ಚಿತ್ರದುರ್ಗ: ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ದೊರೆತ ಹಿನ್ನಲೆಯಲ್ಲಿ ನಾಳೆ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ.
ಶಿವಮೂರ್ತಿ ಮುರುಘಾ ಶರಣರ ಪರ ವಕೀಲ ಉಮೇಶ್ ಚಿತ್ರದುರ್ಗ ಜಿಲ್ಲಾ ಕಾರಾಗೃಹದ ಬಳಿ ಮಾಹಿತಿ ನೀಡಿ, ಒಂದನೇ ಪೋಕ್ಸೋ ಪ್ರಕರಣದಲ್ಲಿ ಮುರುಘಾ ಶ್ರೀಗಳಿಗೆ ಜಾಮೀನು ದೊರೆತ ಹಿನ್ನೆಲೆಯಲ್ಲಿ ಬಿಡುಗಡೆ ಆದೇಶ ಪ್ರತಿಯನ್ನು ಜಿಲ್ಲಾ ಕಾರಾಗೃಹಕ್ಕೆ ತಲುಪಿಸಲಾಗಿದೆ ಎಂದು ಹೇಳಿದ್ದಾರೆ.
ಸಂಜೆ 7 ಗಂಟೆಯ ನಂತರ ಆದೇಶ ಪ್ರತಿ ಕಾರಾಗೃಹಕ್ಕೆ ತಲುಪಿದ್ದು, ನಾಳೆ ಜಿಲ್ಲಾ ಕಾರಾಗೃಹದ ಅಧಿಕಾರಿಗಳಿಂದ ಕಾನೂನು ಪ್ರಕ್ರಿಯೆ ನಡೆಯಲಿದೆ. ಜಿಲ್ಲಾ ಕಾರಾಗೃಹದ ಅಧಿಕಾರಿಗಳನ್ನು ಭೇಟಿಯಾಗಿ ಮಾತನಾಡಿದ್ದೇನೆ. ಇಂದು ಸಮಯ ಮೀರಿದ್ದರಿಂದ ನಾಳೆ ಪ್ರಕ್ರಿಯೆ ನಡೆಸುವುದಾಗಿ ಹೇಳಿದ್ದಾರೆಂದು ಅವರು ಮಾಹಿತಿ ನೀಡಿದರು.
ನಾಳೆ ಸಂಜೆಯೊಳಗೆ ಮುರುಘಾ ಶರಣರು ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಬಾಡಿ ವಾರೆಂಟ್ ಆದೇಶದ ಮೇಲೆ ಜೈಲಿನಲ್ಲಿ ಇರಿಸಿಕೊಳ್ಳಲು ಅವಕಾಶವಿಲ್ಲ. ಹೀಗಾಗಿ ನಾಳೆ ಮರುಘಾ ಶ್ರೀ ಬಿಡುಗಡೆಯಾಗಲಿದ್ದಾರೆ ಎಂದು ವಕೀಲ ಉಮೇಶ್ ತಿಳಿಸಿದ್ದಾರೆ.
ಆದರೆ ಅವರ ಬಿಡುಗಡೆ ವಿಚಾರದಲ್ಲಿ ಕಾನೂನು ಗೊಂದಲ ಇರುವಂತೆ ತೋರುತ್ತಿದ್ದು, ಸರ್ಕಾರಿ ವಕೀಲ ಜಗದೀಶ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ‘ಎರಡನೇ ಪೋಕ್ಸೊ ಪ್ರಕರಣದ ಬಾಡಿ ವಾರೆಂಟ್ ವಿಚಾರಣೆ ನ್ಯಾಯಾಲಯಲ್ಲಿರುವುದರಿಂದ ಶರಣರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಜೈಲಿನಿಂದ ಬಿಡುಗಡೆ ಮಾಡದಂತೆ ನಾವೂ ಕಾರಾಗೃಹಕ್ಕೆ ಮನವಿ ಮಾಡಿಕೊಳ್ಳಲಿದ್ದೇವೆ. ಅವರನ್ನು ಕಾರಾಗೃಹದಲ್ಲಿ ಇಡಲು ಕಾನೂನಿನಲ್ಲಿ ಅವಕಾಶ ಇದೆ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಗೊಂದಲಗಳಿಗೆ ನಾಳೆ ಉತ್ತರ ಸಿಗುವ ನಿರೀಕ್ಷೆಯಿದೆ.