ಉಡುಪಿ : ಕೃಷ್ಣ ನಗರಿ ಉಡುಪಿಯ (Udupi) ಡೆಲ್ಟಾ ಬೀಚ್ (Delta Beach) ಬಳಿ ಸಂಭವಿಸಿದ ಪ್ರವಾಸಿ ಬೋಟ್ ದುರಂತದಲ್ಲಿ (Boat Tragedy) ಮೃತರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಈ ದುರಂತದ ಬೆನ್ನಲ್ಲೇ ಉಡುಪಿ ಜಿಲ್ಲಾಡಳಿತವು ಬೋಟ್‌ಗಳಿಗೆ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮತ್ತು ಎಸ್ಸಿ ಹರಿರಾಮ್ ಶಂಕರ್ ಸಭೆ ನಡೆಸಿದ ಬಳಿಕ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಜಿಲ್ಲೆಯ ಕಡಲ ತೀರಗಳು ಸೇರಿದಂತೆ ಮತ್ತಿತರ ಪ್ರವಾಸಿ ತಾಣಗಳ ಸೌಂದರ್ಯ ಸವಿಯಲು ಆಗಮಿಸುವ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಯಾವುದೇ ಪ್ರಾಣಾಪಾಯಗಳು ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿ ಚರ್ಚಿಸಲಾಗಿದೆ.ಇನ್ನು ಜಿಲ್ಲೆಯ ಎಲ್ಲಾ ಪ್ರವಾಸಿ ಬೋಟ್‌ಗಳು ಬಂದರು, ಪೊಲೀಸ್, ಕರಾವಳಿ ಕಾವಲು ಪಡೆ, ಸ್ಥಳೀಯ ಪ್ರಾಧಿಕಾರ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿಯನ್ನು ಪಡೆಯದೇ ಕಡಲಿಗೆ ಇಳಿಯಬೇಕಿದ್ದು, ಈ ಸಂಬಂಧ ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿ ಬೋಟುಗಳು 45 ದಿನಗಳ ಒಳಗಾಗಿ ಕಡ್ಡಾಯವಾಗಿ ಪ್ರವಾಸೋದ್ಯಮ ಇಲಾಖೆಯಿಂದ ನೋಂದಣಿ ಮಾಡಿಕೊಂಡು ಅನುಮತಿಯನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಮಾರ್ಗಸೂಚಿ ಇಂತಿವೆ:
* ಅನುಮತಿಯನ್ನು ಪಡೆಯದೇ ಇರುವ ಪ್ರವಾಸಿ ಬೋಟ್‌ಗಳ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಹಾಗೂ ಅನುಮತಿ ಪಡೆದ ಪ್ರವಾಸಿ ಬೋಟ್‌ಗಳು ಪ್ರತೀ ವರ್ಷ ತಮ್ಮ ಪರವಾನಿಗೆಯನ್ನು ನವೀಕರಿಸಿಕೊಳ್ಳಬೇಕಾಗಿರುತ್ತದೆ.
* ಪ್ರವಾಸಿ ಬೋಟ್‌ಗಳಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ ಲೈಫ್ ಜಾಕೆಟ್ ಧರಿಸುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಪ್ರತಿಯೊಬ್ಬ ಪ್ರವಾಸಿಗರು ಕಡಲಿಗೆ ಇಳಿಯುವ ಮುನ್ನ ಲೈಫ್ ಜಾಕೆಟ್ ಧರಿಸುವಂತೆ ನೋಡಿಕೊಳ್ಳಬೇಕು.
* ಪ್ರವಾಸಿ ಬೋಟ್‌ಗಳಲ್ಲಿ ಎಲ್ಲರೂ ಲೈಫ್ ಜಾಕೆಟ್ ಧರಿಸಿದ್ದಲ್ಲಿ ಮಾತ್ರ ಬೋಟ್ ಮುಂದೆ ಸಾಗಲಿದೆ ಎಂಬ ಪ್ರೀ-ರೆಕಾರ್ಡೆಡ್ ಆಡಿಯೋವನ್ನು ಬೋಟ್‌ಗಳಲ್ಲಿ ಹೊರಡಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ.
* ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಉದ್ದೇಶಕ್ಕೆ ಬಳಸುವ ಪ್ರವಾಸಿ ಬೋಟ್ ಮಾಲೀಕರುಗಳ ಸಭೆಯನ್ನು ಶೀಘ್ರದಲ್ಲಿ ಕರೆದು ಪ್ರವಾಸಿ ಬೋಟ್‌ಗಳ ಸಂಚಾರಕ್ಕೆ ಪರವಾನಿಗೆಯನ್ನು ಪಡೆಯುವಂತೆ, ಪ್ರವಾಸಿ ಬೋಟ್ ಗಳ ಮಾಲೀಕರುಗಳು ಹಾಗೂ ಅದನ್ನು ಚಲಾಯಿಸುವವರಿಗೆ ಕಾರ್ಯಾಗಾರ ಆಯೋಜಿಸಲಾಗುತ್ತದೆ.
* ಸುರಕ್ಷತಾ ವಿಧಾನ ಅನುಸರಿಸುವ ಬಗ್ಗೆ, ವಿಮೆ ಸೌಲಭ್ಯ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ನೀಡುವ ಬಗ್ಗೆ, ಲೈಫ್ ಜಾಕೆಟ್ ಬಳಸುವ ಕುರಿತು ಕರಪತ್ರಗಳನ್ನು ಸಮುದ್ರ ತೀರ ಸೇರಿದಂತೆ ಪ್ರವಾಸಿಗರು ಹೆಚ್ಚಾಗಿ ಸೇರುವಲ್ಲಿ ಪ್ರದರ್ಶಿಸುವ ಬಗ್ಗೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಲಾಗಿದೆ.
