ಪಾಟ್ನಾ: ಹೋಳಿ ಹಬ್ಬದ ದಿನದಂದು ಮುಸ್ಲಿಮರು ಮನೆಯಲ್ಲಿಯೇ ಇರುವಂತೆ ಎನ್ನುವ ಮೂಲಕ ಬಿಹಾರದ ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ವಿಧಾನಸೌಧ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಸ್ಲಿಮರು ರಂಜಾನ್ ಸಮಯದಲ್ಲಿ ರೋಜಾ (ಉಪವಾಸ) ಆಚರಿಸುತ್ತಾರೆ. ಶುಕ್ರವಾರ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಈ ವರ್ಷ ಹೋಳಿ ಶುಕ್ರವಾರ ಬರುತ್ತದೆ, ಆದ್ದರಿಂದ ಹಿಂದೂಗಳು ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸಹಾಯ ಮಾಡಬೇಕು.
ಯಾರಾದರೂ ಬಣ್ಣ ಹಾಕಿದರೆ ಮುಸ್ಲಿಮರು ಕೋಪಿಸಿಕೊಳ್ಳಬಾರದು. “ಹೋಳಿ ಇಷ್ಟವಿಲ್ಲದ ಮುಸ್ಲಿಮರು ಮನೆಯಲ್ಲೇ ಇರಬೇಕು” ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶಾಸಕರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಬೇಕೆಂದು ಅವರು ಒತ್ತಾಯಿಸಿದರು.
“ಧಾರ್ಮಿಕ ಉದ್ವಿಗ್ನತೆಯನ್ನು ಪ್ರಚೋದಿಸಲು ಪ್ರಯತ್ನಿಸಿದ್ದಕ್ಕಾಗಿ ಶಾಸಕ ಬಚೌಲ್ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಅವರು ಮುಸ್ಲಿಂ ಸಹೋದರರನ್ನು ಭಯಭೀತಗೊಳಿಸಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಇದು ಬಿಹಾರ ಎಂಬುದನ್ನು ಬಚೌಲ್ ನೆನಪಿನಲ್ಲಿಟ್ಟುಕೊಳ್ಳಬೇಕು. ನಮ್ಮದು ಪ್ರತಿಯೊಬ್ಬ ಮುಸ್ಲಿಮರನ್ನು ಕನಿಷ್ಠ ಐದರಿಂದ ಆರು ಹಿಂದೂಗಳು ರಕ್ಷಿಸುವ ನೆಲ” ಎಂದು ತೇಜಸ್ವಿ ಹೇಳಿದರು.