ಹೆದರಬೇಡಿ ನಾನು ನಿಮ್ಮೊಂದಿಗೆ ಇದ್ದೇನೆ: ಹೊಸ ಸಂಸದರಿಗೆ ಮೋದಿ ಭರವಸೆ

ನ್ಯೂದೆಹಲಿ: ಸಂಸತ್ತು ಪ್ರಜಾಪ್ರಭುತ್ವದ ಅತ್ಯುನ್ನತ ದೇವಾಲಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ ಕಲಾಪಗಳಿಗೆ ಪದೇಪದೇ ಅಡ್ಡಿಪಡಿಸುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದಿದ್ದಾರೆ. ಗದ್ದಲದ ಕಾರಣದಿಂದಾಗಿ ಹೊಸ ಸದಸ್ಯರಿಗೆ ಸದನದಲ್ಲಿ ಮಾತನಾಡುವ ಅವಕಾಶ ಸಿಗುತ್ತಿಲ್ಲ, ಇದು ಅವರಿಗೆ ಆಗುತ್ತಿರುವ ಅನ್ಯಾಯವಾಗಿದ್ದು ಸಂಸತ್ತಿನ ಕಲಾಪಗಳು ಸುಗಮವಾಗಿ ನಡೆಯಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಆತಂಕಪಡುವ ಅಗತ್ಯವಿಲ್ಲ, ಹೊಸ ಸದಸ್ಯರಿಗೆ ತಮ್ಮ ಬೆಂಬಲ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಅಧಿಕೃತ ನಿವಾಸದಲ್ಲಿ ನೂತನ ಎನ್‌ಡಿಎ ಸಂಸದರೊಂದಿಗೆ ನಡೆದ ಉಪಹಾರ ಕೂಟದ ಸಭೆಯಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಎನ್‌ಡಿಎ ಮಿತ್ರಪಕ್ಷಗಳನ್ನು ಸೇರಿದ ನೂತನ ಸಂಸದರು ಸೇರಿದಂತೆ ಹಲವು ಎನ್‌ಡಿಎ ಸಂಸದರು ಈ ಸಭೆಯಲ್ಲಿ ಭಾಗವಹಿಸಿದ್ದರು. ಎನ್‌ಡಿಎ ಒಂದು ಕುಟುಂಬವಿದ್ದಂತೆ, ಇಲ್ಲಿನ ಪ್ರತಿಯೊಂದು ಮಿತ್ರಪಕ್ಷಕ್ಕೂ ಹಾಗೂ ಪ್ರತಿಯೊಬ್ಬ ಸಂಸದರಿಗೂ ಸಮಾನ ಗೌರವ ಸಿಗಲಿದೆ ಎಂದು ಮೋದಿ ಅಭಯ ನೀಡಿದರು. ಯಾರ ಬಗ್ಗೆಯೂ ಆತಂಕ ಪಡುವ ಅಗತ್ಯವಿಲ್ಲ, ನಾನು ನಿಮ್ಮೊಂದಿಗಿದ್ದೇನೆ ಎಂದು ಪ್ರಧಾನಿ ಭರವಸೆ ನೀಡಿದರು.

ತಮ್ಮ ತಮ್ಮ ರಾಜ್ಯಗಳ ಅಭಿವೃದ್ಧಿಗಾಗಿ ಶ್ರಮಿಸುವಂತೆ ಸಂಸದರಿಗೆ ಕರೆ ನೀಡಿದ ಅವರು, ರಾಜ್ಯಗಳು ಅಭಿವೃದ್ಧಿಯಾದರೆ ಮಾತ್ರ ದೇಶ ಪ್ರಗತಿ ಸಾಧಿಸಲು ಸಾಧ್ಯ ಎಂದರು. ತಮ್ಮ ಕ್ಷೇತ್ರಗಳ ಅಭಿವೃದ್ಧಿ ಕೆಲಸಗಳಿಗೆ ಸಂಬಂಧಿಸಿದಂತೆ ಅಗತ್ಯವಿದ್ದರೆ ನೇರವಾಗಿ ಪ್ರಧಾನಿ ಕಚೇರಿಯನ್ನು (ಪಿಎಂಒ) ಸಂಪರ್ಕಿಸಬಹುದು ಎಂದು ತಿಳಿಸಿದರು. ಪ್ರತಿಯೊಬ್ಬ ಸಂಸದರು ಸಂಸತ್ತಿನ ಇತಿಹಾಸವನ್ನು ಅಧ್ಯಯನ ಮಾಡಿ ತಮ್ಮ ಭಾಷಣಗಳನ್ನು ಪರಿಣಾಮಕಾರಿಯಾಗಿ ಮಂಡಿಸಬೇಕು ಹಾಗೂ ರೈತರು, ಬಡವರು ಮತ್ತು ಕಾರ್ಮಿಕರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಜನರೊಂದಿಗೆ ಸದಾ ಸಂಪರ್ಕದಲ್ಲಿರಬೇಕು ಎಂದು ಅವರು ಸಲಹೆ ನೀಡಿದರು.

Related Articles

ಇತ್ತೀಚಿನ ಸುದ್ದಿಗಳು