Thursday, June 13, 2024

ಸತ್ಯ | ನ್ಯಾಯ |ಧರ್ಮ

ಈ ಬಾರಿಯ ಚುನಾವಣೆ ನ್ಯಾಯಯುತ ರೀತಿಯಲ್ಲಿ ನಡೆದಿಲ್ಲ, ಸಾರ್ವಜನಿಕ ಸೇವಕ ಅಹಂಕಾರಿಯಾಗಿರಬಾರದು – ಮೋಹನ್‌ ಭಾಗವತ್

ಚುನಾವಣೆ ಮುಗಿದು ಫಲಿತಾಂಶ ಬಂದರೂ RSS ಹಾಗೂ ಬಿಜೆಪಿ ನಡುವಿನ ಶೀತಲ ಸಮರ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿಯೆನ್ನುವಂತೆ ನಿನ್ನೆ ನಡೆದ RSS ಸಮಾವೇಶದಲ್ಲಿ ಅದರ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಮೋದಿಯ ವಿರುದ್ಧ ಪರೋಕ್ಷ ದಾಳಿ ಮಾಡಿದ್ದಾರೆ. ಮತ್ತು ವಿಪಕ್ಷಗಳ ಬೆಂಬಲಕ್ಕೆ ನಿಂತಿದ್ದಾರೆ.

ನಾಗ್ಪುರದಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ಸಹಮತ ಅಥವಾ ಒಮ್ಮತದ ವಾತಾವರಣ ನಿರ್ಮಾಣಕ್ಕೆ ಒತ್ತು ನೀಡಬೇಕೆಂದು ಕರೆ ನೀಡಿದರು ಮತ್ತು “ಒಮ್ಮತದಿಂದ ಕೆಲಸ ಮಾಡುವುದು ಭಾರತದ ಸಂಪ್ರದಾಯ” ಎಂದು ಹೇಳಿದರು. ಚುನಾವಣೆಯ ಸಮಯದಲ್ಲಿ ಸ್ಪರ್ಧೆ ಅತ್ಯಗತ್ಯವಾದರೂ, ಚುನಾವಣಾ ಪ್ರಚಾರದ ಸಮಯದಲ್ಲಿ ಸಭ್ಯತೆಗೆ ಸಂಬಂಧಿಸಿ ಎಲ್ಲಾ “ಮಿತಿಗಳನ್ನು ದಾಟಲಾಗಿದೆ” ಎಂದು ಅವರು ಹೇಳಿದರು.

ಒಂದು ದೇಶ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ಮೇಲೆ ಅಲ್ಲಿ ಚುನಾವಣೆ ನಡೆಯುವುದು ಸಹಜ. ಆ ಸಂದರ್ಭದಲ್ಲಿ ಚುನಾವಣೆಯೆನ್ನುವುದು ನ್ಯಾಯಯುತವಾಗಿ ನಡೆಯಬೇಕು. ಮಾತುಗಳು ಸಭ್ಯತೆಯ ಎಲ್ಲೆಯನ್ನು ಮೀರಬಾರದು. ವಿರೋಧ ಪಕ್ಷಗಳನ್ನು ವಿರೋಧಿಗಳಂತೆ ನೋಡುವ ಬದಲು ಅವುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರತಿಪಕ್ಷಗಳನ್ನಾಗಿ ನೋಡಬೇಕು. ಸಹಮತಿ ಮತ್ತು ಸಹನೆ ನಮ್ಮ ದೇಶದ ಶಕ್ತಿ ಎಂದು ಅವರು ಹೇಳಿದ್ದಾರೆ.

ಆಧುನಿಕ ತಂತ್ರಜ್ಞಾನವಾದ ಎಐ ಬಳಸಿ ನಕಲಿ ವಿಡಿಯೋಗಳನ್ನು ಹರಿಬಿಟ್ಟ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ ಅವರು ವಿದ್ಯೆ ಜನರಿಗೆ ಮಾರ್ಗದರ್ಶನ ನೀಡಲು ಬಳಕೆಯಾಗಬೇಕು. ಅದರ ದುರುಪಯೋಗ ಸರಿಯಲ್ಲ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ವಿರೋಧ ಪಕ್ಷಗಳಿಗೆ ಸ್ಪರ್ಧೆಗೆ ಸರಿಯಾದ ವಾತಾವರಣವನ್ನು ನಿರ್ಮಿಸಬೇಕು. ಆದರೆ ಈ ಬಾರಿ ಅದು ಆಗಿಲ್ಲ. ಚುನಾವಣೆ ಎಂದ ಮೇಲೆ ನಾನೇ ಗೆಲ್ಲಬೇಕು ಎನ್ನುವ ಆಸೆಯಿರುತ್ತದೆ ಆದರೆ ಹಾಗೆಂದು ವಿರೋಧ ಪಕ್ಷಗಳನ್ನು ಹತ್ತಿಕ್ಕಲು ಪ್ರಯತ್ನಿಸಬಾರದು ಎಂದು ಅವರು ಹೇಳಿದರು.

ಜನಸೇವಕರಿಗೆ ವಿನಯ ಬಹಳ ಮುಖ್ಯ ಅವರಿಗೆ ಅಹಂಕಾರ ಇರಬಾರದು ಎಂದು ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಸದಾ ಪರೋಕ್ಷ ಹೇಳಿಕೆಗಳಿಗೆ ಖ್ಯಾತರಾಗಿರುವ ಮೋಹನ್‌ ಭಾಗವತ್‌ ತಮ್ಮ ನಿನ್ನೆಯ ಹೇಳಿಕೆಯಲ್ಲೂ ಬಿಜೆಪಿ ಮತ್ತು ಮೋದಿಯನ್ನು ಪರೋಕ್ಷ ಹೇಳಿಕೆಗಳ ಮೂಲಕ ಟೀಕಿಸಿದ್ದಾರೆ.

ಅವರು ಮಣಿಪುರದಲ್ಲಿ ಶಾಂತಿ ನೆಲೆಸಲು ಅಗತ್ಯವಿರುವ ಕೆಲಸವನ್ನೂ ಸರ್ಕಾರ ಮಾಡಬೇಕಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು