ದೆಹಲಿ: ‘ಅಬ್ ಕೀ ಬಾರ್, 400 ಪಾರ್’ ಎಂಬ ಘೋಷಣೆಯೊಂದಿಗೆ 2024ರ ಲೋಕಸಭಾ ಚುನಾವಣೆಗೆ ಧುಮುಕಿದ್ದ ಎನ್‌ಡಿಎ ಮೈತ್ರಿಕೂಟದ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಕನಸು ಕಮರಿಹೋಗಿದ್ದು, ಪ್ರಸ್ತುತ ಚುನಾವಣೆ ನಡೆದರೂ ಆ ಗುರಿ ತಲುಪುವುದು ಸಾಧ್ಯವಿಲ್ಲ ಎಂದು ಇಂಡಿಯಾ ಟುಡೇ ಮತ್ತು ಸಿ-ವೋಟರ್ ಸಂಸ್ಥೆಗಳು ಜಂಟಿಯಾಗಿ ನಡೆಸಿರುವ ನೂತನ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆ ತಿಳಿಸಿದೆ.
ಇಂದೇ ಲೋಕಸಭಾ ಚುನಾವಣೆ ನಡೆದರೆ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟಕ್ಕೆ 326 ಸ್ಥಾನಗಳು ಲಭಿಸಬಹುದು ಎಂದು ಸಮೀಕ್ಷೆ ಅಂದಾಜಿಸಿದೆ. ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟಕ್ಕೆ 185 ಸ್ಥಾನಗಳು ದೊರೆಯುವ ಸಾಧ್ಯತೆಯಿದ್ದು, ಉಳಿದ ಪಕ್ಷಗಳು 34 ರಿಂದ 35 ಸ್ಥಾನಗಳಿಗೆ ಸೀಮಿತವಾಗಲಿವೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಜನವರಿಯಲ್ಲಿ ಇದೇ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಎನ್‌ಡಿಎಗೆ 352 ಸ್ಥಾನಗಳು ಲಭ್ಯವಾಗುವ ನಿರೀಕ್ಷೆಯಿತ್ತು; ಆದರೆ ಈಗಿನ ಸಮೀಕ್ಷೆಯಲ್ಲಿ 26 ಸ್ಥಾನಗಳು ಕುಸಿದು 326ಕ್ಕೆ ತಲುಪಿರುವುದು ಗಮನಾರ್ಹ.
ಪರೀಕ್ಷಾ ಪೇಪರ್ ಸೋರಿಕೆ ಪ್ರಕರಣಗಳು ಹಾಗೂ ಹಾರ್ಮುಜ್ ಜಲಸಂಧಿ ಬಿಕ್ಕಟ್ಟಿನಿಂದಾಗಿ ತೈಲ ಬೆಲೆ ಏರಿಕೆಯಾಗಿರುವುದು ಕೇಂದ್ರ ಸರ್ಕಾರದ ಜನಪ್ರಿಯತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಸಮೀಕ್ಷೆ ವಿಶ್ಲೇಷಿಸಿದೆ. ಜುಲೈ 1 ರಿಂದ ಆಗಸ್ಟ್ 25 ರ ನಡುವೆ 25,184 ಜನರನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ.
ಸಿಜೆಪಿಗೆ ಜನರ ನಕಾರ: ಪೇಪರ್ ಸೋರಿಕೆ ವಿರುದ್ಧ ‘ಜೆನ್ ಜಿ’ ಚಳವಳಿಯನ್ನು ಮುನ್ನಡೆಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ರಾಜಕೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸಿದರೆ ತಾವು ಮತ ನೀಡುವುದಿಲ್ಲ ಎಂದು ಶೇ. 43ರಷ್ಟು ಜನರು ಸ್ಪಷ್ಟಪಡಿಸಿದ್ದಾರೆ. ಇನ್ನು ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮೂರನೇ ಸ್ಥಾನಕ್ಕೆ ಬಂದಿದ್ದು, ಶೇ. 9.2ರಷ್ಟು ಜನರು ಅವರನ್ನು ಬೆಂಬಲಿಸಿದ್ದಾರೆ.
