Monday, July 28, 2025

ಸತ್ಯ | ನ್ಯಾಯ |ಧರ್ಮ

2020-21ರಿಂದ 274 ಪತ್ರಕರ್ತರಿಗೆ ಮೋದಿ ಸರ್ಕಾರದಿಂದ 12.7 ಕೋಟಿ 

ನವದೆಹಲಿ: ಲೋಕಸಭೆಗೆ ನೀಡಿದ ಉತ್ತರದಲ್ಲಿ, ನರೇಂದ್ರ ಮೋದಿ ಸರ್ಕಾರವು 2020-2021 ರ ಹಣಕಾಸು ವರ್ಷದಿಂದ ಈ ವರ್ಷದ ನವೆಂಬರ್‌ವರೆಗೆ 274 ಪತ್ರಕರ್ತರಿಗೆ ಒಟ್ಟು 12.73 ಕೋಟಿ ರೂಪಾಯಿ ಆರ್ಥಿಕ ನೆರವನ್ನು ನೀಡಿದೆ.

ನ್ಯಾಷನಲ್‌ ಕಾಂಗ್ರೇಸ್‌ ಪಾರ್ಟಿ (ಎನ್‌ಸಿಪಿ) ರಾಯಗಢದ ಸಂಸದ ಸುನಿಲ್ ದತ್ತಾತ್ರೇ ತತ್ಕರೆ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್  ಪತ್ರಕರ್ತರ ಕಲ್ಯಾಣ ಯೋಜನೆಯಡಿ ಪತ್ರಕರ್ತರಿಗೆ ನೀಡಿರುವ ನೆರವಿನ ವಿವರಗಳನ್ನು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ.

2021ರ ಆರ್ಥಿಕ ವರ್ಷದಲ್ಲಿ 56 ಪತ್ರಕರ್ತರಿಗೆ 2.6 ಕೋಟಿ ರುಪಾಯಿ, 2021-22ರಲ್ಲಿ 134 ಮಂದಿಗೆ 6.47 ಕೋಟಿ ರುಪಾಯಿ, 2022-23ರಲ್ಲಿ 45 ಮಂದಿಗೆ 1.99 ಕೋಟಿ ರುಪಾಯಿ, ಪ್ರಸ್ತುತ ಈ ವರ್ಷದ ನವೆಂಬರ್ ವರೆಗೆ 39 ಪತ್ರಕರ್ತರಿಗೆ 1.65 ಕೋಟಿ ರುಪಾಯಿ ಸಹಾಯಧನ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

“ಪತ್ರಕರ್ತರ ಕಲ್ಯಾಣ ಯೋಜನೆಯ ಮುಖ್ಯ ಉದ್ದೇಶವೆಂದರೆ ಸಾವು, ಶಾಶ್ವತ ಅಂಗವೈಕಲ್ಯ, ದೊಡ್ಡ ಕಾಯಿಲೆಗಳಿಗೆ ಚಿಕಿತ್ಸೆ ಮತ್ತು ಅಪಘಾತಗಳಲ್ಲಿ ಆಸ್ಪತ್ರೆ ಖರ್ಚಿಗಾಗಿ ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಪರಿಹಾರವನ್ನು ಒದಗಿಸುವುದು. ಪತ್ರಿಕಾ ಮಾಹಿತಿ ಬ್ಯೂರೋ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಂದ ಮಾನ್ಯತೆ ಪಡೆದ ಪತ್ರಕರ್ತರು ಹಾಗೂ ಮಾನ್ಯತೆ ಪಡೆಯದ ಪತ್ರಕರ್ತರು ಈ ಯೋಜನೆಯ ವ್ಯಾಪ್ತಿಗೆ ಒಳಪಡುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಈ ನೆರವಿನ ಪ್ರಕ್ರಿಯೆಯನ್ನು ವಿವರಿಸುತ್ತಾ, ಪತ್ರಕರ್ತರು ಮತ್ತು ಅವರ ಕುಟುಂಬಗಳಿಗೆ ಈ ನೆರವು ನೀಡಲು ಸಮಿತಿಯು ಸಲಹೆಗಳನ್ನು ಪಟ್ಟಿ ಮಾಡಿದೆ ಎಂದು ಠಾಕೂರ್ ಹೇಳಿದ್ದಾರೆ. “ಜರ್ನಲಿಸ್ಟ್ ವೆಲ್ಫೇರ್ ಸ್ಕೀಮ್ ಅಡಿಯಲ್ಲಿ, ಕಾರ್ಯದರ್ಶಿ (I&B) ಅಧ್ಯಕ್ಷತೆಯ ಸಮಿತಿಯಿದೆ ಮತ್ತು ಪ್ರಧಾನ ಮಹಾನಿರ್ದೇಶಕರು, ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ, ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಖಾಸಗಿ ಮಾಧ್ಯಮ ಸಂಸ್ಥೆಗಳ ಆರು ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ,” ಎಂದು ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page