ದೆಹಲಿ: ಪ್ಯಾಲೆಸ್ತೀನ್ ವಿಚಾರದಲ್ಲಿ ಮೋದಿ ಸರ್ಕಾರ ಅನುಸರಿಸುತ್ತಿರುವ ಮೌನವು ಮಾನವೀಯತೆ ಮತ್ತು ನೈತಿಕತೆಯನ್ನು ಬಿಟ್ಟುಕೊಟ್ಟಂತೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ಆಂಗ್ಲ ಪತ್ರಿಕೆಯೊಂದರಲ್ಲಿ ಪ್ರಕಟವಾದ ‘ಇಂಡಿಯಾಸ್ ಮ್ಯೂಟೆಡ್ ವಾಯ್ಸ್, ಇಟ್ಸ್ ಡಿಟ್ಯಾಚ್‌ಮೆಂಟ್ ವಿಥ್ ಪ್ಯಾಲೆಸ್ತೀನಾ’ ಶೀರ್ಷಿಕೆಯ ತಮ್ಮ ಲೇಖನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ಯಾಲೆಸ್ತೀನ್ ಕುರಿತು ಇತ್ತೀಚೆಗೆ ಅವರು ಬರೆದ ಮೂರನೇ ಲೇಖನವಿದು.
ವಿದೇಶಾಂಗ ನೀತಿಯ ಕುರಿತು ವಿಮರ್ಶೆ:
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಪ್ರಧಾನಿ ಮೋದಿಗಿರುವ ವೈಯಕ್ತಿಕ ಸ್ನೇಹದ ಆಧಾರದ ಮೇಲೆ ಕೇಂದ್ರ ಸರ್ಕಾರವು ವಿದೇಶಾಂಗ ನೀತಿಗಳನ್ನು ರೂಪಿಸುತ್ತಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ಭಾರತದ ವಿದೇಶಾಂಗ ನೀತಿಗಳು ಸಾಂವಿಧಾನಿಕ ಮೌಲ್ಯಗಳು ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳ ದೃಷ್ಟಿಕೋನದಲ್ಲಿರಬೇಕು ಹೊರತು, ವೈಯಕ್ತಿಕ ಸ್ನೇಹದ ಮೇಲೆ ಇರಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.
ಐತಿಹಾಸಿಕ ನಿಲುವು ಮುಂದುವರಿಸಲು ಸಲಹೆ:
“ಇತ್ತೀಚೆಗೆ ಫ್ರಾನ್ಸ್, ಬ್ರಿಟನ್, ಕೆನಡಾ, ಪೋರ್ಚುಗಲ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಪ್ಯಾಲೆಸ್ತೀನನ್ನು ಒಂದು ದೇಶವಾಗಿ ಗುರುತಿಸಿವೆ. ಇದುವರೆಗೆ 150ಕ್ಕೂ ಹೆಚ್ಚು ದೇಶಗಳು ಪ್ಯಾಲೆಸ್ತೀನ್ ದೇಶವನ್ನು ಮಾನ್ಯ ಮಾಡಿವೆ” ಎಂದು ಅವರು ತಿಳಿಸಿದರು.
ಭಾರತವು 1988ರ ನವೆಂಬರ್ 18ರಂದೇ ಪ್ಯಾಲೆಸ್ತೀನ್ ಶವಾಗಿ ಗುರುತಿಸಿತ್ತು ಮತ್ತು ದಶಕಗಳಿಂದ ಪ್ಯಾಲೆಸ್ತೀನ್ ವಿಮೋಚನಾ ಸಂಸ್ಥೆಗೆ ಬೆಂಬಲ ನೀಡಿದೆ. ಈ ಐತಿಹಾಸಿಕ ಪರಂಪರೆಯನ್ನು ಮುಂದುವರಿಸಬೇಕು ಮತ್ತು ಈ ನಿಟ್ಟಿನಲ್ಲಿ ಧೈರ್ಯ ಮತ್ತು ಉಪಕ್ರಮವನ್ನು ತೋರಿಸಬೇಕು ಎಂದು ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.