Home ಅಂಕಣ ಬೊಗಸೆಗೆ ದಕ್ಕಿದ್ದು-48 – ಇನ್ನಷ್ಟು ಅಮಾನವೀಯ ಆಚರಣೆಗಳು

ಬೊಗಸೆಗೆ ದಕ್ಕಿದ್ದು-48 – ಇನ್ನಷ್ಟು ಅಮಾನವೀಯ ಆಚರಣೆಗಳು

0

“..ಕೊಳಕು ಮಡೆಸ್ನಾನವನ್ನು ನ್ಯಾಯಾಲಯ ನಿಷೇಧಿಸಿದ ಮೇಲೆ, ಅದು ಎಡೆಸ್ನಾನ ಎಂಬ ಹೆಸರಲ್ಲಿ ಜೀವಂತ ಇದೆ. ವ್ಯತ್ಯಾಸ ಏನೆಂದರೆ, ಎಂಜಲೆಲೆ ಇರುವುದಿಲ್ಲ; ಬದಲಾಗಿ, ಎಡೆ ಅಂದರೆ ಪ್ರಸಾದದ ಎಲೆಗಳಿರುತ್ತವೆ…” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಬೊಗಸೆಗೆ ದಕ್ಕಿದ್ದು- 45 ಮತ್ತು 47ರಲ್ಲಿ ನಂಬಿಕೆ ಮತ್ತು ಮೂಢನಂಬಿಕೆಗಳ ನಡುವೆ ಇರುವ ತೆಳುವಾದ ಗೆರೆ, ಅವುಗಳ ಆಚರಣೆಯಲ್ಲಿ ಸಹನೀಯ ಯಾವುದು, ಅಮಾನವೀಯ ಯಾವುದು ಎಂಬುದನ್ನು ನಿರ್ಧರಿಸುವುದಾದರೂ ಹೇಗೆ ಎಂಬ ವಿಷಯಗಳನ್ನು ಕುರಿತು ಚರ್ಚಿಸುತ್ತಾ, ಕೊರಗ ಸಮುದಾಯವನ್ನು ಒಳಪಡಿಸಲಾಗುತ್ತಿದ್ದ ‘ಅಜಲು’ ಎಂಬ ಅಮಾವೀಯ ಪದ್ಧತಿಯನ್ನು ಉದಾಹರಣೆಯಾಗಿ ನೀಡಿದ್ದೆ ಮತ್ತು ಇಪ್ಪತ್ತು ವರ್ಷಗಳಷ್ಟು ಹಿಂದೆ ನಾನು ಮುಖ್ಯ ಸಂಯೋಜಕನಾಗಿದ್ದ ಅಮಾನವೀಯ ಆಚರಣೆಗಳ ದಾಖಲಾತಿ ಯೋಜನೆಯೊಂದರ ಬಗ್ಗೆಯೂ ಬರೆದಿದ್ದೆ. ಇಲ್ಲಿ ಆಗ ಗುರುತಿಸಲಾಗಿದ್ದ ಐವತ್ತಕ್ಕೂ ಹೆಚ್ಚು ಆಚರಣೆಗಳಲ್ಲಿ ಕೆಲವನ್ನು ಇಲ್ಲಿ ಚುಟುಕಾಗಿ ತಿಳಿಸುತ್ತೇನೆ; ವಿವರಗಳಿಗೆ ಹೋಗುವುದಿಲ್ಲ. ಇವು ಈಗಲೂ ಮುಂದುವರಿದಿದೆಯೇ ಎಂಬುದು ನನಗೆ ಈಗ ಗೊತ್ತಿಲ್ಲ. ಇದನ್ನು ಆಯಾ ಭಾಗಗಳ ಓದುಗರೇ ಹೇಳಬೇಕು. ಜೊತೆಗೆ ಈ ಆಚರಣೆಗಳಿಗೆಲ್ಲಾ ಒಂದು ಸಾಂಸ್ಕೃತಿಕ, ಧಾರ್ಮಿಕ ಎಂದು ಸರಿಯಾಗಿಯೋ, ತಪ್ಪಾಗಿಯೋ ಕರೆಯಲಾಗುವ- ಜಾತಿ, ಬುಡಕಟ್ಟುಗಳ ಹಿನ್ನೆಲೆಗಳೂ ಇರುವುದರಿಂದ, ಅವು ಅಮಾನವೀಯ ಹೌದೋ, ಅಲ್ಲವೋ ಎಂದು ನಿರ್ಧರಿಸುವ ಕೆಲಸವನ್ನೂ ಓದುಗರಿಗೇ ಬಿಡುತ್ತೇನೆ.

ಎಂಜಲಿಗೆ ಸಂಬಂಧಿಸಿದ ‘ಅಜಲು’ ಪದ್ಧತಿಯಂತೆಯೇ ಇರುವ ಒಂದು ಪದ್ಧತಿ ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳ ಕೆಲವು ಹಳ್ಳಿಗಳಲ್ಲಿ ನಡೆಯುತ್ತಿತ್ತು. ಊರಿಗೆ ಕ್ಷಾಮ ಬರುವುದನ್ನು ತಪ್ಪಿಸಬಹುದು ಎಂಬ ನಂಬಿಕೆಯಿಂದ, ‘ಹುಟಿಕೆ ಹೊರುವುದು’ ಎಂದು ಕರೆಯಲಾಗುತ್ತಿದ್ದ ಈ ಆಚರಣೆ ನಡೆಯುತ್ತಿತು. ಈ ಆಚರಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಆಚರಿಸುವ ಮಾರಿ ಹಬ್ಬದ ದಿನ ‘ಮೇಲ್ಜಾತಿ’ಯವರು, ತಾವು ಉಂಡು ಉಳಿದ ಅನ್ನಾಹಾರಗಳನ್ನು ಊರಿನ ಹೊರಗೆ ಇಟ್ಟುಬರುತ್ತಾರೆ. ಪರಿಶಿಷ್ಟರು ಅಲ್ಲಿಗೆ ಹೋಗಿ ಅದನ್ನು ತಿನ್ನಬೇಕು. ಉಳಿದ ಅನ್ನ-ಊರ ಹೊರಗೆ-ಕೆಲವೇ ಪಂಗಡ ಎಂಬುದಷ್ಟೇ ನನ್ನನ್ನು ಕಾಡುತ್ತದೆಯೇ ಹೊರತು, ಅದರ ಸಾಂಸ್ಕೃತಿಕ, ಜನಪದೀಯ ಮುಂತಾದ ಮಣ್ಣಾಂಗಟ್ಟಿ ನನಗೆ ಅರ್ಥವಾಗುವುದಿಲ್ಲ.

ಎಂಜಲಿಗೆ ಸಂಬಂಧಿಸಿದಂತೆ ಹೆಚ್ಚಾಗಿ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ನಡೆಯುವ ಆಚರಣೆ ಮಡೆಸ್ನಾನ. ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಕುಖ್ಯಾತ ಮಡೆಸ್ನಾನ ಎಲ್ಲರಿಗೂ ತಿಳಿದಿದೆ. ತುಳುವಿನಲ್ಲಿ ಈ ಆಚರಣೆಗೆ ‘ಮಡಸ್ತಾನ’ ಎಂದು ಕರೆಯುತ್ತಾರೆ. ಅರ್ಥ ಉರುಳುವುದು. ಅದು ಬ್ರಾಹ್ಮಣರು ಊಟ ಮಾಡಿದ ಪಂಕ್ತಿಗಳಲ್ಲಿ ಉಳಿದ ಎಂಜಲೆಲೆಯ ಮೇಲೆ ಇತರರರು ಉರುಳಾಡುವ ನಾಚಿಕೆಗೇಡಿ ತುಚ್ಛ ಆಚರಣೆ ಹೇಗಾಯಿತು; ತುಳುವಿನ ‘ಮಡಸ್ತಾನ’ವು ಕನ್ನಡದ ‘ಮಡೆಸ್ನಾನ’ ಹೇಗಾಯಿತು- ತುಳುವಿನಲ್ಲಿ ಮಡೆ ಎಂದರೆ ಎಂಜಲು- ಎಂಬುದನ್ನು ಯಾರೂ ಊಹಿಸಬಹುದು. ಇದೇ ಸುಬ್ರಹ್ಮಣ್ಯ ಊರಿನಲ್ಲಿ ಎದುರಿಗೆ ಕಾಣುವ ದೊಡ್ಡ ದೇವಾಲಯದ ಹಿಂದೆ ತೊರೆಯೊಂದರ ಆಚೆ ಇನ್ನೊಂದು ಚಿಕ್ಕ ದೇವಾಲಯವಿದೆ. ಅದನ್ನು ಕುಕ್ಕೆ ಅಥವಾ ‘ಆದಿ’ ಸುಬ್ರಹ್ಮಣ್ಯ ಎಂದು ಕರೆಯುತ್ತಾರೆ. ಇಲ್ಲಿ ವೈದಿಕ ವಿಗ್ರಹದ ಬದಲು ಭಾರಿ ಹುತ್ತವೊಂದು ಗರ್ಭಗುಡಿಯಲ್ಲಿದೆ. ಅದರ ಮಣ್ಣನ್ನೇ ಪ್ರಸಾದವನ್ನಾಗಿ ನೀಡಲಾಗುತ್ತಿತ್ತು. ಬುಡಕಟ್ಟು ಜನರಾದ ಮಲೆಕುಡಿಯರ ಪಾರುಪತ್ಯವಿತ್ತು. ಐವತ್ತು. ವರ್ಷಗಳ ಹಿಂದೆ ಕರಾವಳಿಯ ತುಳುವರು ಮುಖ್ಯವಾಗಿ ಹೋಗುತ್ತಿದ್ದದ್ದು ಅಲ್ಲಿಗೇ. ಹಾಗೆ ಹೋದವರು ಬ್ರಾಹ್ಮಣ ಸುಪರ್ದಿಯ ‘ಹೊಸ’ ದೇವಾಲಯಕ್ಕೂ ಹೋಗುತ್ತಿದ್ದರು. ಇದಕ್ಕೆ ಮತ್ತು ನಂತರ ಹುಟ್ಟಿಕೊಂಡ ಕಟ್ಟುಕತೆಗಳು ಮತ್ತು ಸ್ಥಳ ಪುರಾಣಗಳಿಗೆ ಯಾರು ಕಾರಣ ಎಂಬುದನ್ನೂ ಮತ್ತೆ ಹೇಳಬೇಕಾಗಿಲ್ಲ.

ಅದಿರಲಿ, ಆ ಕೊಳಕು ಮಡೆಸ್ನಾನವನ್ನು ನ್ಯಾಯಾಲಯ ನಿಷೇಧಿಸಿದ ಮೇಲೆ, ಅದು ಎಡೆಸ್ನಾನ ಎಂಬ ಹೆಸರಲ್ಲಿ ಜೀವಂತ ಇದೆ. ವ್ಯತ್ಯಾಸ ಏನೆಂದರೆ, ಎಂಜಲೆಲೆ ಇರುವುದಿಲ್ಲ; ಬದಲಾಗಿ, ಎಡೆ ಅಂದರೆ ಪ್ರಸಾದದ ಎಲೆಗಳಿರುತ್ತವೆ. ಈ ವಿವಾದಗಳಿಂದ ಈ ಅನಿಷ್ಟ ಪದ್ಧತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿದೆಯಾದರೂ, ಅದನ್ನು ಸಮರ್ಥಿಸಲು ಹಲವು ವೈದಿಕ ಕುತರ್ಕಗಳು ಮುಂದುವರಿದಿವೆ. ಈ ಕುತರ್ಕಗಳ ರೂವಾರಿಗಳಾದ ಬ್ರಾಹ್ಮಣರು ಯಾವತ್ತಾದರೂ ಇದನ್ನು ಮಾಡಿ, ಪಾಪತೊಳೆದುಕೊಂಡ ಉದಾಹರಣೆ ನನಗಂತೂ ಗೊತ್ತಿಲ್ಲ. ಇಂದೂ ಕೆಲವರು ಆ ಸೇವೆ ಮಾಡಿದರೆ, ಕೊಳಕು ಮಾಧ್ಯಮಗಳು ಜನರನ್ನು ನಿರುತ್ಸಾಹಗೊಳಿಸುವ ಬದಲು, ಅದನ್ನೊಂದು ಮಹಾನ್ ಧಾರ್ಮಿಕ ಕಾರ್ಯ ಎಂಬಂತೆ ವೈಭವೀಕರಿಸಿ ಪ್ರಚಾರ ನೀಡುತ್ತಿವೆ. ಇಂದು ಜಿಲ್ಲೆಯವರಿಗಿಂತ ಹೊರ ಜಿಲ್ಲೆಗಳವರೇ ಇಲ್ಲಿ ಹೆಚ್ಚಾಗಿ ನೆರೆಯುವುದಕ್ಕೆ ಇದೂ ಒಂದು ಕಾರಣ.

ಪಾವಗಡ ತಾಲೂಕಿನ ನಾಗಲಮಡಿಕೆಯ ಸುಬ್ರಹ್ಮಣ್ಯ ದೇವಾಲಯದಲ್ಲಿ ಇನ್ನೂ ಆಘಾತಕಾರಿಯಾದ ಆಚರಣೆ ನಡೆಯುತ್ತಿತ್ತು. ಇಲ್ಲಿನ ವಾರ್ಷಿಕ ಜಾತ್ರೆಯ ದಿನ ಬ್ರಾಹ್ಮಣರ ಊಟ ಮುಗಿಯುತ್ತಿರುವಂತೆ ‘ಕೆಳಜಾತಿಗಳ ಭಕ್ತರು’ ಭಾರೀ ಸಂಖ್ಯೆಯಲ್ಲಿ ಎಂಜಲೆಲೆಗಳನ್ನು ನಾಯಿಗಳಂತೆ ಕಸಿದುಕೊಂಡು, ತಲೆ ಮೇಲೆ ಹೊತ್ತುಕೊಂಡು, ಮೈಗೆಲ್ಲಾ ಒರಸಿಕೊಂಡು, ನಂತರ ಹತ್ತಿರದ ಪಿನಾಕಿನಿ ನದಿಯಲ್ಲಿ ಮಿಂದು ಪುನೀತರಾಗುತ್ತಿದ್ದರು. ಈ ಹುಚ್ಚುತನ ಯಾವ ಮಟ್ಟಕ್ಕೆ ಮುಟ್ಟಿತ್ತು ಎಂದರೆ, ಸರಿಸುಮಾರು ಈ ದಾಖಲಾತಿ ನಡೆದ ಕೆಲವರ್ಷಗಳಿಗೆ ಮೊದಲು ಇಬ್ಬರು ಭಕ್ತರು ಕಾಲ್ತುಳಿತದಲ್ಲಿ ಸತ್ತಿದ್ದರು. ಮರುವರ್ಷ ಊಟ ಮುಗಿಸಿ ಬೇಗ ಓಡದ ಒಬ್ಬ ಬ್ರಾಹ್ಮಣನೂ ಕಾಲ್ತುಳಿತಕ್ಕೆ ಸಿಕ್ಕಿ ಸ್ವರ್ಗಸ್ಥನಾಗಿದ್ದ!

‘ಮೇಲ್ಜಾತಿ’ಯವರ ಕಾಲು ತೊಳೆದು ನೀರು ಕುಡಿಯುವ ಆಚರಣೆ ಹಲವಾರು ಕಡೆಗಳಲ್ಲಿ ಇತ್ತು. ತಮ್ಮ ಮಠಾಧಿಪತಿಗಳನ್ನು ಕರೆಸಿ, ಅವರ ‘ಪಾದ ಪೂಜೆ’ ಮಾಡಿ ನೀರು ಕುಡಿಯುವ ಪದ್ಧತಿ ಮೇಲ್ಜಾತಿಗಳವರಲ್ಲಿಯೂ ಇದೆ. ಆದರೆ, ದಾವಣಗೆರೆಯ ಬೆಂಕಿಕೆರೆಯ ಸಮೀಪದ ಒಂದು ಹಳ್ಳಿಯಲ್ಲಿ ಇನ್ನೂ ವಿಚಿತ್ರ ಆಚರಣೆ ಪತ್ತೆಯಾಗಿತ್ತು. ಇಲ್ಲಿ ಕೆಲವೇ ಕೆಲವು ಲಿಂಗಾಯತ ಕುಟುಂಬಗಳಿದ್ದವು (ವೀರಶೈವವೋ ಗೊತ್ತಿಲ್ಲ).ಇಲ್ಲಿನ ಬೋವಿ ಜನಾಂಗದವರು ಹಬ್ಬಗಳ ದಿನ ಈ ಲಿಂಗಾಯತರನ್ನು ಮನೆಗೆ ಕರೆಸಿಕೊಂಡು ಅವರ ಕಾಲು ತೊಳೆದು ನೀರು ಕುಡಿಯುತ್ತಿದ್ದರು ಮಾತ್ರವಲ್ಲ; ಅಂದಿನ ಅಡುಗೆಗೆ ಉಳಿದ ನೀರನ್ನು ಬಳಸುತ್ತಿದ್ದರು.

ಹಳೆ ಮೈಸೂರಿನ ಹಲವು ಕಡೆ ಕಾಡುಗೊಲ್ಲರ ನಡುವೆ ಇನ್ನೂ ಅಮಾನವೀಯ, ಮಾನವ ಆರೋಗ್ಯ ಮತ್ತು ಜೀವಕ್ಕೇ ಅಪಾಯವೊಡ್ಡುವ ಆಚರಣೆ ನಡೆಯುತ್ತಿತ್ತು. ಅದೆಂದರೆ, ಬಾಣಂತಿ ಮತ್ತು ಮುಟ್ಟಾದ ಮಹಿಳೆಯರನ್ನು, ಹೆಣ್ಣು ಮಕ್ಕಳನ್ನು ಊರಿನಿಂದ ಹೊರಗೆ ಹಾಕುವುದು. ಅಲ್ಲಿ ಅವರು ಹಟ್ಟಿ ಅಥವಾ ದೊಡ್ಡಿ ಎಂದು ಕರೆಯಲಾಗುವ ಪುಟ್ಟ ಗುಡಾರಗಳಲ್ಲಿ ಅಂದರೆ ಪುಟ್ಟ ಕುಪ್ಪೆಗಳಲ್ಲಿ ನಿರ್ದಿಷ್ಟ ಸಮಯ ವಾಸಿಸಬೇಕಾಗಿತ್ತು. ಕೆಲವು ಕಡೆ ತಮ್ಮ ಹೆರಿಗೆಯನ್ನು ತಾವೇ ಮಾಡಿಕೊಂಡು, ಹೊಕ್ಕುಳ ಬಳ್ಳಿಯನ್ನೂ ತಾವೇ ಕತ್ತರಿಸಿಕೊಳ್ಳಬೇಕಾಗಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಬೇರೆ ಮಹಿಳೆಯರು ನೆರವಿಗೆ ಹೋಗುತ್ತಿದ್ದರು. ಗಂಡನಾದವನಿಗೂ ಹತ್ತಿರ ಸುಳಿಯಲು ಅವಕಾಶವಿರಲಿಲ್ಲ.

ಸರಕಾರ ನಂತರ, ಊರುಗಳ ಹೊರಗೇ ಚಿಕ್ಕ ಕಟ್ಟಡಗಳನ್ನು ಇದಕ್ಕಾಗಿಯೇ ಕಟ್ಟಿಸಿತ್ತು. ಇಂತಾ ಮಹಿಳೆಯರಿಗೆ ಸ್ವಲ್ಪವಾದರೂ, ಸಾಂತ್ವನ ನೀಡಬಲ್ಲ ಈ ಕ್ರಮವನ್ನು ಕೆಲವರು ಹೊಗಳಿದ್ದರೆ, ಸರಕಾರವೇ ಮೂಢನಂಬಿಕೆಗೆ ಬೆಂಬಲ ನೀಡುತ್ತಿದೆ ಎಂದು ಕೆಲವರು ಟೀಕಿಸಿದ್ದರು. ಇದು, ಎಲ್ಲಾ ಆಚರಣೆಗಳ ಕುರಿತು ವಿವಿಧ ವರ್ಗಗಳು ತಳೆಯಬಹುದಾದ ನಿಲುವುಗಳನ್ನು ಕಪ್ಪು-ಬಿಳುಪುಗಳಲ್ಲಿ ತೋರಿಸುತ್ತದೆ. ಎಡವಿರಲಿ, ಬಲವಿರಲಿ, ಎಲ್ಲಾ ರೀತಿಗಳ ಕರ್ಮಠರಲ್ಲಿ ನಡುವಿನ ಬೂದು ಛಾಯೆಗಳೇ ಇರುವುದಿಲ್ಲ! ನಾನು ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದ ಎಂ. ಗುರುಲಿಂಗಯ್ಯ ಅವರನ್ನು ಭೇಟಿಮಾಡಿದ್ದೆ. ಕಾಡುಗೊಲ್ಲ ಜನಾಂಗಕ್ಕೇ ಸೇರಿದ ಅವರು, ಈ ಕುರಿತು ಹಲವಾರು ವಿವರಗಳನ್ನು ವಿಷಾದದಿಂದ ವಿವರಿಸಿದ ಸಂದರ್ಭ ನನಗಿನ್ನೂ ನೆನಪಿನ್ನೂ ಇದೆ. ಹಕ್ಕಿಪಿಕ್ಕಿ, ಕಾಡುಗೊಲ್ಲರು ಮತ್ತು ಕರಡಿಗೊಲ್ಲರ ನಡುವೆಯೂ ಇಂತಾ ಆಚರಣೆಗಳಿದ್ದವು. ಬಾಣಂತಿಯರು ಮತ್ತು ಮುಟ್ಟಾದವರನ್ನು ಊರಿನಿಂದ ಹೊರಗಿಡುವ ಆಚರಣೆಗಳ ಬಗ್ಗೆ ಸ್ವಲ್ಪ ಹೆಚ್ಚಿನ ವಿವರಗಳೊಂದಿಗೆ ಮುಂದೆ ಬರೆಯುತ್ತೇನೆ.

ರಾಜ್ಯದಲ್ಲಿ ಮಹಿಳೆಯರನ್ನು ಅವಮಾನಕ್ಕೀಡು ಮಾಡುವ, ಲೈಂಗಿಕತೆಗೆ ಸಂಬಂಧಪಟ್ಟ, ಲೈಂಗಿಕ ಶೋಷಣೆಯ ಹಲವಾರು ಆಚರಣೆಗಳಿವೆ. ಈಗ ನಿಷೇಧಕ್ಕೆ ಒಳಗಾಗಿರುವ ಬೆತ್ತಲೆ ಸೇವೆ, ಬೇವಿನುಡುಗೆ ಅಥವಾ ಅರೆಬೆತ್ತಲೆ ಸೇವೆ ಇವು ಎಲ್ಲರಿಗೂ ಗೊತ್ತಿವೆ. ಜೊತೆಗೆ, ಗುಪ್ತಾಂಗದೊಳಗೆ ಮೊಟ್ಟೆ ತುರುಕಿ ಕನ್ಯತ್ವ ಪರೀಕ್ಷೆ, ಬಿದಿರು ಮೆಳೆ ಸೇವೆ, ಸಾಮೂಹಿಕ ಸಂಭೋಗ, ಪಾರಂಪರಿಕ ವೇಶ್ಯಾವಾಟಿಕೆ, ವಿಧವೆಯರಿಗೆ ವೇಶ್ಯೆಯರಿಂದ ದೇವಾಲಯದಲ್ಲೇ ಬೈಯಿಸುವುದು, ಮಕ್ಕಳಿಲ್ಲದ ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಬತ್ತಲೆ ತಿರುಗುವಂತೆ ಮಾಡುವುದು, ನಾಲಿಗೆಗೆ ಬರೆ, ಗಂಜಳ ಕುಡಿಸುವುದು, ಗಂಜಳ ಸ್ನಾನ ಇತ್ಯಾದಿ ಹಲವಾರು ಆಚರಣೆಗಳು ಇದ್ದವು.

ಹಲವಾರು ಅಮಾನವೀಯ ಆಚರಣೆಗಳು ಸ್ವಯಂ ಹಿಂಸೆಗೆ ಸಂಬಂಧಿಸಿದವುಗಳು. ಬೆನ್ನಿಗೆ ಕೊಕ್ಕೆ ಸಿಕ್ಕಿಸಿ, ಸೊಂಟಕ್ಕೆ ಹಗ್ಗ ಕಟ್ಟಿ ಏತದಂತ ಸಾಧನದಿಂದ ಎತ್ತರಕ್ಕೆ ಎತ್ತಿ ತಿರುಗಿಸುವ ಸಿಡಿ ‘ಆಟ’, ಬಾಯಿಗೆ ಬೀಗ- ಎಂದರೆ ಚೂಪಾದ ಸರಳನ್ನು ಮಹಿಳೆಯರು ಒಂದು ಕೆನ್ನೆಯಿಂದ ಇನ್ನೊಂದು ಕೆನ್ನೆಗೆ ಹೊಗಿಸುವುದು, ಶಿಯಾ ಸಮುದಾಯದ ಮೊಹರಂ ದಿನದ ಸ್ವಯಂ ಹಿಂಸೆ ಇತ್ಯಾದಿಗಳನ್ನು ಈ ಪಟ್ಟಿಗೆ ಸೇರಿಸಬಹುದು.

ಅದಲ್ಲದೇ, ಮುಸ್ಲಿಮರ ಕೆಲ ಪಂಗಡಗಳ ವಿವಾಹ ಸಂಬಂಧಿ ಆಚರಣೆಗಳು, ದಲಿತರು ಗಡ್ಡ ಮೀಸೆ ಬೋಳಿಸಿಕೊಂಡು ಕತ್ತಿ ಹಿಡಿದು ಬೆತ್ತಲೆ ತಿರುಗುವ ‘ಭೂತಬಿಲ್ಲೆ’, ಚಿತ್ರವಿಚಿತ್ರ ವೇಷ ಹಾಕಿಕೊಂಡು, ದೇವರುಗಳೂ ಸೇರಿದಂತೆ ಸಿಕ್ಕಸಿಕ್ಕವರಿಗೆ ಬೈಯ್ಯುವ ಕೊಡಗಿನ ‘ಕುಂಡೆ ಹಬ್ಬ’, ಅಗಸರಿಂದ ಮುಟ್ಟಾದ ಹೆಂಗಸರ ಒಳ‌ ಉಡುಪು ಒಗೆಸುವುದು, ಹರಕೆಗಾಗಿ ಭಿಕ್ಷಾಟನೆ, ಹರಕೆಗಾಗಿ ಕಳ್ಳತನ… ಹೀಗೆ ಈ ನಮ್ಮ ಸಮಾಜದ ಅಮಾನವೀಯ ಆಚರಣೆಗಳನ್ನು ಪಟ್ಟಿ ಮಾಡಿದರೆ ತಲೆ ತಿರುಗುತ್ತದೆ. ಇಲ್ಲಿ ನಮೂದಿಸಿರುವ ಎಲ್ಲವುಗಳ ಬಗ್ಗೆ ಸ್ವಲ್ಪ ವಿವರವಾಗಿ ಮುಂದೆ ಇಲ್ಲಿಯೇ ಬರೆಯುತ್ತೇನೆ. ಮತ್ತೊಮ್ಮೆ ಇಲ್ಲಿ ಸ್ಪಷ್ಟಪಡಿಸುತ್ತೇನೆ: ಈ ಆಚರಣೆಗಳು ಎರಡು ದಶಕಗಳ ಹಿಂದೆ ಇದ್ದವು; ಈಗ ಎಷ್ಟರ ಮಟ್ಟಿಗೆ ಅಳಿದಿವೆ, ಉಳಿದಿವೆ ಎಂಬುದನ್ನು ಕಂಡುಕೊಳ್ಳುವುದು ಸದ್ಯ ನನ್ನ ಎಟಕಿಗೆ ಮೀರಿದ್ದು. ತಮ್ಮ ಪರಿಸರದಲ್ಲಿ ಇವು ಇವೆಯೇ, ಇದ್ದರೆ ಎಷ್ಟರ ಮಟ್ಟಿಗೆ ಎಂಬುದನ್ನು ಓದುಗರು ತಿಳಿದುಕೊಂಡು, ತಮ್ಮ ಪರಿಸರದಲ್ಲಿ ಆದಷ್ಟು ಜಾಗೃತಿ ಮೂಡಿಸಲಿ ಎಂಬ ಕಳಕಳಿಯಿಂದ ಇದನ್ನು ಬರೆದಿದ್ದೇನೆ.

You cannot copy content of this page

Exit mobile version