ಮಂಡ್ಯ: ಗೊಂದಲಗಳ ನಡುವೆಯೇ ಆರಂಭವಾಗಿದ್ದ ಬಿಜೆಪಿ-ಜೆಡಿಎಸ್ ದೋಸ್ತಿಯ ಮೈಸೂರು ಚಲೋ ಇಂದು ಮಂಡ್ಯದಲ್ಲಿ ಎರಡೂ ಪಕ್ಷಗಳ ನಡುವಿನ ಘರ್ಷಣೆಗೆ ಸಾಕ್ಷಿಯಾಗಿದೆ.
ಯಾತ್ರೆ ಆರಂಭಕ್ಕೂ ಮೊದಲೇ ಪ್ರೀತಂ ಗೌಡ ಭಾಗವಹಿಸಿದರೆ ತಾನು ಈ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ ಎಂದು ಕುಮಾರ ಸ್ವಾಮಿ ಹೇಳಿದ್ದರು. ಆದರೆ ಕೊನೆಯ ಕ್ಷಣಗಳ ಮನವೊಲಿಕೆಯ ನಂತರ ಜೆಡಿಎಸ್ ಈ ಯಾತ್ರೆಯ ಭಾಗವಾಗಿತ್ತು.
ಇದೀಗ ಯಾತ್ರೆ ಆರಂಭಗೊಂಡು ವಾರ ಕಳೆಯುತ್ತಾ ಬಂದಿದ್ದರೂ ಅದು ಸದ್ದು ಮಾಡುವಲ್ಲಿ ಬಹುತೇಕ ಸೋತಿತ್ತು. ಬಿಜೆಪಿ ನಾಯಕರೇ ಈ ಯಾತ್ರೆಯ ಕುರಿತು ನಿರುತ್ಸಾಹ ಹೊಂದಿದ್ದರು. ಜೊತೆಗೆ ಆ ಭಾಗದಲ್ಲಿ ಒಂದಷ್ಟು ಮಳೆಯಾಗುತ್ತಿರುವ ಕಾರಣ ಕೃಷಿ ಚಟುವಟಿಕೆಗಳೂ ಆರಂಭಗೊಂಡಿವೆ. ಯಾತ್ರೆ ನಡೆಸಲು ಇದು ಸಂದರ್ಭವಲ್ಲವೆಂದು ಕುಮಾರಸ್ವಾಮಿಯವರೂ ಈ ಹಿಂದೆ ಹೇಳಿದ್ದರು.
ಇದೆಲ್ಲದರ ನಡುವೆ ಇಂದು ಮಂಡ್ಯದಲ್ಲಿ ಈ ಯಾತ್ರೆಯ ಸಂದರ್ಭದಲ್ಲಿ ಮಾಜಿ ಶಾಸಕ ಪ್ರೀತಮ್ ಗೌಡ ಎಂಟ್ರಿ ಕೊಟ್ಟಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿ ಬೆಂಬಲಿಗರು ಪ್ರೀತಮ್ ಗೌಡ ಪರವಾಗಿ ಘೋಷಣೆ ಕೂಗಿದರು. ಗೌಡರ ಗೌಡ ಇತ್ಯಾದಿ ಘೋಷಣೆ ಕೂಗತೊಡಗಿದಂತೆ ಜೆಡಿಎಸ್ ಕಾರ್ಯಕರ್ತರು ತಾಳ್ಮೆ ಕಳೆದುಕೊಂಡಿದ್ದಾರೆ.
ನಂತರ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ತಳ್ಳಾಡುತ್ತಾ ಘೋಷಣೆಗಳನ್ನು ಕೂಗಿದ್ದಾರೆ. ಇದಿಷ್ಟೂ ನಡೆದಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ಎದುರು ಎನ್ನುವುದು ಗಮನಾರ್ಹ.
ನಂತರ ಮದ್ಯ ಪ್ರವೇಶಿಸಿದ ವಿಜಯೇಂದ್ರ ಪರಿಸ್ಥಿತಿಯನ್ನು ನಿಭಾಯಿಸಿದ್ದು, ನಾವೆಲ್ಲರೂ ಒಗ್ಗಟ್ಟಾಗಿರಬೇಕು ಎಂದು ತಿಳಿ ಹೇಳಿದ್ದಾರೆ. ಕೆಲ ಸಮಯದ ಪರಿಸ್ಥಿತಿ ತಣ್ಣಗಾಗಿದ್ದು, ಬಳಿಕ ಮೆರವಣಿಗೆ ಎಂದಿನಂತೆ ಸಾಗಿದೆ.
ಒಟ್ಟಾರೆ ಜಾತಿ ಪ್ರತಿಷ್ಠೆ, ಜಾತಿ ನಾಯಕ ತಾನು ಎಂದು ಬಿಂಬಿಸಿಕೊಳ್ಳುವ ಸ್ಪರ್ಧೆಗೆ ಮೈಸೂರು ಚಲೋ ಅಖಾಡವಾಗಿರುವುದಕ್ಕೆ ಈ ಯಾತ್ರೆಯಲ್ಲಿ ಕೇಳಿ ಬಂದ ಮೈಸೂರಿನಲ್ಲೂ ಗೌಡ ಎಂದರೆ ಪ್ರೀತಮ್ ಗೌಡ, ಮಂಡ್ಯದಲ್ಲೂ ಗೌಡ ಎಂದರೆ ಪ್ರೀತಮ್, ಗೌಡರ ಗೌಡ ಪ್ರೀತಮ್ ಗೌಡ, ಗೌಡರ ಗೌಡ ದೇವೇಗೌಡರು ಎನ್ನುವ ಘೋಷಣೆಗಳೇ ಸಾಕ್ಷಿ.