ಹೊಸದಿಲ್ಲಿ: ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಭಾರತಕ್ಕೆ “ನಿಜವಾದ ಸ್ವಾತಂತ್ರ್ಯ” ಸಿಕ್ಕಿದೆ ಎಂಬ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆ ದೇಶದ್ರೋಹಕ್ಕೆ ಸಮಾನವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ಧಾಳಿ ನಡೆಸಿದ್ದಾರೆ.
ದಿಲ್ಲಿಯಲ್ಲಿ ಕಾಂಗ್ರೆಸ್ ನ ನೂತನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ರಾಹುಲ್ ಗಾಂಧಿ, 1947ರಲ್ಲಿ ಭಾರತವು ನಿಜವಾದ ಸ್ವಾತಂತ್ರ್ಯವನ್ನು ಗಳಿಸಲಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ, ಪ್ರತಿಯೊಬ್ಬ ಭಾರತೀಯ ನಾಗರಿಕರಿಗೆ ಮಾಡಿದ ಅವಮಾನವಾಗಿದೆ ಮತ್ತು ನಮ್ಮ ಸಂವಿಧಾನದ ಮೇಲಿನ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಮೋಹನ್ ಭಾಗವತ್ ಅವರು ಸ್ವತಂತ್ರ ಚಳುವಳಿ, ಸಂವಿಧಾನದ ಬಗ್ಗೆ ಪ್ರತಿ 2-3 ದಿನಗಳಿಗೊಮ್ಮೆ ನಿರ್ಭಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ನಿನ್ನೆ ಹೇಳಿದ್ದು ದೇಶದ್ರೋಹವಾಗಿದೆ. ಏಕೆಂದರೆ ಅದು ಸಂವಿಧಾನ ಅಸಿಂಧು ಮತ್ತು ಬ್ರಿಟಿಷರ ವಿರುದ್ಧದ ಹೋರಾಟ ಅಸಿಂಧು ಎಂದು ಹೇಳುತ್ತದೆ. ಇದನ್ನು ಸಾರ್ವಜನಿಕವಾಗಿ ನಿರ್ಭಯವಾಗಿ ಹೇಳಿದ್ದಾರೆ. ಬೇರೆ ಯಾವುದೇ ದೇಶದಲ್ಲಾಗಿರುತ್ತಿದ್ದರೆ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.