Friday, June 14, 2024

ಸತ್ಯ | ನ್ಯಾಯ |ಧರ್ಮ

ಬೆಂಗಳೂರಿನಲ್ಲಿ ಮೋದಿ ರೋಡ್ ಶೋ : ಬಿಜೆಪಿಯಿಂದ ISRO ಸಂಸ್ಥೆಯ ಸಾಧನೆಯ ಹೈಜಾಕ್!

ರಾಜ್ಯ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದು, ಇಸ್ರೋ (ISRO) ಸಂಸ್ಥೆಯ ವಿಜ್ಞಾನಿಗಳ ಜೊತೆಗೆ ಯಶಸ್ಸಿನ ಅಭಿನಂದನೆ ಸಲ್ಲಿಸಲು ಬರುವ ಮಾಹಿತಿ ಹೊರಬಿದ್ದಿದೆ.

ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಆರ್. ಅಶೋಕ್, ಶನಿವಾರ ಬೆಳಗ್ಗೆ ನರೇಂದ್ರ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ. ಮೋದಿಯವರನ್ನು ಸ್ವಾಗತಿಸಲು ಸುಮಾರು 5-6 ಸಾವಿರ ಜನ ಸೇರಲಿದ್ದಾರೆ ಎಂದು ಹೇಳಿದ್ದಾರೆ.

ನರೇಂದ್ರ ಮೋದಿ ಬೆಂಗಳೂರು ಭೇಟಿಯ ಹಿಂದೆ ಬಿಜೆಪಿ ಮತ್ತದೇ ರಾಜಕೀಯ ಲಾಭಕ್ಕೆ ಮುಂದಾಗಲಿದೆ ಎಂಬ ಸಣ್ಣ ಅನುಮಾನ ಕೂಡಾ ವ್ಯಕ್ತವಾಗಿದೆ. ಈ ಬಗ್ಗೆ ಸುಳಿವು ನೀಡಿದ ಬಿಜೆಪಿ ನಾಯಕ ಆರ್.ಅಶೋಕ್ ‘ನರೇಂದ್ರ ಮೋದಿಯವರಿಗೆ ಅದ್ದೂರಿಯಾಗಿ ಸ್ವಾಗತ ಕೋರಲು ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಇಸ್ರೋ ಸಂಸ್ಥೆ ಇರುವ ಪ್ರದೇಶದ ವರೆಗೂ ನಾವು ರೋಡ್ ಶೋ ನಡೆಸುತ್ತೇವೆ’ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ.

ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ, ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ‌ ಮಾಡಲಾಗುತ್ತದೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ. ಈ ಬಗ್ಗೆ ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಲಾಗುವುದು. ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ರಾಜಕೀಯವಾಗಿ ನೋಡಿದರೆ ನರೇಂದ್ರ ಮೋದಿ ಬೆಂಗಳೂರು ಭೇಟಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸುವುದು ಸಹಜ ಎಂದರೂ, ರೋಡ್ ಶೋ ವಿಚಾರದಲ್ಲಿ ಬಿಜೆಪಿ ಸಂಪೂರ್ಣವಾಗಿ ತನ್ನ ಹಳೆಯ ಹಳಸಲು ಪ್ರಚಾರದ ಸೋಗಿಗೆ ಬೀಳಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಯಾಕೆಂದರೆ ಚಂದ್ರಯಾನ – 3 ಸಂಪೂರ್ಣ ಯಶಸ್ಸು ಸಿಗಬೇಕಿರುವುದು ಇಸ್ರೋ ಸಂಸ್ಥೆಗೆ, ವಿಜ್ಞಾನಿಗಳು ಹಾಗೂ ತಂತ್ರಜ್ಞರಿಗೆ. ಆದರೆ ನರೇಂದ್ರ ಮೋದಿಯವರ ರೋಡ್ ಶೋ ಅರ್ಥವೇ ಇಲ್ಲದಂತಿದೆ.

ಒಬ್ಬ ಪ್ರಧಾನಿಯಾಗಿ ಅವರು ಇಸ್ರೋ ಸಂಸ್ಥೆಗೆ ಭೇಟಿ ನೀಡುವುದು ಅವರ ಒಂದು ಜವಾಬ್ದಾರಿಯನ್ನು ಸೂಚಿಸಿದರೆ, ರೋಡ್ ಶೋ ಮಾತ್ರ ಬಿಜೆಪಿ ಪಕ್ಷ ಸಂಪೂರ್ಣವಾಗಿ ಪ್ರಚಾರದ ಹುಚ್ಚಿಗೆ ಬಿದ್ದದ್ದನ್ನು ಎತ್ತಿ ಹಿಡಿಯುತ್ತಿದೆ. ಆ ಮೂಲಕ ಇಸ್ರೋ ಸಂಸ್ಥೆಯ ಸಾಧನೆಯನ್ನು ನೇರವಾಗಿ ತನ್ನದೇ ಸಾಧನೆ ಎಂಬಂತೆ ಬಿಜೆಪಿ ಪಕ್ಷ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇನ್ನು ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಂದರ್ಭದಲ್ಲಿ ಇಸ್ರೋ ಯೂಟ್ಯೂಬ್ ಚಾನಲ್ ನಲ್ಲಿ ಲೈವ್ ನಲ್ಲೂ ಉಪಗ್ರಹ ಲ್ಯಾಂಡ್ ಆಗುವುದನ್ನು ಸಂಪೂರ್ಣವಾಗಿ ತೋರಿಸದೇ, ನರೇಂದ್ರ ಮೋದಿ ಭಾಷಣಕ್ಕೆ ಆರಂಭಿಸಿದ ಬಗ್ಗೆಯೂ ಸಹ ಹಲವಷ್ಟು ಟೀಕೆ ವ್ಯಕ್ತವಾಗಿದೆ. ದೇಶ ಏನೇ ಸಾಧನೆ ಮಾಡಲಿ, ಆ ಸಾಧನೆಗೆ ಯಾರೇ ಕಾರಣರಾಗಲಿ ಯಶಸ್ಸಿನ ಕ್ರೆಡಿಟ್ ತನಗೇ ಸಿಗಬೇಕು ಎಂಬ ಧೋರಣೆ ಬಗ್ಗೆ ಟೀಕೆಗಳು ಶುರುವಾಗಿವೆ. ಸಧ್ಯ ಶನಿವಾರ ನಡೆಯಬಹುದಾದ ನರೇಂದ್ರ ಮೋದಿಯವರ ರೋಡ್ ಶೋ ಕೂಡಾ ಇಂತದ್ದೇ ಇಂದು ಗಿಮಿಕ್ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಇನ್ನು ಶನಿವಾರ ಬೆಳಗ್ಗೆ ನೇರವಾಗಿ ದಕ್ಷಿಣ ಆಫ್ರಿಕಾದಿಂದ 5.55ಕ್ಕೆ ಪ್ರಧಾನಿ ನರೇಂದ್ರ ಮೋದಿ ನೇರವಾಗಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಒಂದೂವರೆ ಕಿಲೋಮೀಟರ್ ರೋಡ್‌ಶೋಗೆ ಬಿಜೆಪಿ ತೀರ್ಮಾನಿಸಿದೆ. 7 ಗಂಟೆಗೆ ಪೀಣ್ಯದಲ್ಲಿರುವ ಇಸ್ಟ್ರಾಕ್‌ಗೆ ಮೋದಿ ಭೇಟಿ ನೀಡಲಿದ್ದಾರೆ. ಅಲ್ಲಿ, ಇಸ್ರೋ ಮುಖ್ಯಸ್ಥರು, ವಿಜ್ಞಾನಿಗಳಿಗೆ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಲಿದ್ದಾರೆ. ಬೆಳಗ್ಗೆ 8 ಗಂಟೆವರೆಗೆ ವಿಜ್ಞಾನಿಗಳ ಜತೆಗೆ ಸಭೆ ನಡೆಸಲಿದ್ದಾರೆ. ಬೆಳಗ್ಗೆ 8.35ಕ್ಕೆ ಎಚ್‌ಎಎಲ್‌ನಿಂದ ಹೊರಟು 11.35ಕ್ಕೆ ನವದೆಹಲಿಗೆ ವಾಪಸ್ ಹೋಗಲಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು