Monday, June 17, 2024

ಸತ್ಯ | ನ್ಯಾಯ |ಧರ್ಮ

ಮೈಸೂರು ಬಸ್ ನಿಲ್ದಾಣ ವಿವಾದ ; ಗೆದ್ದದ್ಯಾರು, ಸೋತಿದ್ಯಾರು

ಮೈಸೂರು: ಶಾಸಕ ರಾಮದಾಸ್ ಮತ್ತು ಸಂಸದ ಪ್ರತಾಪ ಸಿಂಹ ಇಬ್ಬರ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬಸ್‌ಸ್ಟ್ಯಾಂಡ್ ತನ್ನ ಎರಡು ಗೋಪುರಗಳನ್ನು ಕಳೆದುಕೊಳ್ಳುವುದರೊಂದಿಗೆ ವಿವಾದಕ್ಕೆ ಒಂದು ಹಂತದ ಪರಿಹಾರ ಸಿಕ್ಕಂತಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರತಾಪ ಸಿಂಹ “ಮಧ್ಯದಲ್ಲೊಂದು ದೊಡ್ಡ ಗುಂಬಜ್, ಅಕ್ಕಪಕ್ಕ ಎರಡು ಚಿಕ್ಕ ಗುಂಬಜ್ ಇದ್ದರೆ ಅದು ಮಸೀದೀನೇ, ಅದನ್ನು ತೆರವು ಮಾಡಿಸುತ್ತೇನೆ ಎಂದಿದ್ದೆ ಮತ್ತು ಅದರಂತೆ ನಡೆದುಕೊಂಡಿದ್ದೇನೆ. ಕಾಲಾವಕಾಶ ಕೇಳಿ ಮಾತಿನಂತೆ ನಡೆದುಕೊಂಡ ಜಿಲ್ಲಾಧಿಕಾರಿಗಳಿಗೆ ಹಾಗು ವಾಸ್ತವ ಅರಿತು ಜನಾಭಿಪ್ರಾಯಕ್ಕೆ ತಲೆಬಾಗಿದ ರಾಮದಾಸ್ ಜಿ ಅವರಿಗೂ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.

ಆದರೆ ಈ ನಡೆ ಬಿಜೆಪಿ ಹಿರಿಯ ರಾಜಕಾರಣಿ ರಾಮದಾಸ್ ಅವರಿಗೆ ಆದ ಅವಮಾನವೆಂದೇ ಅವರ ಅಭಿಮಾನಿಗಳು ಅಭಿಪ್ರಾಯಪಡುತ್ತಾರೆ. ಆ ರೀತಿಯ ಗೋಪುರಗಳಿರುವ ರಚನೆ ಮೈಸೂರು ಸೇರಿದಂತೆ ಕರ್ನಾಟಕದ ಎಲ್ಲೆಡೆ ಇದ್ದರೂ ಇದನ್ನೇ ಟಾರ್ಗೆಟ್ ಮಾಡಿರುವುದು ಪ್ರತಾಪ ಸಿಂಹ ಅವರ ದ್ವೇಷದ ರಾಜಕಾರಣದ ಮುಂದುವರೆದ ಭಾಗ ಎನ್ನುತ್ತಿದ್ದಾರೆ.

ಇದರಿಂದ ಮೈಸೂರು ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತಾಗಿದೆ. ಬಸ್ ನಿಲ್ದಾಣದ ಗುಂಬಜ್ ಬಗ್ಗೆ ಸ್ವತಃ ಶಾಸಕ ರಾಮದಾಸ್ ನಾನಾ ರೀತಿಯಲ್ಲೂ ಸಮರ್ಥನೆ ಕೊಟ್ಟರೂ ಅವರ ಹಿರಿತನಕ್ಕೂ ಬೆಲೆ ಕೊಡದೇ ಸಂಸದ ಪ್ರತಾಪ್ ಸಿಂಹ ಪಟ್ಟು ಹಿಡಿದು ಕೂತಿದ್ದರು.

ಇದರ ನಡುವೆ ಬಸ್ ನಿಲ್ದಾಣದ ಗುತ್ತಿಗೆದಾರ ಮುಸ್ಲಿಂ ಎಂಬ ಬಗ್ಗೆಯೂ ಪ್ರತಾಪ್ ಸಿಂಹ ಗುಂಪು ಇನ್ನೊಂದು ರೀತಿಯಲ್ಲಿ ವಾದ ಹರಿಬಿಟ್ಟಿತ್ತು. ಅಲ್ಲೂ ಸಹ ಶಾಸಕ ರಾಮದಾಸ್ ಗುತ್ತಿಗೆದಾರನ ಹೆಸರನ್ನು ಬಹಿರಂಗಪಡಿಸಿದ್ದರು. ಜೊತೆಗೆ ಅನವಶ್ಯಕವಾಗಿ ಬಸ್ ನಿಲ್ದಾಣದ ವಿವಾದಕ್ಕೆ ಧರ್ಮದ ಲೇಪನ ಕೊಟ್ಟ ಪ್ರತಾಪ್ ಸಿಂಹ ಬಗ್ಗೆ ತಮ್ಮ ನೋವನ್ನು ತೋಡಿಕೊಂಡಿದ್ದರು. ಅಷ್ಟೆ ಅಲ್ಲ, ನನ್ನ ಕ್ಷೇತ್ರದಲ್ಲಿ ಮುಕ್ತವಾಗಿ ನನಗೆ ಜನಸೇವೆ ಮಾಡಲು ಆಗುತ್ತಿಲ್ಲ ಎಂದೂ ಸಹ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು. ಇವೆಲ್ಲದರಿಂದ ಬಿಜೆಪಿ ಪಾಳಯದಲ್ಲಿ ಅಸಮಾಧಾನದ ಹೊಗೆಯಾಡುತ್ತಿದೆ ಎಂಬುದು ಸ್ಪಷ್ಟವಾಗಿತ್ತು.

ಈ ಹಿಂದೆ ಮೈಸೂರಿನ ರಿಂಗ್ ರೋಡ್ ವಿಷಯದಲ್ಲೂ ಸಂಸದ ಮತ್ತು ಶಾಸಕರ ನಡುವೆ ವಿವಾದವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಇದರ ಮುಂದುವರೆದ ಭಾಗವೇ ಈ ಬಸ್‌ಸ್ಟ್ಯಾಂಡ್ ವಿವಾದವಾಗಿದ್ದು ಇಬ್ಬರು ರಾಜಕಾರಣಿಗಳ ನಡುವಿನ ಪ್ರತಿಷ್ಟೆಯ ಜಗಳಕ್ಕೆ ನಷ್ಟವಾಗಿದ್ದು ಜನರ ತೆರಿಗೆಯ ಹಣವೆನ್ನುವುದು ವಿಪರ್ಯಾಸ ಎನ್ನುವುದು ಜನಸಾಮಾನ್ಯರ ಅಭಿಪ್ರಾಯ.

Related Articles

ಇತ್ತೀಚಿನ ಸುದ್ದಿಗಳು