ಚಿತ್ರದುರ್ಗ: ಎರಡನೇ ಪೋಕ್ಸೊ ಪ್ರಕರಣದಲ್ಲಿ ಮಧ್ಯಾಹ್ನ ಬಂಧಿತರಾಗಿದ್ದ ಮುರುಘಾ ಶರಣ ಇಂದು ಸಂಜೆ ಮತ್ತೆ ಬಿಡುಗಡೆಯಾಗಿದ್ದಾರೆ.
ಹೌದು, ಚಿತ್ರದುರ್ಗ ಜಿಲ್ಲಾ ನ್ಯಾಯಾಲಯವು ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ತಳ್ಳಿ ಹಾಕಿದ್ದು, ಜಾಮೀನು ನೀಡಿ ಬಿಡುಗಡೆಗೆ ಆದೇಶಿಸಿದೆ. ಇದರೊಂದಿಗೆ ಜೈಲಿನಿಂದ ಹೊರಬಂದ ನಾಲ್ಕೇ ದಿನದಲ್ಲಿ ಮತ್ತೆ ಜೈಲು ಹಕ್ಕಿಯಾಗಿದ್ದ ಮುರುಘಾ ಶರಣ ಈಗ ಮತ್ತೆ ಬಯಲಿಗೆ ಬಂದಿದ್ದಾರೆ.
ದಾವಣಗೆರೆಯ ವಿರಕ್ತ ಮಠದಲ್ಲಿ ಶರಣರನ್ನು ಬಂಧಿಸಿದ ಪೊಲೀಸರು ಚಿತ್ರದುರ್ಗಕ್ಕೆ ಕರೆತಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಎದುರು ಹಾಜರುಪಡಿಸಿದರು. ಡಿ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶೆ ಬಿ.ಕೆ.ಕೋಮಲಾ ಆದೇಶಿಸಿದ್ದರು.
ನಂತರ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿಸಿದ ಪೊಲೀಸರು ಅಲ್ಲಿಂದ ಕಾರಾಗೃಹಕ್ಕೆ ತಲುಪಿಸಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ರಾಜ್ಯ ಹೈಕೋರ್ಟ್ ಸೆಷನ್ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತು.
ಅದರಂತೆ ಆದೇಶ ಪ್ರತಿ ತಲುಪಿದ ಕೂಡಲೇ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಯಿತು.