ದಾವಣಗೆರೆ: ಮಂಗಗಳ ಗುಂಪಿನ ದಾಳಿಗೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಕರ್ನಾಟಕದ ದಾವಣಗೆರೆಯಿಂದ ಸೋಮವಾರ ವರದಿಯಾಗಿದೆ.
ಮೃತರನ್ನು ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದ ನಿವಾಸಿ 60 ವರ್ಷದ ಗುಟ್ಟೆಪ್ಪ ಎಂದು ಗುರುತಿಸಲಾಗಿದ್ದು, ಇವರು ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷರಾಗಿದ್ದರು.
ಗುಟ್ಟೆಪ್ಪ ಬೆಳಗ್ಗೆ ವಾಕಿಂಗ್‌ಗೆಂದು ಮನೆಯಿಂದ ಹೊರಗೆ ಬಂದಾಗ ಕೋತಿ ದಾಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡ ಗುಟ್ಟೆಪ್ಪ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಬಿಜೆಪಿ ಮಾಜಿ ಶಾಸಕ, ಎಮ್ ಪಿ ರೇಣುಕಾಚಾರ್ಯ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.
ಗ್ರಾಮದಲ್ಲಿ ಕೋತಿ, ಕರಡಿ, ಚಿರತೆಗಳ ಹಾವಳಿ ಕುರಿತು ಗ್ರಾಮಸ್ಥರು ರೇಣುಕಾಚಾರ್ಯ ಅವರಿಗೆ ದೂರು ನೀಡಿದ್ದರು.
ಮಾನವ-ಪ್ರಾಣಿ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಅರಣ್ಯ ಇಲಾಖೆಯೊಂದಿಗೆ ಮನವಿ ಮಾಡುವುದಾಗಿ ರೇಣುಕಾಚಾರ್ಯ ಗ್ರಾಮಸ್ಥರಿಗೆ ಭರವಸೆ ನೀಡಿದರು.