Tuesday, April 30, 2024

ಸತ್ಯ | ನ್ಯಾಯ |ಧರ್ಮ

ಮಧುಗಿರಿಯನ್ನು ಪ್ರತ್ಯೇಕ ಜಿಲ್ಲೆ ಮಾಡುವ ಬಗ್ಗೆ ಪರಿಶೀಲನೆ: ಸಿದ್ಧರಾಮಯ್ಯ ಭರವಸೆ

ತುಮಕೂರು ಸೆ 6: ನಾಡಿನ ಮಕ್ಕಳ ಮಾನಸಿಕ ಮತ್ತು ದೈಹಿಕ ಸದೃಢತೆಗಾಗಿ ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೆ ತಂದು 54 ಲಕ್ಷಕ್ಕೂ ಅಧಿಕ ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿ ದಿನ ಸೇವಿಸುವಂತಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅಪಾರ ಮೆಚ್ಚುಗೆ ಗಳಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ ಮತ್ತು ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಧುಗಿರಿಯಲ್ಲಿ ಆಯೋಜಿಸಿದ್ದ ಕ್ಷೀರ ಭಾಗ್ಯ ಯೋಜನೆಯ ದಶಮಾನೋತ್ಸವ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳು‌ ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾಗಿದ್ದರೆ ಮಾತ್ರ ಆರೋಗ್ಯವಂತರಾಗಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಎಲ್ಲಾ ಜಾತಿಯ ಎಲ್ಲಾ ಧರ್ಮದ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕ್ಷೀರ ಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆವು. ಹತ್ತು ವರ್ಷಗಳಿಂದ ಪ್ರತೀ ದಿನ ಲಕ್ಷಾಂತರ ಮಕ್ಕಳಿಗೆ ಪೌಷ್ಠಿಕ ಆಹಾರ ಸಿಗುವಂತೆ ಮಾಡಿದ್ದೇವೆ. ಹೀಗಾಗಿ ನಮ್ಮ ಹೆಮ್ಮೆಯ ಈ ಯೋಜನೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ ಎಂದು ವಿವರಿಸಿದರು.

ಬಡವರು, ಮಧ್ಯಮ ವರ್ಗದವರ ಬದುಕಿಗೆ ಅನುಕೂಲ ಆಗುವ ಕಾರ್ಯಕ್ರಮವನ್ನು ನಾವು ರೂಪಿಸಿದರೆ ಬಿಜೆಪಿ ಯವರು ಅಡ್ಡಗಾಲು ಹಾಕಿ ಕಾರ್ಯಕ್ರಮ‌ ವಿಫಲಗೊಳಿಸಲು ಯತ್ನಿಸಿದರು. ಸ್ವತಃ ಪ್ರಧಾನಿ ಮೋದಿಯವರು ಬಡವರ ಪರ ಕಾರ್ಯಕ್ರಮ ನೀಡಿದ್ದರಿಂದ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎಂದು ಅಪ್ಪಟ ಸುಳ್ಳು ಹೇಳಿದರು ಎಂದು ಟೀಕಿಸಿದರು.

ಅಂಬಾನಿ, ಅದಾನಿಗೆ ಕೊಟ್ಟರೆ ದೇಶದ ಆರ್ಥಿಕತೆಗೆ ನಷ್ಟ ಆಗುವುದಿಲ್ಲವೇ ಪ್ರಧಾನಿ ಮೋದಿಯವರೇ ಎಂದು ಖಾರವಾಗಿ ಪ್ರಶ್ನಿಸಿದ ಮುಖ್ಯಮಂತ್ರಿಗಳು ಬಡವರು ಮಧ್ಯಮ ವರ್ಗದವರು ಸಮಾಧಾನದಿಂದ ಎರಡು ಹೊತ್ತು ಊಟ ಮಾಡಿದರೆ ವಿರೋಧಿಸಬೇಡಿ ಎಂದರು.

ಗೃಹ ಸಚಿವ ಜಿ.ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ , ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ , ಶಾಸಕರುಗಳಾದ ರಂಗನಾಥ್, ಷಡಾಕ್ಷರಿ ಸೇರಿ ಹಲವು ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು