Sunday, June 16, 2024

ಸತ್ಯ | ನ್ಯಾಯ |ಧರ್ಮ

ಮುರುಘಾಶರಣರು ಮತ್ತು ಸತ್ಯಸಂಧತೆ

ತಮ್ಮ ನಿರಪರಾಧಿತನವನ್ನು ಸಾಬೀತು ಪಡಿಸಿಕೊಳ್ಳಲು ಮುರುಘಾಶರಣರು ಸಾಕ್ಷಿ, ವಾದಗಳನ್ನು ಆಧರಿಸಬೇಕಿಲ್ಲ. ಈ‌ ತಕ್ಷಣವೇ ಪೀಠತ್ಯಾಗ ಮಾಡಿ ತಮ್ಮ ಧರ್ಮನಿಷ್ಠೆಯನ್ನು, ನ್ಯಾಯ ಪರತೆಯನ್ನೂ ಅದಕ್ಕೂ ಮಿಗಿಲಾದ ನೈತಿಕ ಘನತೆಯನ್ನು ಎತ್ತಿ ಹಿಡಿಯಬೇಕು.

ಮುರುಘಾಬೃಹನ್ನಠದ ಮುರುಘಾ ಶರಣರ ಮೇಲೆ ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪದ ಕೇಸು ದಾಖಲಾಗಿದೆ. ಸಚ್ಚಾರಿತ್ರ್ಯರೂ, ಪ್ರಖರ ವೈಚಾರಿಕರೂ, ಪ್ರಗತಿಪರರೂ ಆದ ಮುರುಘಾಶರಣರ ಮೇಲಿನ ಈ ಆರೋಪ ದ ಹಿಂದೆ ಅಧಿಕಾರದ ದಾಹ ಇದೆ. ಪಿತೂರಿ ಇದೆ ಎಂಬ ಪ್ರತಿಕ್ರಿಯೆಗಳು ಈಗ ಹೊರಬಿದ್ದಿವೆ.

ಯಾವುದೇ ಪ್ರಭಾವಿ ವ್ಯಕ್ತಿಯ ವಿರುದ್ಧ ಇಂತಹ ಆರೋಪಗಳು ಕೇಳಿಬಂದಾಗ ಅದರ ಹಿಂದೆ ‘ ಪಿತೂರಿ’ ಗಳಿರುವುದನ್ನು ಅವರ ಹಿಂಬಾಲಕರು, ಸಮರ್ಥಕರು ಕ್ಷಣಮಾತ್ರದಲ್ಲಿ ಕಂಡುಕೊಂಡುಬಿಡುತ್ತಾರೆ. ಇದು ನಿಜ ಇರಲೂ ಬಹುದು,ಇಲ್ಲದಿರಲೂ ಬಹುದು. ಆದರೆ ತನಿಖೆಗೂ ಮುಂಚೆ ಇಂತಹ ಸಮರ್ಥನೆಗಳು, ಕವರ್ ಫೈರಿಂಗ್ ಥಿಯೇರಿಗಳಿಂದ ಆರೋಪದ ಮಹತ್ವವನ್ನೂ, ಗಂಭೀರತೆಯನ್ನು ಸಡಿಲಗೊಳಿಸುವ ಕೆಲಸಗಳು ಆರಂಭವಾಗುತ್ತವೆ. ಮುರುಘಾಶ್ರೀಶರಣರ ಮೇಲೆ ಕೇಸು ದಾಖಲಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಈ ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ‘ಸ್ವಾಮೀಜಿ ವಿರುದ್ಧ ಮಠದಲ್ಲಿದ್ದವರೆ ತೊಂದರೆ ಮಾಡಿದಂತಿದೆ. ಈ ಬಗ್ಗೆ ಮಾಹಿತಿ ಇದೆ’ ಎಂದು ಹೇಳಿದ್ದಾರೆ. ಗೃಹ ಸಚಿವರ ಈ ಹೇಳಿಕೆ ಈ ಪ್ರಕರಣ ನಿಷ್ಪಕ್ಷಪಾತವಾಗಿ ನಡೆಯುವುದು ಅಷ್ಟು ಸುಲಭವಲ್ಲ ಎಂಬ ಸೂಚನೆಯನ್ನೂ ಬಿಟ್ಟುಕೊಟ್ಟಂತಿದೆ.

ಮುರುಘಾ ಶರಣರ ವಿರುದ್ಧ ಗಂಭೀರವಾದ ಪೋಕ್ಸ್ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು, ಕಾನೂನು ಪ್ರಕ್ರಿಯೆಗಳು ಏನಿವೆ ಅವೆಲ್ಲವೂ ನಡೆಯಲಿ, ಅಪರಾಧ ಸಾಬೀತಾದರೆ ಕಠಿಣ ಶಿಕ್ಷೆ ಆಗಲೇಬೇಕು, ನಿರಪರಾಧಿ ಆದರೆ ಅದನ್ನು ಸ್ವಾಗತಿಸೋಣ, ಇದು ಕಾನೂನಿನ‌ ಪ್ರಕ್ರಿಯೇಯ ಭಾಗ. ಇದಕ್ಕಾಗಿ ಎಲ್ಲರೂ ಕಾಯೋಣ.

ಆದರೆ…?

ಮುರುಘಾಶರಣರು ತಮ್ಮ ಮೇಲಿನ ಆರೋಪ ದ ಹಿಂದೆ ‘ ಪಿತೂರಿ’ ಇದೆ. ಈ ಪಿತೂರಿಗಾರರ ಜೊತೆಗೆ ‘ಸಂಧಾನಕ್ಕೂ ಸಿದ್ದ, ಸಮರಕ್ಕೂ ಬದ್ಧ’ ಎಂದು ಘೋಷಿಸುವ ಮೂಲಕ ತಾವೂ ಕೂಡ ಪುಢಾರಿ ರಾಜಕಾರಣಿಗಳಿಗಿಂತ ಭಿನ್ನರಲ್ಲ ಎಂಬುದನ್ನು ಪ್ರದರ್ಶಿಸಿದ್ದಾರೆ‌.

ಶರಣರ ಮೇಲೆ ಬಂದಿರುವುದು ಅಪ್ರಾಪ್ತ ಬಾಲಕಿಯರಿಬ್ಬರ ಮೇಲಿನ ಲೈಂಗಿಕ ಕಿರುಕುಳದ ಆರೋಪ. ಶರಣರು ತಮಗಿರುವ ಪ್ರಭಾವ, ಸಾಮರ್ಥ್ಯಗಳಿಂದ ‘ಪಿತೂರಿಗಾರರೊಂದಿಗೆ’ ಸಂಧಾನವನ್ನೇನೋ ನಡೆಸಿ ವಿಜಯಂಗೈಯ್ಯಬಹುದು. ಆದರೆ ಸಂತ್ರಸ್ತ ಬಾಲಕಿಯರ ಬದುಕು.ಭವಿಷ್ಯದ ಕತೆಯೇನು?

ಮುರುಘಾ ಶರಣರು ತಮ್ಮ ಮೇಲೆ ಬಂದಿರುವ ಗುರುತರ ಆರೋಪವನ್ನು ಕಾನೂನು ದೃಷ್ಟಿಗಿಂತ ಬಸವಾದಿಶರಣತ್ವದ ನೈತಿಕತೆ ಮತ್ತು ಆತ್ಮಸಾಕ್ಷಿಯ ನೆಲೆಯಲ್ಲಿ ಎದುರುಗೊಳ್ಳಬೇಕಾದ ಸಂದರ್ಭವಿದು. ಈ ಆರೋಪದಿಂದ ಮಠದ ಲಕ್ಷಾಂತರ ಭಕ್ತರ ಭಾವನೆಗಳನ್ನು ಅಲ್ಲೋಲಕಲ್ಲೋಲಗೊಳಿಸಿರುತ್ತದೆ. ಮಠಗಳ ಮೇಲಿನ ವಿಶ್ವಾಸದ ಪದವೆ ಕುಸಿಯುವಂತಾಗಿರುತ್ತದೆ. ಇದನ್ನೆಲ್ಲಾ ಉಳಿಸಿಕೊಳ್ಳಲು ಮುರುಘಾಶರಣರು ತಮ್ಮ ನೈತಿಕ ನಡೆಯನ್ನು ಪ್ರತಿಪಾದಿಸಬೇಕಾದದ್ದು ಕರ್ತವ್ಯ ಕೂಡ. ಇದಕ್ಕಿರುವ ದಾರಿ ಎಂದರೆ ಅದು ಗುರುಪೀಠವನ್ನು ತ್ಯೇಜಿಸುವುದೇ ಆಗಿರುತ್ತದೆ.

ತಮ್ಮ ನಿರಪರಾಧಿತನವನ್ನು ಸಾಬೀತು ಪಡಿಸಿಕೊಳ್ಳಲು ಮುರುಘಾಶರಣರು ಸಾಕ್ಷಿ, ವಾದಗಳನ್ನು ಆಧರಿಸಬೇಕಿಲ್ಲ. ಈ‌ ತಕ್ಷಣವೇ ಪೀಠತ್ಯಾಗ ಮಾಡಿ ತಮ್ಮ ಧರ್ಮನಿಷ್ಠೆಯನ್ನು .ನ್ಯಾಯ ಪರತೆಯನ್ನೂ ಅದಕ್ಕೂ ಮಿಗಿಲಾದ ನೈತಿಕ ಘನತೆಯನ್ನು ಎತ್ತಿ ಹಿಡಿಯಬೇಕು. ಸೀತೆ ತನ್ನ ಮೇಲಿನ ಆರೋಪದಿಂದ ಅಗ್ನಿಪ್ರವೇಶ ಮಾಡಿ ತನ್ನ ಪಾವಿತ್ರ್ಯತೆಯನ್ನು ಸಾಬೀತು ಮಾಡಿದ ಆದರ್ಶಮೌಲ್ಯದಂತೆ ಶರಣರು ಅಗ್ನಿ ಪ್ರವೇಶ ಮಾಡಬೇಕಾಗಿಲ್ಲ. ಕಲಿಯುಗದಲ್ಲಿ ಇದು ಸಾಧ್ಯವೂ ಇಲ್ಲ. ಆದರೆ ಶರಣರು ಮಠವೆಂಬ. ಮಠಾಧಿಪತಿ ಎಂಬ ಪ್ರಭಾವಳಿಯ ಸ್ಥಾವರರೂಪಗಳನ್ನು ತೊರೆದು ತಮ್ಮ ಸತ್ಯಸಂಧತೆಯನ್ನೂ , ಶರಣತ್ವವನ್ನು ಲೋಕದ ವಿಶ್ವಾಸಕ್ಕಿಡಬಾರದೇಕೆ?

ಎನ್ನ ತಪ್ಪು ಅನಂತಕೋಟಿ
ನಿಮ್ಮ ಆತ್ಮಸೈರಣೆಗೆ ಲೆಕ್ಕವಿಲ್ಲ
ಇನ್ನೂ ತಪ್ಪಿದೆನಾದಡೆ ನಿಮ್ಮ ಪಾದವೆ ದಿಬ್ಯ…

ಎನ್ನ ನಡೆಯೊಂದು ಪರಿ, ಎನ್ನ ನುಡಿಯೊಂದು ಪರಿ?
ಎನ್ನೊಳಗೆ ಶುದ್ಧವಿಲ್ಲ ನೋಡಯ್ಯಾ.

ಆತ್ಮಶುದ್ದಿಯ ಇಂತಹ ಮಹಾಮಾರ್ಗವನ್ನೆ ತೆರೆದಿಟ್ಟ ಬಸವಣ್ಣ ಮುರುಘಾಶರಣರಿಗೆ ನೆನಪಾಗುವುದಿಲ್ಲವೆ?

ಬಸವಣ್ಣ ಹೇಳಿದಂತೆ ಶರಣನ ಬ್ರಹ್ಮ ಚರ್ಯ ಶ್ರೋತ್ರ,ತ್ವಕ್ಕು,ನಾಸಿಕ,ನೇತ್ರ ಮತ್ತು ಜಿಹ್ವೆಗಳಲ್ಲಿಯೂ ಇರಬೇಕು. ನಿಜ ಶರಣರೆನಿಸಿಕೊಂಡ ಮುರುಘಾಶರಣರ ಬ್ರಹ್ಮಚರ್ಯವೂ , ಇಂದ್ರೀಯ ನಿಗ್ರಹದ ವೈಫಲ್ಯದ ಅನುಮಾನಗಳೂ ಈಗ ಅವರನ್ನು‌ಮುತ್ತಿಕೊಂಡಿವೆ.
ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ:
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ:
… ಛಲವಿಲ್ಲದವರ ಮೆಚ್ಚ ನಮ್ಮ ಕೂಡಲ ಸಂಗಮದೇವ.

ಮಠಗಳು,ಮಠಾಧಿಪತಿಗಳೂ ಪರಿಶುದ್ದರಾಗಿಲ್ಲ ಎಂಬುದಕ್ಕೆ ಅನೇಕ ಉದಾಹರಣೆಗಳು ಸಿಗುತ್ತಲೆ ಇವೆ. ಮಠಗಳಲ್ಲಿ ನಿರ್ಲಜ್ಜ ಕಾಮ, ಕ್ಷುದ್ರ ರಾಜಕೀಯದಂತಹ ಧರ್ಮಗೇಡಿತನಗಳ ಅಂತಃಪುರಗಳನ್ನು ಕಟ್ಟಿಕೊಂಡ ಕಾವಿಧಾರಿಗಳು ಆತ್ಮವಂಚನೆಯ ಉಪ್ಪರಿಗೆಯಲಿ ಕುಳಿತು ಜನರಿಗೆ ನೈತಿಕ ಮೌಲ್ಯಗಳನ್ನು, ನ್ಯಾಯ ಮತ್ತು ಧರ್ಮನಿಷ್ಠೆಯನ್ನು ಬೋಧಿಸುವುದನ್ನು ಕಂಡಾಗ ಅವರೆಲ್ಲಾ ಮಠದೊಳಗಿನ ಮಾರ್ಜಾಲಗಳಂತೆ ಕಂಡರೆ ಆಶ್ಚರ್ಯವೇನಿಲ್ಲ.

(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)

ಎನ್.ರವಿಕುಮಾರ್
ಬರಹಗಾರರು

Related Articles

ಇತ್ತೀಚಿನ ಸುದ್ದಿಗಳು