ಹಾಸನ: ವೆನುಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೇರಿಕಾರಿಕಾ ನಡೆಸಿರುವ ದಾಳಿ ಅಂತರಾಷ್ಟ್ರೀಯ ನೀತಿಗಳಿಗೆ ವಿರುದ್ಧವಾದುದು ಮಾತ್ರವಲ್ಲ, ಅತ್ಯಂತ ದುರಾಕ್ರಮಣ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದು ಖಂಡಿಸಿ ನಗರದ ಮಹಾವೀರ ವೃತ್ತದಲ್ಲಿ ಸಿಪಿಐಎಂನಿಂದ ಪ್ರತಿಭಟನೆ ನಡೆಸಿದರು. ಸಂಘಟನೆ ಜಿಲ್ಲಾ ಕಾರ್ಯದರ್ಶಿ ಹೆಚ್.ಆರ್. ನವೀನ್ ಕುಮಾರ್ ಮಾತನಾಡಿ, ವೆನುಜುವೆಲಾ ದೇಶದ ಮೇಲೆ ಅಮೇರಿಕಾದ ದಾಳಿ ಖಂಡಿಸಿ, ವೆನುಜುವೆಲಾದ ಅಧ್ಯಕ್ಷ ನಿಕೊಲೊಸ್ ಮಡುರೋ ಮತ್ತು ಅವರ ಪತ್ನಿಯ ಬಿಡುಗಡೆಗೆ ಆಗ್ರಹಿಸಿದರು, ಪ್ರಜಾಪ್ರಭುತ್ವದ ಪಾಠ ಹೇಳುವ ಅಮೇರಿಕಾ ತಾನೇ ಸರ್ವಾಧಿಕಾರಿಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದರು. ಸ್ವತಂತ್ರ ಹಾಗೂ ಸಾರ್ವಭೌಮ ರಾಷ್ಟ್ರವಾದ ವೆನುಜುವೆಲಾದ ಮೇಲೆ ಏಕಾಏಕಿ ನುಗ್ಗಿ ಬಾಂಬ್ ದಾಳಿ ನಡೆಸಿ ನೂರಾರು ಜನರನ್ನು ಹತ್ಯೆ ಮಾಡಿರುವುದು ಹಾಗೂ ಅಧ್ಯಕ್ಷರನ್ನು ಅಪಹರಿಸಿರುವುದು ಅತ್ಯಂತ ಖಂಡನೀಯ ಎಂದು ಅವರು ಹೇಳಿದರು. ವೆನುಜುವೆಲಾದ ತೈಲ ಮತ್ತು ಖನಿಜ ಸಂಪತ್ತನ್ನು ತನ್ನ ವಶಕ್ಕೆ ಪಡೆಯುವ ಉದ್ದೇಶದಿಂದಲೇ ಅಮೇರಿಕಾ ಈ ದಾಳಿಗೆ ಮುಂದಾಗಿದೆ ಎಂದು ಆರೋಪಿಸಿದರು. ಅಮೇರಿಕಾದ ಬಂಡವಾಳಶಾಹಿ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದ್ದು, ಅದರಿಂದ ಹೊರಬರಲು ಟ್ರಂಪ್ ನೇತೃತ್ವದಲ್ಲಿ ಇಂತಹ ಆಕ್ರಮಣಕಾರಿ ನೀತಿಗಳನ್ನು ಅನುಸರಿಸಲಾಗುತ್ತಿದೆ. ಇದು ಜಾಗತಿಕ ಶಾಂತಿಗೆ ಗಂಭೀರ ಅಪಾಯ ಉಂಟುಮಾಡುವಂತದ್ದು. ಸಮಾಜವಾದಿ ನಿಲುವು ಹೊಂದಿರುವ ವೆನುಜುವೆಲಾ ಹಾಗೂ ಕ್ಯೂಬಾ ದೇಶಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ, ಆರ್ಥಿಕ ದಿಗ್ಬಂಧನ ಹೇರಲಾಗುತ್ತಿದೆ ಎಂದು ನವೀನ್ ಕುಮಾರ್ ದೂರಿದರು.
ಅಮೇರಿಕಾ ಜಾಗತಿಕವಾಗಿ ಸುಂಕ ಸಮರಕ್ಕೆ ಇಳಿದಿದ್ದು, ಭಾರತ ಸೇರಿದಂತೆ ಅನೇಕ ದೇಶಗಳ ಕೃಷಿ ಮತ್ತು ಉತ್ಪಾದನಾ ವಲಯಕ್ಕೆ ಭಾರೀ ಹೊಡೆತ ನೀಡಲಿದೆ. ಭಾರತದ ಉತ್ಪನ್ನಗಳ ಮೇಲೆ ಶೇ.500ರಷ್ಟು ಆಮದು ಸುಂಕ ವಿಧಿಸಿದರೆ ಭಾರತೀಯ ಉತ್ಪನ್ನಗಳ ರಫ್ತು ಅಸಾಧ್ಯವಾಗುತ್ತದೆ. ಇದರಿಂದ ದೇಶದ ಆರ್ಥಿಕತೆ ತೀವ್ರ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಕೆಂಪು ಬಾವುಟಗಳನ್ನು ಹಿಡಿದ ಕಾರ್ಯಕರ್ತರು ಅಮೇರಿಕಾದ ಸಾಮ್ರಾಜ್ಯಶಾಹಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಪಕ್ಷದ ಸ್ಥಳೀಯ ಸಮಿತಿ ಕಾರ್ಯದರ್ಶಿ ಎಂ.ಜಿ. ಪೃಥ್ವಿ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಪಿ. ಸತ್ಯನಾರಾಯಣ, ಅರವಿಂದ್, ಜನಪರ ಸಂಘಟನೆಗಳ ಮುಖಂಡರಾದ ರಾಜಶೇಖರ್ ಹುಲಿಕಲ್, ರಾಜು ಗೊರೂರು, ಟಿ.ಆರ್. ವಿಜಯ್ ಕುಮಾರ್, ಪ್ರಕಾಶ್, ಮುಬಷಿರ್ ಅಹಮದ್, ಇರ್ಷಾದ್ ಅಹಮದ್ ದೇಸಾಯಿ, ಸಿ. ಸೌಭಾಗ್ಯ, ಮಮತಾಶಿವು, ಚಿನ್ನೇನಹಳ್ಳಿ ಸ್ವಾಮಿ, ಅನ್ಸರ್, ರಮೇಶ್ ಇತರರು ಭಾಗವಹಿಸಿದ್ದರು.
