Home ಬೆಂಗಳೂರು ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾದೇಶಿಗರಿಲ್ಲ; ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡಲ್ಲ: ಡಾ. ಜಿ. ಪರಮೇಶ್ವರ್

ಕೋಗಿಲು ಬಡಾವಣೆಯಲ್ಲಿ ಬಾಂಗ್ಲಾದೇಶಿಗರಿಲ್ಲ; ನೈತಿಕ ಪೊಲೀಸ್‌ಗಿರಿಗೆ ಅವಕಾಶ ನೀಡಲ್ಲ: ಡಾ. ಜಿ. ಪರಮೇಶ್ವರ್

0

ಬೆಂಗಳೂರು: ಕೋಗಿಲು ಬಡಾವಣೆಯಲ್ಲಿ ತೆರವು ಕಾರ್ಯಾಚರಣೆಗೆ ಒಳಗಾದ ಸಂತ್ರಸ್ತರ ಪೈಕಿ ಯಾರೊಬ್ಬರೂ ಬಾಂಗ್ಲಾದೇಶಿಗರಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸಂತ್ರಸ್ತರ ಪಟ್ಟಿಯನ್ನು ಪರಿಶೀಲಿಸಿದ್ದು, ಅಲ್ಲಿ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಬಿಜೆಪಿ ಸತ್ಯಶೋಧನಾ ಸಮಿತಿಯ ಆರೋಪದಲ್ಲಿ ಹುರುಳಿಲ್ಲ ಎಂದು ಅವರು ತಳ್ಳಿಹಾಕಿದರು.

ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶಿಗರ ಬಗ್ಗೆ ನಿಖರ ಮಾಹಿತಿ ಕಲೆಹಾಕಲು ಪೊಲೀಸ್ ಮಹಾನಿರ್ದೇಶಕರಿಗೆ (DGP) ಹಾಗೂ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಕೆಲವರು ನಕಲಿ ಗುರುತಿನ ಚೀಟಿಗಳನ್ನು ಮಾಡಿಸಿಕೊಂಡು ವಾಸವಿದ್ದು, ಈ ಬಗ್ಗೆಯೂ ತನಿಖೆ ಮತ್ತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಕಲೇಶಪುರದ ಕಾಫಿ ತೋಟಗಳು ಹಾಗೂ ಆನೇಕಲ್ ಭಾಗದಲ್ಲಿ ಬಾಂಗ್ಲಾ ವಲಸಿಗರಿರುವ ಬಗ್ಗೆ ಮಾಹಿತಿಯಿದೆ. ಈಗಾಗಲೇ ಕೆಲವರನ್ನು ಗುರುತಿಸಿ ಗಡಿಪಾರು ಮಾಡುವ ಕೆಲಸ ನಡೆದಿದೆ. ಗಡಿ ಭದ್ರತೆ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದ್ದು, ಅಲ್ಲಿ ಹಣ ಪಡೆದು ಒಳಬಿಡುತ್ತಿದ್ದಾರೆಯೇ ಅಥವಾ ಕದ್ದು ನುಸುಳುತ್ತಿದ್ದಾರೆಯೇ ಎಂಬುದು ತಿಳಿಯದು, ಆದರೆ ಕೇಂದ್ರ ಸರ್ಕಾರ ಗಡಿಯಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಬಾಂಗ್ಲಾದೇಶಿಗರ ಪತ್ತೆ ಹೆಸರಿನಲ್ಲಿ ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಲಷ್ಟೇ ಸೀಮಿತವಾಗಿರಬೇಕು. ಅದನ್ನು ಬಿಟ್ಟು ಹಲ್ಲೆ ನಡೆಸುವುದು ಅಥವಾ ನೈತಿಕ ಪೊಲೀಸ್‌ಗಿರಿ ಮಾಡುವುದನ್ನು ಸರ್ಕಾರ ಸಹಿಸುವುದಿಲ್ಲ. ಇಂತಹ ಕೃತ್ಯಗಳಿಗೆ ಯಾರಿಗೂ ಅಧಿಕಾರವಿಲ್ಲ ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.

ಇದೇ ವೇಳೆ, ತುಮಕೂರಿನ ಮಹಾತ್ಮ ಗಾಂಧಿ ಕ್ರೀಡಾಂಗಣದ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂಬ ಆರೋಪವನ್ನೂ ಅವರು ಅಲ್ಲಗಳೆದರು. “ಗಾಂಧೀಜಿಯವರ ಹೆಸರನ್ನು ಯಾರಾದರೂ ತೆಗೆಯಲು ಸಾಧ್ಯವೇ? ಅದು ಕೇವಲ ಒಳಾಂಗಣ ಸಮುಚ್ಚಯವಾಗಿದ್ದು, ಸ್ಥಳೀಯ ಕ್ರೀಡಾಪಟುಗಳ ಒತ್ತಾಯದ ಮೇರೆಗೆ ಅದಕ್ಕೆ ನನ್ನ ಹೆಸರಿಡಲು ಕೋರಿದ್ದರು. ಗಾಂಧಿ ಹೆಸರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ,” ಎಂದು ಸ್ಪಷ್ಟನೆ ನೀಡಿದರು.

You cannot copy content of this page

Exit mobile version