Home ರಾಜ್ಯ ಉಡುಪಿ ನೇಜಾರು ಬರ್ಬರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ 14 ದಿನಗಳ ಪೊಲೀಸ್ ಕಸ್ಟಡಿಗೆ

ನೇಜಾರು ಬರ್ಬರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್ 14 ದಿನಗಳ ಪೊಲೀಸ್ ಕಸ್ಟಡಿಗೆ

0

ಉಡುಪಿ: ನೇಜಾರು ಎನ್ನುವಲ್ಲಿ ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ಪ್ರವೀಣ್‌ ಅರುಣ್‌ ಚೌಗುಲೆ (39) ಎನ್ನುವವನನ್ನು ಜಿಲ್ಲಾ ಒಂದನೇ ಹೆಚ್ಚುವರಿ ನ್ಯಾಯಾಲಯ 14 ದಿನಗಳ ಪೊಲೀಸ್‌ ಕಸ್ಟಡಿಗೆ ನೀಡಿದೆ.

ಆರೋಪಿ ಪ್ರವೀಣ್‌ನ ಆರೋಗ್ಯ ತಪಾಸಣೆಯನ್ನು ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದ್ದು, ಬಿಗಿ ಭದ್ರತೆಯಲ್ಲಿ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಕರಣದ ತನಿಖಾಧಿಕಾರಿಯೂ ಆದ ಮಲ್ಪೆ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಮಂಜುನಾಥ ಗೌಡ ನೇತೃತ್ವದಲ್ಲಿ ಆರೋಪಿಯನ್ನು ಉಡುಪಿಯ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಪೊಲೀಸರ ಪರವಾಗಿ ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಎಚ್.ಎಂ.ನದಾಫ್ ಆರೋಪಿಯನ್ನು 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಕೋರಿದರು. ನ್ಯಾಯಾಧೀಶ ಶ್ಯಾಮ್ ಪ್ರಸಾದ್ ಆರೋಪಿಗೆ ನವೆಂಬರ್ 28ರವರೆಗೆ 14 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದರು. ಈ ಸಂದರ್ಭದಲ್ಲಿ ಆರೋಪಿಗಳ ಪರ ಸರಕಾರ ನೇಮಿಸಿದ ವಕೀಲ ಪೂಜಾರಿ ಉಪಸ್ಥಿತರಿದ್ದರು.

ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ಧಲಿಂಗಪ್ಪ, ಡಿವೈಎಸ್ಪಿಗಳಾದ ಬೆಳ್ಳಿಯಪ್ಪ ಕೆ.ಯು., ದಿನಕರ ಕೆ.ಪಿ., ಅರವಿಂದ ಕಲಗುಜ್ಜಿ, ಮತ್ತು ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ಮಂಜಪ್ಪ, ಮತ್ತು ದೇವರಾಜ್ ಸ್ಥಳದಲ್ಲಿ ಹಾಜರಿದ್ದರು. ನ್ಯಾಯಾಲಯದ ಆವರಣದಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆರೋಪಿಯನ್ನು ನೋಡಲು ನ್ಯಾಯಾಲಯದ ಸುತ್ತ ಜನ ಜಮಾಯಿಸಿದ್ದರು.

You cannot copy content of this page

Exit mobile version