Home ದೇಶ ಮಳೆ ಅವಾಂತರ: ಮುಂಬೈಯಲ್ಲಿ ಕಟ್ಟಡ ಕುಸಿದು ಆರು ಸಾವು

ಮಳೆ ಅವಾಂತರ: ಮುಂಬೈಯಲ್ಲಿ ಕಟ್ಟಡ ಕುಸಿದು ಆರು ಸಾವು

0

ಮುಂಬೈನ ಮಾಂಖುರ್ಡ್ ಪ್ರದೇಶದ ಜನತಾ ನಗರದ ಚಾಲ್ ಒಂದರಲ್ಲಿ ಭಾರಿ ಮಳೆಯ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ 8:30ರ ಸುಮಾರಿಗೆ ಮೂರು ಅಂತಸ್ತಿನ ಕಟ್ಟಡವೊಂದು ಪಕ್ಕದ ಮನೆಗಳ ಮೇಲೆ ಕುಸಿದು ಬಿದ್ದಿದೆ. ಈ ಅಪಘಾತದಲ್ಲಿ ಒಂದೇ ಕುಟುಂಬದ ಐದು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ.

ಮುಂಬೈ ಮತ್ತು ದೇಶದ ಇತರ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯು ತೀವ್ರ ಜಲಾವೃತ ಮತ್ತು ಸರಣಿ ಅಪಘಾತಗಳಿಗೆ ಕಾರಣವಾಗಿದೆ. ಕಳೆದ 24 ಗಂಟೆಗಳಲ್ಲಿ ಮುಂಬೈ ನಗರದಲ್ಲಿ 265 ಮಿಮೀ ಮತ್ತು ಉಪನಗರಗಳಲ್ಲಿ 227 ಮಿಮೀಗಿಂತ ಹೆಚ್ಚು ಮಳೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದಂದು ನಗರದ ಎಲ್ಲಾ ಶಾಲೆ ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನವಿ ಮುಂಬೈನ ಚಿರ್ನೇರ್ ಗ್ರಾಮದಲ್ಲಿ ತೀವ್ರ ಜಲಾವೃತವಾಗಿದ್ದು, ಜನರು ಮನೆಯ ಸುತ್ತಮುತ್ತ ಹತ್ತಾರು ಹಾವುಗಳನ್ನು ಕೊಂದಿರುವುದಾಗಿ ತಿಳಿಸಿದ್ದಾರೆ.

ಮುಂಬೈನ ಕುರ್ಲಾ ಭಾಗದಲ್ಲಿ ಬಿರುಗಾಳಿಗೆ ಅಂಗಡಿಯೊಂದರ ಮೇಲೆ ಮರ ಬಿದ್ದ ಪರಿಣಾಮ 63 ವರ್ಷದ ಯೂನುಸ್ ಕುಂದಾವಾಲ ಎಂಬುವವರು ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂಬೈ ಮೇಯರ್ ರಿತು ತಾವ್ಡೆ ಅವರು ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ನಗರದ ಹಳೆಯ ಮರಗಳು ಮತ್ತು ಮ್ಯಾನ್‌ಹೋಲ್‌ಗಳ ಸುರಕ್ಷತಾ ತಪಾಸಣೆಗೆ ಆದೇಶಿಸಿದ್ದಾರೆ. ಅಗತ್ಯವಿದ್ದರೆ ಮಾತ್ರ ಸಾರ್ವಜನಿಕರು ಹೊರಗೆ ಬರಬೇಕೆಂದು ಅವರು ಮನವಿ ಮಾಡಿದ್ದಾರೆ. ಮುಂಬೈನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಅಸ್ಲಂ ಇಸಾಕ್ ಶೇಖ್ ಎಂಬುವವರು ತೆರೆದ ಮ್ಯಾನ್‌ಹೋಲ್‌ಗೆ ಬಿದ್ದು ಮೃತಪಟ್ಟಿದ್ದರು. ಪಕ್ಕದ ಪಾಲ್ಘರ್ ಮತ್ತು ನಲಸೋಪಾರ ಪ್ರದೇಶಗಳಲ್ಲೂ ನಿರಂತರ ಮಳೆಯಿಂದಾಗಿ ರಸ್ತೆಗಳು ಜಲಾವೃತಗೊಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

You cannot copy content of this page

Exit mobile version