ಪ್ರಧಾನಿ ನರೇಂದ್ರ ಮೋದಿ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನಲ್ಲಿ ಆಸಕ್ತಿದಾಯಕ ಹೇಳಿಕೆಯೊಂದನ್ನು ನೀಡಿದರು. ಅವರು ಭಾರತದಲ್ಲಿ ಹೆಚ್ಚುತ್ತಿರುವ ಜವಳಿ ತ್ಯಾಜ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಜವಳಿ ಕ್ಷೇತ್ರದಲ್ಲಿ ಭಾರತ ದೊಡ್ಡ ಸವಾಲನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು. ಈ ಸಮಸ್ಯೆಯನ್ನು ಪರಿಹರಿಸಲು ಮಾಡಲಾಗುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಬೇಕೆಂದು ಅವರು ಕರೆ ನೀಡಿದರು.
ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಎಲ್ಲರಿಗೂ ಸಂಬಂಧಿಸಿದ ಒಂದು ಸವಾಲಿನ ಬಗ್ಗೆ ನಾನು ಮಾತನಾಡಲು ಬಯಸುತ್ತೇನೆ. ಅದು ಜವಳಿ ತ್ಯಾಜ್ಯ.ಇಂದು ಜವಳಿ ತ್ಯಾಜ್ಯದ ಜಗತ್ತಿಗೆ ದೊಡ್ಡ ಸವಾಲಾಗುತ್ತಿದೆ. ಪ್ರಸ್ತುತ ಹಳೆಯ ಬಟ್ಟೆಗಳನ್ನು ಎಸೆದು ಹೊಸ ಬಟ್ಟೆಗಳನ್ನು ಖರೀದಿಸುವ ಅಭ್ಯಾಸ ಹೆಚ್ಚಾಗಿದೆ ಎಂದು ಅವರು ಹೇಳಿದರು. ನಾವು ಎಸೆಯುವ ಹಳೆಯ ಬಟ್ಟೆಗಳು ಏನಾಗುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?” ಎಂದು ಅವರು ಪ್ರಶ್ನಿಸಿದರು.
ಈ ಎಲ್ಲಾ ಬಟ್ಟೆಗಳು ಕಸವಾಗಿ ಬದಲಾಗುತ್ತಿವೆ ಎಂದು ಅವರು ಹೇಳಿದರು. ಈ ವಿಷಯದ ಬಗ್ಗೆ ಸಂಶೋಧನೆ ನಡೆಯುತ್ತಿದ್ದರೂ, ಒಂದು ಅಧ್ಯಯನವು ಜವಳಿ ತ್ಯಾಜ್ಯದ ಶೇಕಡಾ ಒಂದಕ್ಕಿಂತ ಕಡಿಮೆ ಭಾಗವನ್ನು ಹೊಸ ಬಟ್ಟೆಗಳಾಗಿ ಪರಿವರ್ತಿಸಲಾಗುತ್ತಿದೆ ಎಂದು ಹೇಳಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದ್ದು, ಇದು ಅತಿ ಹೆಚ್ಚು ಜವಳಿ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಎಂದು ಅವರು ಹೇಳಿದರು.
ಇದು ಒಂದು ದೊಡ್ಡ ಸವಾಲು, ಆದರೆ ಈ ಸವಾಲನ್ನು ಎದುರಿಸಲು ಭಾರತದಲ್ಲಿ ಅನೇಕ ಶ್ಲಾಘನೀಯ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಅನೇಕ ಭಾರತೀಯ ನವೋದ್ಯಮಗಳು ಬಟ್ಟೆಗಳನ್ನು ಮರುಬಳಕೆ ಮಾಡಲು ಕೆಲಸ ಮಾಡುತ್ತಿವೆ ಮತ್ತು ಅನೇಕ ಯುವಕರು ಸುಸ್ಥಿರ ಫ್ಯಾಷನ್ ಪ್ರಯತ್ನಗಳನ್ನು ಅನುಸರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಈ ಯುವಜನರು ಹಳೆಯ ಬಟ್ಟೆ ಮತ್ತು ಸ್ಯಾಂಡಲ್‌ಗಳನ್ನು ಮರುಬಳಕೆ ಮಾಡಿ ಅಗತ್ಯವಿರುವವರಿಗೆ ಒದಗಿಸುತ್ತಾರೆ. ಅಲಂಕಾರಿಕ ವಸ್ತುಗಳು, ಕೈಚೀಲಗಳು, ಲೇಖನ ಸಾಮಗ್ರಿಗಳು ಮತ್ತು ಆಟಿಕೆಗಳನ್ನು ಜವಳಿ ತ್ಯಾಜ್ಯದಿಂದ ತಯಾರಿಸಲಾಗುತ್ತಿದೆ. ಅನೇಕ ಕಂಪನಿಗಳು ಸಹ ಈಗ ರೀಸೈಕಲ್ ಫ್ಯಾಷನ್ ಬ್ರ್ಯಾಂಡ್ ಜನಪ್ರಿಯಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಹೇಳಿದರು.
ಇದಲ್ಲದೆ, ಕೆಲವೆಡೆ ಬಟ್ಟೆಗಳನ್ನು ಬಾಡಿಗೆಗೆ ನೀಡುತ್ತಿವೆ, ಮತ್ತು ಕೆಲವು ಸಂಸ್ಥೆಗಳು ಹಳೆಯ ಬಟ್ಟೆಗಳನ್ನು ಸಂಗ್ರಹಿಸಿ, ಅವುಗಳಿಗೆ ಹೊಸ ರೂಪ ನೀಡಿ, ಬಡವರಿಗೆ ವಿತರಿಸುತ್ತಿವೆ.
ಈ ಸಂದರ್ಭದಲ್ಲಿ ಅವರು, ಪಾಣಿಪತ್, ತಿರುವೂರು ಮತ್ತು ಬೆಂಗಳೂರಿನಂತಹ ನಗರಗಳು ಜವಳಿ ತ್ಯಾಜ್ಯ ನಿರ್ವಹಣೆಯಲ್ಲಿ ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂದು ಹೇಳಿದರು. ಪಾಣಿಪತ್ ಈಗ ಜವಳಿ ಮರುಬಳಕೆಗೆ ಜಾಗತಿಕ ಕೇಂದ್ರವಾಗುತ್ತಿದೆ ಮತ್ತು ಬೆಂಗಳೂರಿನಲ್ಲಿ ಈ ಕ್ಷೇತ್ರದಲ್ಲಿ ಅನೇಕ ಹೊಸ ತಾಂತ್ರಿಕ ಪರಿಹಾರಗಳನ್ನು ಕಂಡುಕೊಳ್ಳಾಗುತ್ತಿದೆ ಎಂದು ಅವರು ಹೇಳಿದರು.
ತಿರುಪುರದಲ್ಲಿ ಜವಳಿ ತ್ಯಾಜ್ಯವನ್ನು ನಿರ್ವಹಿಸಲು ಶುದ್ಧೀಕರಿಸಿದ ನೀರಿನ ಮತ್ತು ನವೀಕರಿಸಬಹುದಾದ ಇಂಧನನ್ನು ಬಳಸಲಾಗುತ್ತಿದೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಸ್ಪೂರ್ತಿದಾಯಕವೆಂದು ಬಣ್ಣಿಸಿದ ಪ್ರಧಾನಿ, ಪ್ರತಿಯೊಬ್ಬರೂ ಈ ದಿಕ್ಕಿನಲ್ಲಿ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.