿಗೆ ದಾಖಲೆ ಬರೆಯುವ 309 ರನ್‌ಗಳು ಬೇಕಾಗಿದ್ದವು. ಅದಕ್ಕಾಗಿ ವೆಸ್ಟ್ ಇಂಡೀಸ್ 117 ರನ್‌ಗಳ ಎರಡನೇ ವಿಕೆಟ್ ಜೊತೆಯಾಟದೊಂದಿಗೆ ವೇದಿಕೆಯನ್ನು ಸಿದ್ಧಪಡಿಸಿತ್ತು. ಕೊನೆಯ 15 ಓವರ್‌ಗಳಲ್ಲಿ ಏಳು ವಿಕೆಟ್ ಕೈಯಲ್ಲಿದ್ದಾಗ ಗೆಲುವಿಗೆ 120 ರನ್ ಅಗತ್ಯವಿತ್ತು. ಆದರೆ, ಅಂತಿಮ ಹಂತದಲ್ಲಿ ಕೆರೇಬಿಯನ್ ತಂಡ ಮುಗ್ಗರಿಸಿದ್ದರಿಂದ ಗೆಲುವು ಭಾರತ ತಂಡದ ಪಾಲಾಯಿತು. ಈ ಗೆಲುವಿನಲ್ಲಿ ಸಿರಾಜ್, ಚಾಹಲ್, ಠಾಕೂರ್ ಸೇರಿದಂತೆ ಹಲವು ಆಟಗಾರರ ಪಾಲು ಇತ್ತು ಅನ್ನೋದು ವಿಶೇಷ.
ರೋವ್ಮನ್ ಪೊವೆಲ್ ಮತ್ತು ನಿಕೋಲಸ್ ಪೂರನ್ ಭಾರತ ತಂಡಕ್ಕೆ ಅಡ್ಡಗಾಲು ಹಾಕುವಂಥ ಬ್ಯಾಟ್ಸ್ ಮನ್ ಗಳಾಗಿದ್ದರು. ಆದರೆ, ಯುಜ್ವೇಂದ್ರ ಚಾಹಲ್ ಪೊವೆಲ್ ಅವರನ್ನು ಔಟ್ ಮಾಡಿದ್ದು ಪಂದ್ಯಕ್ಕೆ ತಿರುವು ನೀಡಿತು. ಆದರೆ ಕಿಂಗ್ ಮತ್ತು ಅಕೆಲ್ ಹೊಸೈನ್ ನಡುವೆ ಮತ್ತು ನಂತರ ಹೊಸೈನ್ ಮತ್ತು ರೊಮಾರಿಯೋ ಶೆಫರ್ಡ್ ನಡುವಿನ ಎರಡು ಜತೆಯಾಟಗಳು ವೆಸ್ಟ್ ಇಂಡೀಸ್‌ನ ಭರವಸೆಯನ್ನು ಹೆಚ್ಚಿಸಿದ್ದವು. ಆದರೆ, ಚಾಹಲ್, ಸಿರಾಜ್ ಮತ್ತು ಪ್ರಸಿದ್ಧ್ ಕೃಷ್ಣ ಕೊನೆಯ ಮೂರು ಓವರ್‌ಗಳಲ್ಲಿ 38 ರನ್ ಗಳನ್ನು ಕಂಟ್ರೋಲ್ ಮಾಡಿದ್ದರಿಂದ ಭಾರತ ಪೋರ್ಟ್ ಆಫ್ ಸ್ಪೇನ್‌ನಲ್ಲಿ ನಡೆಯಲಿರುವ ಮೂರು ODIಗಳಲ್ಲಿ ಮೊದಲನೆಯದನ್ನು ಮೂರು ರನ್‌ಗಳ ಅಂತರದಿಂದ ಗೆಲ್ಲಲು ಸಾಧ್ಯವಾಯಿತು. ಎರಡನೇ ಇನ್ನಿಂಗ್ಸ್ ನ 49ನೇ ಓವರ್ ಎಸೆದ ಪ್ರಸಿಧ್ ಕೃಷ್ಣ ಮೊದಲ ಬಾಲಿನಲ್ಲೇ ಸಿಕ್ಸರ್ ಹೊಡೆಸಿಕೊಂಡು, ನಂತರ ತಮ್ಮ ಓವರ್ ನಲ್ಲಿ ಒಟ್ಟು 12 ರನ್ ಬಿಟ್ಟು ಕೊಟ್ಟು ವೆಸ್ಟ್ ಇಂಡೀಸ್ ಗೆ 6 ಬಾಲ್ ಗಳಲ್ಲಿ 15 ರನ್ ಗಳಿಸುವ ಸವಾಲು ಮುಂದಿಟ್ಟಿದ್ದರು. ಆದರೆ ಕೊನೆಯ ಓವರ್ ನಲ್ಲಿ ಸಿರಾಜ್ ಅಹ್ಮದ್ ಸಂಯಮ ಕಾಯ್ದುಕೊಂಡು ಭಾರತವನ್ನು ಗೆಲುವಿನ ದಡ ಸೇರಿಸಿದರು.
ನಾಯಕ ಪೂರನ್ ಔಟ್ ಆದ ನಂತರ ಚಾಹಲ್, ರೋವ್‌ಮನ್ ಪೊವೆಲ್ ಅವರನ್ನು ಸ್ಲಿಪ್ ನಲ್ಲಿ ಕ್ಯಾಚ್ ಕೊಡುವಂತೆ ಮಾಡಿದರು. ಈ ಸಮಯದಲ್ಲಿ ವೆಸ್ಟ್ ಇಂಡೀಸ್ ಕಥೆ ಮುಗಿಯಿತು ಎಂದುಕೊಂಡಿದ್ದಾಗ ಕಿಂಗ್, ಹೊಸೈನ್ ಮತ್ತು ಶೆಫರ್ಡ್, ಶೋ ಅಭೀ ಬಾಕೀ ಹೈ ಎಂದು ಪಂದ್ಯವನ್ನು ಕೊನೆಯ ಬಾಲಿನವರೆಗೂ ತೆಗೆದುಕೊಂಡು ಹೋದರು.
ಇನ್ನು ಇದಕ್ಕೂ ಮುನ್ನ ಶಿಖರ್ ಧವನ್, ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್ ಅವರ ಉತ್ತಮ ಬ್ಯಾಟಿಂಗ್ ನಿಂದಾಗಿ ಭಾರತ, ವೆಸ್ಟ್ ಇಂಡೀಸ್ ಗೆ 309 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಮೇಯರ್ಸ್, ಬ್ರೂಕ್ಸ್ ಮತ್ತು ಕಿಂಗ್ಸ್ ಅವರ ಜವಾಬ್ದಾರಿಯುತ ಆಟದಿಂದಾಗಿ ವೆಸ್ಟ್ ಇಂಡೀಸ್ ಗೆಲುವಿನ ಕಡೆ ಮುಖ ಮಾಡಿತ್ತು. ಆದರೆ ಭಾರತದ ಆಟಗಾರರ ಸಂಘಟಿತ ಪ್ರದರ್ಶನದಿಂದಾಗಿ ಕೊನೆಯ ಕ್ಷಣಗಳಲ್ಲಿ ವೆಸ್ಟ್ ಇಂಡೀಸ್ ಸೋಲಿನ ರುಚಿ ನೋಡಬೇಕಾಯಿತು. 99 ಬಾಲುಗಳಲ್ಲಿ 87 ರನ್ ಗಳಿಸಿದ ಭಾರತ ತಂಡದ ನಾಯಕ ಶಿಖರ್ ಧವನ್ ಪಂದ್ಯ ಪುರುಷ ಎನಿಸಿಕೊಂಡರು.