ಹೊಸದೆಹಲಿ: ರಾಜಸ್ಥಾನ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷಪೂರಿತ ಭಾಷಣ ಮಾಡಿದ್ದಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮೋದಿ ಹೊಸ ನಡೆಗಳನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು. ಅವರದು ವಿಷ ಉಗುಳುವ ಭಾಷೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೇಶವು ನಿರುದ್ಯೋಗ ಮತ್ತು ಹಣದುಬ್ಬರದಂತಹ ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಎಲ್ಲವೂ ಸರಿಯಾಗಿದೆ ಎಂದು ಮೋದಿ ಹೇಳುತ್ತಾರೆ ಎಂದು ರಾಹುಲ್ ಸೋಮವಾರ ಸಾಮಾಜಿಕ ಮಾಧ್ಯಮ ‘ಎಕ್ಸ್’ ನಲ್ಲಿ ದೂರಿದ್ದಾರೆ.
ಇದೇ ವೇಳೆ ಮೋದಿ ವಿರುದ್ಧ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಪ್ರಧಾನಿಯವರ ಹೇಳಿಕೆಗಳು ಆಕ್ಷೇಪಾರ್ಹ ಮತ್ತು ಅವರ ಸ್ಥಾನಮಾನಕ್ಕೆ ತಕ್ಕುದಲ್ಲ ಎಂದು ಅದು ಹೇಳಿದೆ. ಅಭಿಷೇಕ್ ಮನುಸಿಂಘ್ವಿ ನೇತೃತ್ವದ ಕಾಂಗ್ರೆಸ್ ನಿಯೋಗ ಚುನಾವಣಾ ಆಯೋಗವನ್ನು ಭೇಟಿ ಮಾಡಿದೆ. ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಮೋದಿಗೆ ಮನವಿ ಮಾಡಲಾಗಿದೆ. ಇದೇ ವೇಳೆ ಕಾಂಗ್ರೆಸ್ ಪಕ್ಷವು ಪ್ರಧಾನಿ ಮೋದಿ ವಿರುದ್ಧ ಇನ್ನೂ 16 ದೂರುಗಳನ್ನು ಸಲ್ಲಿಸಿದೆ. ಈ ಬಗ್ಗೆ ತನಿಖೆ ನಡೆಸಿ ಆಡಳಿತಾರೂಢ ಬಿಜೆಪಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಆಗ್ರಹಿಸಿದೆ.