ಎಲನ್ ಮಸ್ಕ್‌ನ ‘ಸ್ಟಾರ್‌ಲಿಂಕ್‌’ಗೆ ಭಾರತದಲ್ಲಿ ಅನುಮತಿ ನೀಡಬೇಡಿ: ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್‌ ಅಂಗಸಂಸ್ಥೆ ಮನವಿ

ರಾಷ್ಟ್ರೀಯ ಭದ್ರತೆ, ಸೈಬರ್ ಕಣ್ಗಾವಲು ಹಾಗೂ ಕಾನೂನು ಸುವ್ಯವಸ್ಥೆ ಜಾರಿಯ ಹಿತದೃಷ್ಟಿಯಿಂದ ಎಲನ್ ಮಸ್ಕ್ ಒಡೆತನದ ‘ಸ್ಟಾರ್‌ಲಿಂಕ್’ (Starlink) ಕಂಪನಿಗೆ ಭಾರತದಲ್ಲಿ ವಾಣಿಜ್ಯ ಉಪಗ್ರಹ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ಆರಂಭಿಸಲು ಅನುಮತಿ ನೀಡಬಾರದು ಎಂದು ಆರ್‌ಎಸ್‌ಎಸ್ ಅಂಗಸಂಸ್ಥೆಯಾದ ‘ಸ್ವದೇಶಿ ಜಾಗರಣ ಮಂಚ್’ (SJM) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಭಾರತೀಯ ಮಾರುಕಟ್ಟೆಗೆ ಸ್ಟಾರ್‌ಲಿಂಕ್ ಪ್ರವೇಶಿಸುವ ವಿಚಾರವಾಗಿ ಎಲನ್ ಮಸ್ಕ್ ಮತ್ತು ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ ನಡುವೆ ತೀವ್ರ ಹಗ್ಗಜಗ್ಗಾಟ ನಡೆಯುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಭಾರತ ಸರ್ಕಾರದ ಕಟ್ಟುನಿಟ್ಟಾದ ಭದ್ರತಾ ಷರತ್ತುಗಳನ್ನು ಪೂರೈಸಲು ಸ್ಟಾರ್‌ಲಿಂಕ್ ವಿಫಲವಾದರೆ, ಕಂಪನಿಯ ಅರ್ಜಿಯನ್ನು ತಿರಸ್ಕರಿಸುವ ಸಂಪೂರ್ಣ ಹಕ್ಕು ಭಾರತಕ್ಕಿದೆ ಎಂದು ಎಸ್‌ಜೆಎಂ ರಾಷ್ಟ್ರೀಯ ಸಹ-ಸಂಚಾಲಕ ಅಶ್ವನಿ ಮಹಾಜನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಸ್ಟಾರ್‌ಲಿಂಕ್ ಅನ್ನು ನಿರ್ಬಂಧಿಸುವುದರಿಂದ, ಭದ್ರತೆಯ ವಿಚಾರದಲ್ಲಿ ಭಾರತವು ತನ್ನ ಹಿತಾಸಕ್ತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳುವ ಹಕ್ಕನ್ನು ಹೊಂದಿದೆ ಎಂಬ ಸ್ಪಷ್ಟ ಸಂದೇಶವು ಅಮೆರಿಕದಂತಹ ವ್ಯಾಪಾರ ಪಾಲುದಾರ ದೇಶಗಳಿಗೂ ರವಾನೆಯಾಗುತ್ತದೆ,” ಎಂದಿದ್ದಾರೆ.

ಇಂಟರ್ನೆಟ್ ಶಟ್‌ಡೌನ್ ಮತ್ತು ಕಣ್ಗಾವಲಿಗೆ ತಡೆ ಆತಂಕ:

ಹಿಂಸಾಚಾರ, ಪ್ರತ್ಯೇಕತಾವಾದಿ ಚಟುವಟಿಕೆಗಳು, ಭಯೋತ್ಪಾದನೆ ಹಾಗೂ ಗಲಭೆಗಳ ಸಂದರ್ಭದಲ್ಲಿ ವದಂತಿಗಳು ಹರಡುವುದನ್ನು ತಡೆಯಲು ಕಾನೂನು ಜಾರಿ ಸಂಸ್ಥೆಗಳು ಸ್ಥಳೀಯವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುತ್ತವೆ. ಆದರೆ, ಉಪಗ್ರಹ ಆಧಾರಿತ ಇಂಟರ್ನೆಟ್ ನೆಟ್‌ವರ್ಕ್ ಜಾರಿಗೆ ಬಂದರೆ ಇಂತಹ ನಿರ್ಬಂಧಗಳನ್ನು ಹೇರುವುದು ಕಷ್ಟಸಾಧ್ಯವಾಗಲಿದೆ ಎಂದು ಎಸ್‌ಜೆಎಂ ಕಳವಳ ವ್ಯಕ್ತಪಡಿಸಿದೆ.

ಜೊತೆಗೆ, ಸ್ಟಾರ್‌ಲಿಂಕ್‌ನ ‘ಸ್ಯಾಟಲೈಟ್-ಟು-ಸ್ಯಾಟಲೈಟ್ ಲೇಸರ್ ಲಿಂಕ್‌ಗಳು’ ಭಾರತೀಯ ಇಂಟರ್ನೆಟ್ ಟ್ರಾಫಿಕ್ ಅನ್ನು ದೇಶೀಯ ಗೇಟ್‌ವೇಗಳಿಂದ ಹೊರಗಿಟ್ಟು, ವಿದೇಶಿ ಮೂಲಸೌಕರ್ಯಗಳ ಮೂಲಕ ಹಾದುಹೋಗುವಂತೆ ಮಾಡುವ ಸಾಧ್ಯತೆಯಿದೆ. ಇದು ಕಾನೂನುಬದ್ಧ ನಿಗಾ ಮತ್ತು ತನಿಖಾ ಸಂಸ್ಥೆಗಳ ಪರಿಶೀಲನೆಗೆ ಅಡ್ಡಿಯುಂಟುಮಾಡಬಹುದು ಎಂದು ಆತಂಕ ವ್ಯಕ್ತಪಡಿಸಿದೆ.

ಮಸ್ಕ್ ಅವರು ನಿಯಮಾವಳಿಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಸರ್ಕಾರದ ಮೇಲೆ ಒತ್ತಡ ಹೇರುವ ತಂತ್ರವಾಗಿರಬಹುದು ಎಂದಿರುವ ಮಹಾಜನ್, ಭದ್ರತಾ ನಿಯಮಗಳನ್ನು ಪೂರೈಸಲು ಸ್ಟಾರ್‌ಲಿಂಕ್ ಬಹುಶಃ ಸಿದ್ಧವಿಲ್ಲ ಎಂದು ತೋರುತ್ತಿದೆ ಎಂದಿದ್ದಾರೆ. ಇಂತಹ ವಿದೇಶಿ ಸಂಸ್ಥೆಗಳನ್ನು ನಿರಾಕರಿಸುವುದರಿಂದ ಭಾರತೀಯ ವಿಜ್ಞಾನಿಗಳು ಮತ್ತು ದೇಶೀಯ ದೂರಸಂಪರ್ಕ ಕಂಪನಿಗಳಿಗೆ ಉತ್ತೇಜನ ಸಿಗಲಿದ್ದು, ದೇಶೀಯ ಸಂಸ್ಥೆಗಳೇ ಭದ್ರತಾ ನಿಯಮಗಳಿಗೆ ಬದ್ಧವಾಗಿ ಕೈಗೆಟುಕುವ ದರದಲ್ಲಿ ಉಪಗ್ರಹ ಇಂಟರ್ನೆಟ್ ಸೇವೆ ನೀಡಬಲ್ಲವು ಎಂದು ಅವರು ಪ್ರತಿಪಾದಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು