ಮೋಟಾರ್ ಪಂಪ್ ಕಳ್ಳತನದ ಶಂಕೆ: ಮೂವರು ದಲಿತ ಅಪ್ರಾಪ್ತ ಬಾಲಕರಿಗೆ ಥಳಿಸಿ, ಅರ್ಧ ತಲೆ ಬೋಳಿಸಿ ಅಮಾನವೀಯ ದೌರ್ಜನ್ಯ!

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬರ್ಗವಾನ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಘಾಡೀಹ್ ಗ್ರಾಮದಲ್ಲಿ ಬೆಚ್ಚಿಬೀಳಿಸುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಕೃಷಿ ಮೋಟಾರ್ ಪಂಪ್ ಕಳ್ಳತನ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಪರಿಶಿಷ್ಟ ಜಾತಿಯ (ದಲಿತ) ಮೂವರು ಅಪ್ರಾಪ್ತ ಬಾಲಕರನ್ನು ಅಪಹರಿಸಿ, ಮರಕ್ಕೆ ಕಟ್ಟಿಹಾಕಿ ಥಳಿಸಿದ್ದಲ್ಲದೆ, ಅವಮಾನಿಸುವ ಉದ್ದೇಶದಿಂದ ಅವರ ಅರ್ಧ ತಲೆ ಬೋಳಿಸಿರುವ ಆರೋಪ ಕೇಳಿಬಂದಿದೆ.

ಅಕ್ಟೋಬರ್ 1 ರಂದು ನಡೆದಿದೆ ಎನ್ನಲಾದ ಈ ಘಟನೆಯಲ್ಲಿ 12 ರಿಂದ 15 ವರ್ಷ ವಯಸ್ಸಿನ ಮೂವರು ಮಕ್ಕಳು ತೀವ್ರ ಹಲ್ಲೆ ಮತ್ತು ಅಪಮಾನಕ್ಕೆ ತುತ್ತಾಗಿದ್ದಾರೆ. ಸಂತ್ರಸ್ತ ಕುಟುಂಬಸ್ಥರು ನೀಡಿರುವ ವಿವರಗಳ ಪ್ರಕಾರ, ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮಕ್ಕಳನ್ನು ಬಲವಂತವಾಗಿ ಕೂಡಿಹಾಕಲಾಗಿತ್ತು.

ಸಂತ್ರಸ್ತ 13 ವರ್ಷದ ಬಾಲಕನೊಬ್ಬ ತನ್ನ ನೋವು ತೋಡಿಕೊಂಡು, “ನಾನು ನನ್ನ ತಾಯಿಯ ಬಟ್ಟೆ ತರಲು ಹೋದಾಗ ಬುದ್ಧ ಸಿಂಗ್ ಗೊಂಡ್ ಎಂಬಾತ ನನ್ನನ್ನು ಎಲ್ಲೋ ಕರೆದುಕೊಂಡು ಹೋಗುವುದಾಗಿ ನಂಬಿಸಿ ಕಾಡಿನ ಕಡೆಗೆ ಕರೆದೊಯ್ದನು. ಅಲ್ಲಿ ಕಳ್ಳತನದ ಬಗ್ಗೆ ಪ್ರಶ್ನಿಸಿ ಹಲ್ಲೆ ನಡೆಸಿದರು. ನಂತರ ಗೋವಿಂದ್ ಸಿಂಗ್ ಎಂಬಾತ ನನ್ನನ್ನು ಮರಕ್ಕೆ ಕಟ್ಟಿಹಾಕಿ, ಥಳಿಸಿ, ನನ್ನ ಅರ್ಧ ತಲೆಯ ಕೂದಲನ್ನು ಬೋಳಿಸಿದನು,” ಎಂದು ವಿವರಿಸಿದ್ದಾನೆ.

ಈ ಕೃತ್ಯದ ವೇಳೆ ಮಕ್ಕಳಿಗೆ ಜಾತಿ ನಿಂದನೆ ಮಾಡಲಾಗಿದ್ದು, ಗ್ರಾಮದ ಸಾರ್ವಜನಿಕರ ಮುಂದೆ ತೀವ್ರವಾಗಿ ಅವಮಾನಿಸಲಾಗಿದೆ ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಈ ಘಟನೆಯಿಂದ ಮಕ್ಕಳು ತೀವ್ರ ಆಘಾತಕ್ಕೊಳಗಾಗಿದ್ದು, ಜೀವಭಯದಿಂದ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ ಮತ್ತು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ನ್ಯಾಯ ಸಿಗದೆ ಎಸ್‌ಪಿ ಕಚೇರಿಗೆ ಮೊರೆ:

ಘಟನೆ ನಡೆದ ಕೂಡಲೇ ಬರ್ಗವಾನ್ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ನಮ್ಮ ಅಳಲನ್ನು ಕೇಳದೆ ಠಾಣೆಯಿಂದ ಓಡಿಸಿದರು ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯವಾಗಿ ನ್ಯಾಯ ಸಿಗದಿದ್ದಾಗ ಸಂತ್ರಸ್ತ ಕುಟುಂಬಸ್ಥರು ಸಿಂಗ್ರೌಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಚೇರಿ ಹಾಗೂ ಅಜಾಕ್ (AJAK – ಪರಿಶಿಷ್ಟ ಜಾತಿ/ಪಂಗಡ ಕಲ್ಯಾಣ) ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಗೋವಿಂದ್ ಸಿಂಗ್, ಬಲರಾಮ್ ಸಿಂಗ್, ಇಂದ್ರಭಾನ್ ಸಿಂಗ್ ಮತ್ತು ಹರಿನಾರಾಯಣ್ ಬೈಸ್ ಎಂಬುವವರ ಹೆಸರುಗಳು ಕೇಳಿಬಂದಿದ್ದು, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಮಕ್ಕಳಿಗೆ ರಕ್ಷಣೆ ನೀಡುವಂತೆ ಆಗ್ರಹಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಂಗ್ರೌಲಿ ಎಸ್‌ಪಿ ಶಿಯಾಜ್ ಕೆ.ಎಂ, “ಗ್ರಾಮಸ್ಥರು ಮಕ್ಕಳ ಮೇಲೆ ಮೋಟಾರ್ ಪಂಪ್ ಕಳ್ಳತನದ ಆರೋಪ ಹೊರಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಮಕ್ಕಳು ಅಪ್ರಾಪ್ತರಾಗಿದ್ದರಿಂದ ಆ ಸಮಯದಲ್ಲಿ ಎರಡೂ ಕಡೆಯವರ ನಡುವೆ ರಾಜಿ ಸಂಧಾನವಾಗಿತ್ತು. ಆದರೆ ಈಗ ಅಪಹರಣ, ಥಳಿತ, ತಲೆ ಬೋಳಿಸುವಿಕೆ ಮತ್ತು ಜಾತಿ ನಿಂದನೆಯ ಗಂಭೀರ ಆರೋಪಗಳು ಕೇಳಿಬಂದಿರುವುದರಿಂದ ಬರ್ಗವಾನ್ ಠಾಣಾಧಿಕಾರಿಗೆ ಸಮಗ್ರ ತನಿಖೆ ನಡೆಸಲು ಆದೇಶಿಸಲಾಗಿದೆ. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ, ತನಿಖೆಯಲ್ಲಿ ಆರೋಪ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು,” ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು