ಮೈಸೂರು ನ. 25: ಜಾನಪದ ಕಲಾಪ್ರಕಾರದ ಕಂಸಾಳೆ ಕಲೆಯಲ್ಲಿ ತಮ್ಮದೇಯಾದಂತಹ ಛಾಪನ್ನು ಮೂಡಿಸಿ ನಟ ಡಾ. ಶಿವರಾಜ್‌ಕುಮಾರ್ ಅಭಿನಯಿಸಿದಂತಹ ಜನುಮದ ಜೋಡಿ ಚಲನಚಿತ್ರದ ಕೋಲುಮಂಡೆ ಜಂಗಮ ಜನಪದ ನೃತ್ಯವನ್ನು ಸಂಯೋಜನೆ ಮಾಡಿ ವರನಟ ಡಾ. ರಾಜಕುಮಾರ್ ಹಾಗೂ ಶಿವರಾಜಕುಮಾರ್ ಅವರಿಂದಲೇ ಸ್ವತಃ ಸೈ ಅನ್ನಿಸಿಕೊಂಡಿದ್ದವರು ಈ ಕಂಸಾಳೆ ಕಲಾವಿದ ಕುಮಾರಸ್ವಾಮಿ. ತಿಂಗಳ ಮುಂಚೆಯೇ ಜನಪದ ಸಿರಿ ಕನ್ನಡ ವಾಹಿನಿಯು ಅವರೊಂದಿಗೆ ಸಂದರ್ಶನ ಮಾಡಿದೆ.
1951 ರಲ್ಲಿ ಮೈಸೂರಿನ ಬಂಡಿಕೇರಿಯಲ್ಲಿ ಜನಿಸಿ, ಭೌತಿಕವಾಗಿ ಇಂದು ಅವರು ನಮ್ಮನ್ನು ಅಗಲಿದರೂ ತಮ್ಮ ಇಡೀ ಬದುಕಿನ, ಬಾಲ್ಯದ, ಯೌವ್ವನದ, ಮದುವೆಯ ದಿನದ, ಜಾನಪದದ ದಿಗ್ಗಜ ಅವರ ತಂದೆಯವರ ಬಗ್ಗೆ ಒಟ್ಟಾರೆಯಾಗಿ ತಮ್ಮ ಕಲಾ ಬದುಕಿನ ಬಗ್ಗೆ ಎಲ್ಲವನ್ನೂ ನಮ್ಮ ವಾಹಿನಿಯೊಂದಿಗೆ ಮುಕ್ತ ಮನಸ್ಸಿನಿಂದ ನಿರರ್ಗಳವಾಗಿ ಮಾತನಾಡಿದ್ದಾರೆ. ಅದನ್ನೆಲ್ಲಾ ದಾಖಲೆಗಾಗಿ ನಾಳೆಯಿಂದಲೇ ಅವರ ಸಂದರ್ಶನವನ್ನು ನಮ್ಮ ಜನಪದ ಸಿರಿ ಯೂಟ್ಯೂಬ್ ವಾಹಿನಿಯಲ್ಲಿ ಸರಣಿಯಾಗಿ ಬಿಡುಗಡೆ ಮಾಡುತ್ತೇವೆ. ಆ ಮೂಲಕ ತಂತ್ರಜ್ಞಾನದ ಮುಖಾಂತರ ಅವರ ಬದುಕಿನ ಕುರಿತು ದಾಖಲಿಸುವಂತಹ ಪ್ರಯತ್ನ ನಾವು ಮಾಡಿದ್ದೇವೆ ಎಂದು ಜನಪದ ಸಿರಿ ಕನ್ನಡ ವಾಹಿನಿಯ ಪ್ರಧಾನ ಸಂಪಾದಕರಾದ ಜರಗನಹಳ್ಳಿ ಕಾಂತರಾಜು ಹೇಳಿದರು.
ಜಾನಪದ ಕ್ಷೇತ್ರದ ಹಿರಿಯಣ್ಣನಂತೆ ದಿಗ್ಗಜರಾಗಿದ್ದ ಮೈಸೂರಿನ ಒಂದು ರಸ್ತೆಯ ವೃತ್ತಕ್ಕೆ ಸರ್ಕಾರವೇ ನಾಮಕರಣ ಮಾಡಿದ ಹಿರಿಯ ದಿ. ಮಹಾದೇವಯ್ಯ ಅವರ ಪುತ್ರ ಈ ಕಂಸಾಳೆ ಕುಮಾರಸ್ವಾಮಿಯವರು, ತಂದೆಯಂತೆ ಇವರು ಕೂಡ ಪ್ರಮುಖ ಕಲಾವಿದರು ಆಗಿದ್ದರು. ಅಂತ್ಯಕ್ರಿಯೆಯನ್ನು ನಾಳೆ ಬೆಳ್ಳಿಗ್ಗೆ 11 ಗಂಟೆಗೆ ಮಂಗಳವಾರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವಂತಹ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.