Home ಜನ-ಗಣ-ಮನ ಹೆಣ್ಣೋಟ ನೊಂದ ಮಹಿಳೆಯರ ಗಟ್ಟಿ ದನಿ ಮುಮ್ತಾಜ್‌ ಬೇಗಂ

ನೊಂದ ಮಹಿಳೆಯರ ಗಟ್ಟಿ ದನಿ ಮುಮ್ತಾಜ್‌ ಬೇಗಂ

0

ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟಕ್ಕೆ 10 ವರ್ಷಗಳಾದ ನೆನಪಿಗೆ ಬೆಂಗಳೂರಿನ ಸ್ಕೌಟ್ಸ್ ಅಂಡ್ ಗೈಡ್ಸ್ (ಕೊಂಡಜ್ಜಿ ಬಸಪ್ಪ) ಸಭಾಂಗಣದಲ್ಲಿ 2023, ಜನವರಿ 8ನೇ ತಾರೀಕು ಭಾನುವಾರ `ಒಕ್ಕೂಟ-10: ಒಗ್ಗೂಡುವ ಹಬ್ಬ’ ಕಾರ್ಯಕ್ರಮವನ್ನು ಒಕ್ಕೂಟವು ಆಯೋಜಿಸಿದೆ. ಆ ಸಂದರ್ಭದಲ್ಲಿ ಒಕ್ಕೂಟವು ಪಯಣ ನಡೆಸಿದ 11 ಜಿಲ್ಲೆಗಳಿಂದ ಒಬ್ಬೊಬ್ಬ ಹಿರಿಯ ಸಂಗಾತಿಯ ವ್ಯಕ್ತಿಗತ-ಸಂಘಟಿತ ಹೋರಾಟದ ಸ್ಫೂರ್ತಿಯನ್ನು ತೆರೆದಿಡುತ್ತಾ, `ನಮ್ಮ ಅಕ್ಕ, ನಮ್ಮ ಹಿರಿಮೆ’ ಎಂದು ಅವರನ್ನು ಗೌರವಿಸಲಿದೆ. ಅಕ್ಕಂದಿರ ಬದುಕು-ಸಾಧನೆಯ ಕಿರು ಚಿತ್ರಗಳನ್ನು ಪೀಪಲ್‌ ಮೀಡಿಯಾವು ಪ್ರಕಟಿಸುತ್ತಿರುವ ಸರಣಿಯಲ್ಲಿ ಯುವ ಚಿಂತಕಿ ನಸ್ರೀನ್‌ ಮಿಠಾಯಿ ಕಟ್ಟಿ ಕೊಟ್ಟಿರುವ ಕೊಪ್ಪಳದ ಮುಮ್ತಾಜ್‌ ಬೇಗಂ ಕುರಿತ ಬರೆಹ.

ಜೂನ್ 1, 1971ರಲ್ಲಿ ಇಳಕಲ್‍ನಲ್ಲಿ ಜನಿಸಿದ ಮುಮ್ತಾಜ್ ಬೇಗಂ, ಮೂಲತಃ ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಆಲಾಪುರ ಗ್ರಾಮದವರು. ಮುಮ್ತಾಜ್ ಸಣ್ಣ ವಯಸ್ಸಿನಲ್ಲೇ ತಂದೆಯನ್ನು ಕಳೆದು ಕೊಂಡರು. ಮೂರು ಮಕ್ಕಳೊಂದಿಗೆ ಅವರ ತಾಯಿ ಒಂಟಿಯಾಗಿ ಹೋರಾಡಿ ಮಕ್ಕಳನ್ನು ಬೆಳೆಸಿದರು. ಅಮ್ಮನಿಗೆ ಅವರ ತವರಿನವರು ಹೆಗಲಾಗಿ ನಿಂತರು. ಮುಮ್ತಾಜ್ ಬಾಲ್ಯ ಬೆಂಗಳೂರಿನ ಮಾವನ ಮನೆಯಲ್ಲಿ, ನಂತರ ಕೊಪ್ಪಳದ ಚಿಕ್ಕಮ್ಮನ ಮನೆಯಲ್ಲಿ ಕಳೆಯಿತು. ಪಿಯುಸಿವರೆಗೆ ಶಿಕ್ಷಣ ಕೊಡಿಸಿ ಅವರ ಬದುಕಿಗೆ ಮಾರ್ಗದರ್ಶಕರಾದವರು ಹಿಂದಿ ಶಿಕ್ಷಕಿಯಾಗಿದ್ದ ಚಿಕ್ಕಮ್ಮ ಕೌಸರ್ ಬೇಗಂ. ಅಂಗನವಾಡಿ ಶಿಕ್ಷಕಿ ಕೆಲಸಕ್ಕೆ ಅರ್ಜಿ ಹಾಕಿಸಿದ್ದು ಚಿಕ್ಕಪ್ಪ, ಚಿಕ್ಕಮ್ಮನೇ. ಅಲ್ಲಿಂದ ಮುಮ್ತಾಜ್ ಅವರ ಹಕ್ಕಿನ ಹೋರಾಟದ ಪಯಣ ಪ್ರಾರಂಭವಾಯಿತು.

ಕೊಪ್ಪಳದ ಹೋರಾಟಗಾರ್ತಿ ಮುಮ್ತಾಜ್‌ ಬೇಗಂ

ಕೊಪ್ಪಳದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ 1996ರಿಂದ ಕೆಲಸ ಮಾಡತೊಡಗಿದರು. ಶಾಲಾ-ಕಾಲೇಜು ಹಂತದಲ್ಲಿಯೇ ಮುಂದಾಳತ್ವವನ್ನು ನಿಭಾಯಿಸಿಕೊಂಡು ಬಂದ ಅವರು ಅಂಗನವಾಡಿ ಶಿಕ್ಷಕಿಯಾಗಿಯೂ ಹೋರಾಟ ಮುಂದುವರೆಸಿದರು. ಕುಟುಂಬದ ಒಳಗೂ ಹೋರಾಟ ನಡೆಸಿದ ಅವರು, ‘ನಮ್ಮ ಮನೆಯಲ್ಲಿ ಎಲ್ಲರೂ ಬುರ್ಖಾ ಹಾಕಿದ್ದಾರೆ, ಆದರೆ ನಾನು ಮಾತ್ರ ಹಾಕಿಲ್ಲ, ನನಗೆ ಇಷ್ಟ ಇರಲಿಲ್ಲ, ಹಾಗಾಗಿ ನಾನು ಹಾಕಿಲ್ಲ, ನನಗೆ ಯಾರೂ ಒತ್ತಾಯ ಸಹ ಮಾಡಿಲ್ಲ. ಹಾಕುವುದು ಬಿಡುವುದು ಅವರವರ ಇಷ್ಟ’ ಎಂದು ಬುರ್ಖಾ ಬಗೆಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. 19ನೇ ವಯಸ್ಸಿಗೆ ಮದುವೆಯಾದ ಮುಮ್ತಾಜ್ ಎರಡು ಗಂಡುಮಕ್ಕಳೊಂದಿಗೆ ಬಹಳಷ್ಟು ಸಂಕಟ, ಅವಮಾನ, ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸುತ್ತಲೇ ನೊಂದ ಮಹಿಳೆಯರ ದನಿಯಾಗಿ ನಿಂತರು. ಅವರು ಪಡೆಯುತ್ತಿದ್ದ ಗೌರವಧನದಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಿಲ್ಲದ್ದರಿಂದ ಮಕ್ಕಳ ಓದಿನ ಜವಾಬ್ದಾರಿಯನ್ನು ಅವರ ಚಿಕ್ಕಪ್ಪನ ಮಕ್ಕಳೇ ವಹಿಸಿಕೊಂಡರು. ತನ್ನ ಬುದ್ದಿಮಾಂದ್ಯ ಅಕ್ಕನನ್ನು ಜೊತೆಗೇ ಇಟ್ಟುಕೊಂಡು ಪ್ರೀತಿಯಿಂದ ಸಲಹುತ್ತಿರುವ ಮುಮ್ತಾಜ್, ಒಂದು ಹಂತದಲ್ಲಿ ತಾಯಿ, ತಮ್ಮ, ಅಕ್ಕ ಎಲ್ಲರನ್ನೂ ಸಲಹುವ ಜವಾಬ್ದಾರಿ ಮೈಮೇಲೆ ಬಿದ್ದಾಗ ಕುಟುಂಬ ಸಮೇತ ಕೂದಲು ಹಿಂಜುವ ಕೆಲಸವನ್ನೂ ಮಾಡಿದರು.

ಕೌಟುಂಬಿಕ ಸಂಕಷ್ಟಗಳ ನಡುವೆಯೂ ಸಂಘಟನಾತ್ಮಕ ಬದ್ಧತೆ, ಮುಂದಾಳತ್ವದ ಗುಣಗಳು ಅಂಗನವಾಡಿ ಕಾರ್ಯಕರ್ತೆಯರ ಯೂನಿಯನ್‍ನ ತಾಲ್ಲೂಕು ಅಧ್ಯಕ್ಷೆಯಾಗುವಂತೆ ಮಾಡಿತು. ಮದುವೆಯಾಗಿ ಕೊಪ್ಪಳದ ಹಮಾಲಿ ಕಾಲೋನಿ ತಲುಪಿದಾಗ ಅಲ್ಲಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲವೆನ್ನುವುದನ್ನು ಗಮನಿಸಿ ಅಲ್ಲಿಯೂ ಹಕ್ಕಿನ ಹೋರಾಟ ಮುಂದುವರೆಸಿದರು. ಚರಂಡಿ ಅವ್ಯವಸ್ಥೆ, ವಿದ್ಯುತ್ ಅವ್ಯವಸ್ಥೆ, ಬಡಜನರಿಗೆ ರೇಷನ್ ಕಾರ್ಡ್ ದೊರೆಯದಿರುವುದೇ ಮೊದಲಾದ ಸಂಕಟದ ಸಂದರ್ಭಗಳಲ್ಲಿ ಜನರನ್ನು ಒಗ್ಗೂಡಿಸಿದರು. ವಾರ್ಡ್‍ಗಳಲ್ಲಿ ಎಂಟು ದಿನಗಳವರೆಗೆ ನೀರು ಬಿಡದೇ ಇದ್ದಾಗ ಮಹಿಳೆಯರನ್ನು ಸಂಘಟಿಸಿ ಖಾಲಿ ಕೊಡಗಳನ್ನಿಟ್ಟು ಹೆದ್ದಾರಿ ಬಂದ್ ಮಾಡಿಸಿದರು. ಪ್ರತಿಭಟನೆ ನಡೆಸಿ ಶಾಸಕರು, ಇಲಾಖೆಯ ಅಧಿಕಾರಿಗಳು ಹಮಾಲಿ ಕಾಲೋನಿಗೆ ಬಂದು ಜನರಿಗೆ ಮೂಲಭೂತ ಸೌಲಭ್ಯ ಒದಗಿಸುವ ಹಾಗೆ ಮಾಡಿದರು.

450 ರೂ. ಗೌರವಧನದಿಂದ ಆರಂಭಿಸಿ, ಘನತೆಯ ಬದುಕಿಗಾಗಿ ನಡೆದ ಅಂಗನವಾಡಿ ಕಾರ್ಯಕರ್ತೆಯರ ಹೋರಾಟದಲ್ಲಿ ಭಾಗವಹಿಸಿ ಈಗ ಹತ್ತು ಸಾವಿರ ರೂ. ಗೌರವಧನ ಪಡೆಯುತ್ತಿದ್ದಾರೆ. ಈ ದಾರಿಯಲ್ಲಿ ಬಹಳಷ್ಟು ಕಲ್ಲುಮುಳ್ಳುಗಳ ನೋವನ್ನು ಸಹಿಸಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರ ಯೂನಿಯನ್‍ನಲ್ಲಿ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಮುಂದಾಳತ್ವವನ್ನು ಗುರುತಿಸಿ ಪ್ರತಿಬಾರಿಯೂ ಅವರನ್ನೇ ಅಧ್ಯಕ್ಷರನ್ನಾಗಿ ಮರು ಚುನಾಯಿಸಲಾಗಿದೆ. ಒಮ್ಮೆ ಮುಮ್ತಾಜ್‍ಗೆ ವರ್ಗಾವಣೆಯಾದಾಗ ಜನರು ಪ್ರತಿಭಟನೆ ಮಾಡಿ ಅಲ್ಲೇ ಉಳಿಸಿಕೊಂಡಿರುವುದು ಅವರ ಜನಪ್ರಿಯತೆಯನ್ನು ಸೂಚಿಸುತ್ತದೆ.

`ಅಂಗನವಾಡಿ ಕೆಲಸದಿಂದ ಜನಸಂಪರ್ಕ ಬೆಳೆದಿದೆ, ಭವಿಷ್ಯದಲ್ಲಿ ಈ ದೇಶಕ್ಕೆ ಬೇಕಾಗುವ ಡಾಕ್ಟರ್ಸ್, ಎಂಜಿನಿಯರ್ಸ್ ಮುಂತಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮಕ್ಕಳ ಬುನಾದಿ ನಮ್ಮಿಂದ ಶುರುವಾಗುತ್ತೆ’ ಎನ್ನುವ ಹೆಮ್ಮೆ ಮುಮ್ತಾಜ್ ಅವರಿಗೆ ಇದೆ. ಪ್ರಸ್ತುತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಷನ್‍ನಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ರಾಜ್ಯ ಕಮಿಟಿಯ ಸದಸ್ಯರಾಗಿಯೂ ಇದ್ದಾರೆ. ಜೊತೆಗೆ ಕಮ್ಯುನಿಸ್ಟ್ ಪಾರ್ಟಿಯ ಎಐಟಿಯುಸಿಯ ಸದಸ್ಯರಾಗಿಯೂ ಇದ್ದಾರೆ. ಇದರ ಭಾಗವಾಗಿ ಬೇರೆಬೇರೆ ರಾಜ್ಯಗಳಲ್ಲಿ ನಡೆದ ಸಮಾವೇಶಗಳಿಗೆ ಹೋಗಿಬಂದಿದ್ದಾರೆ. `ನಾವು ಹೋಗುತ್ತಿರುವ ಹೋರಾಟದ ದಾರಿಗೆ ಸಂಘಟಿತರಾಗುವುದು ತುಂಬಾ ಮುಖ್ಯ; ಒಗ್ಗೂಡಿದರೆ ಏನಾದರೂ ಒಳ್ಳೆಯ ಬದಲಾವಣೆ ಸಾಧ್ಯವಾದೀತು; ಮಹಿಳೆಯರು ಒಗ್ಗೂಡಿದರೆ ಚುನಾವಣೆಯ ದಿಕ್ಕನ್ನೇ ಬದಲಿಸುವ ತಾಕತ್ತು ಪಡೆಯಬಹುದು. ಅದನ್ನು ನಾವು ಅರಿಯಬೇಕಷ್ಟೇ’ ಎನ್ನುವ ಮುಮ್ತಾಜ್ ಭರವಸೆಗಳನ್ನಿಟ್ಟುಕೊಂಡಿರುವ ಜನಸಂಗಾತಿ. ಇವರ ಹೋರಾಟದ ದಾರಿ, ಬದ್ಧತೆಯನ್ನು ಗಮನಿಸಿ ವಿವಿಧ ಸಂಸ್ಥೆಗಳು, ಸರಕಾರಿ ಇಲಾಖೆಗಳು ಮನ್ನಣೆ, ಪ್ರಶಸ್ತಿಗಳನ್ನು ಗೌರವಿಸಿವೆ.

ತಮ್ಮ ವೃತ್ತಿಯ ವಿಷಯಗಳ ಜೊತೆಗೆ ಕೊಪ್ಪಳದಲ್ಲಿ ಯಾವುದೇ ಮಹಿಳೆಯ ಮೇಲೆ ಕೌಟುಂಬಿಕ ದೌರ್ಜನ್ಯ ನಡೆದರೂ, ಯಾವುದೇ ಸಮಯವಾದರೂ ಮಹಿಳೆಯರು ನ್ಯಾಯಕ್ಕಾಗಿ ಮುಮ್ತಾಜ್ ಅವರ ಮನೆಬಾಗಿಲನ್ನು ತಟ್ಟುತ್ತಾರೆ. ಅವರ ಜೊತೆ ನಿಂತು ಮಧ್ಯರಾತ್ರಿಯಾದರೂ ಪೊಲೀಸ್ ಸ್ಟೇಷನ್ ತಲುಪಿ ನ್ಯಾಯ ಪಡೆಯಲು ಧೈರ್ಯ ತುಂಬುತ್ತಾರೆ. ನೂರಾರು ಮಹಿಳೆಯರಿಗೆ ಭರವಸೆ ತುಂಬಿದ್ದಾರೆ. ಒಂಟಿ ಮಹಿಳೆಯರ ಬದುಕಿಗೆ ಆಸರೆಯಾಗುವ ವಿಧವಾ ವೇತನ, ವೃದ್ಧಾಪ್ಯ ವೇತನ, ಮನಸ್ವಿನಿಯಂತಹ ಯೋಜನೆಗಳು ಅವಶ್ಯಕತೆ ಇರುವವರಿಗೆ ತಲುಪಲು ಶ್ರಮ ವಹಿಸಿದ್ದಾರೆ. ಸಂಕಷ್ಟಕ್ಕೆ ಒಳಗಾದ ಪುರುಷರಿಗೂ ನ್ಯಾಯ ಕೊಡಿಸಲು ಜೊತೆ ನಿಂತಿದ್ದಾರೆ.

ಬದುಕಿನಲ್ಲಿ ಸಂಘರ್ಷ, ಸಂಕಟಗಳೇ ತುಂಬಿದ್ದರೂ ಹೋರಾಟದ ಮೂಲಕ ಭರವಸೆಯ ಆಶಾಕಿರಣವನ್ನು ಕಾಣುತ್ತ ಮುನ್ನಡೆದಿರುವ ದಿಟ್ಟೆ ಮುಮ್ತಾಜ್, `ನಮ್ಮ ಅಕ್ಕ, ನಮ್ಮ ಹಿರಿಮೆ’ಯಾಗಿದ್ದಾರೆ.

ನಸ್ರೀನ್‌ ಮಿಠಾಯಿ

ಸಾಮಾಜಿಕ ಕಾರ್ಯಕರ್ತೆ, ಹೊಸಪೇಟೆ

You cannot copy content of this page

Exit mobile version