Saturday, April 27, 2024

ಸತ್ಯ | ನ್ಯಾಯ |ಧರ್ಮ

ನಾಡೋಜ ಡಾ. ಪಾಟೀಲ್ ಪುಟ್ಟಪ್ಪ ಅವರ ಸಮಾಧಿ ರಾಷ್ಟ್ರೀಯ ಸ್ಮಾರಕವಾಗಬೇಕೆಂದು ಪ್ರತಿಭಟನೆ

ಧಾರವಾಡ : ಧಾರವಾಡದಲ್ಲಿ ಇಂದು ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಪೂಜಾರ್ ಅವರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಶ್ರೀ ದಿ. ಡಾ. ಪಾಟೀಲ್ ಪುಟ್ಟಪ್ಪ ಅವರ ಸಮಾಧಿಯನ್ನು ರಾಷ್ಟೀಯ ಸ್ಮಾರಕಕ್ಕೆ ಅನುಮೋದನೆ ನೀಡಬೇಕು ಇಲ್ಲದೇ ಹೋದರೆ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗದಂತೆ ವಿರೋಧ ವ್ಯಕ್ತವಡಿಸಬೇಕಾಗುತ್ತದೆ ಎಂದು ಎಚ್ಚರಿಸಿ, ಸಮಾಧಿಗೋಸ್ಕರ ಮನವಿ ಮಾಡಿಕೊಂಡಿದ್ದಾರೆ.

ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಯುವ ಬರಹಗಾರ ಹನುಮಂತ ದಾಸರ ಹೊಗರನಾಳ ಅವರು, ʼಕನ್ನಡದ ಕಟ್ಟಾಳು ಹಿರಿಯ ಸಾಹಿತಿ ಬರಹಗಾರರು, ಕರ್ನಾಟಕ ಏಕೀಕರಣ ಹೋರಾಟದ ರುವಾರಿಗಳು, ಅನುಭವಿ ಪತ್ರಕರ್ತರು, ವಿಶ್ವವಾಣಿ ಕನ್ನಡ ದಿನ ಪತ್ರಿಕೆಯ ಸಂಸ್ಥಾಪಕ ಸಂಪಾದಕರು,ಕನ್ನಡ ಭಾಷಾ ಕಾವಲು ಸಮಿತಿಯ ಮೊದಲ ಅಧ್ಯಕ್ಷರು, ಧಾರವಾಡ ಮೂಲದ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, 70ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು, ವಿದೇಶದಲ್ಲಿ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿ ಪಡೆದ ಕನ್ನಡದ ಮೊದಲಿಗರು, ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರು, ಹಲವಾರು ಪತ್ರಿಕೆಗಳ ಸಂಪಾದಕರು ಮತ್ತು ಕನ್ನಡದ ಉಳಿವಿಗಾಗಿ ಸಾಹಿತ್ಯ ಬರೆದ ಲೇಖಕರಾದ ಶ್ರೀ ದಿ. ಡಾ. ಪಾಟೀಲ್ ಪುಟ್ಟಪ್ಪ ಅವರು 16 ಮಾರ್ಚ್ 2020 ರಂದು ವಿಧಿವಶರಾದರು ಮತ್ತು ಸರ್ಕಾರ ಸರ್ಕಾರಿ ಗೌರವದೊಂದಿಗೆ ಅವರ ಹುಟ್ಟೂರಾದ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಹಲಗೇರಿಯಲ್ಲಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಿತುʼ ಎಂದಿದ್ದಾರೆ.

ʼಪಾಟೀಲ್‌ ಪುಟ್ಟಪ್ಪನವರ ಅಂತ್ಯಕ್ರಿಯೆ ಮುಗಿದಾಗಿನಿಂದ ಇದುವರೆಗೂ ಸರ್ಕಾರವಾಗಲಿ, ಕನ್ನಡ ಸಾಹಿತ್ಯ ಪರಿಷತ್ತಾಗಲಿ ಅವರ ಕುಟುಂಬದ ಕ್ಷೇಮದ ಬಗ್ಗೆಯಾಗಲಿ ಅವರ ಸಮಾಧಿ ಅಭಿರುದ್ಧಿಯ ಬಗ್ಗೆಯಾಗಲಿ ಗಮನಹರಿಸಿಲ್ಲ. ಇಂತಹ ವಿಚಾರವನ್ನು ಮನಗಂಡ ಕರ್ನಾಟಕ ನವನಿರ್ಮಾಣ ಸೇನೆಯ ರಾಜ್ಯಧ್ಯಕ್ಷರಾದ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಭೀಮಶಂಕರ್ ಪಾಟೀಲ್ ಅವರು ಖುದ್ದಾಗಿ ಸಮಾಧಿಗೆ ಭೇಟಿ ನೀಡಿ ಸತ್ಯಾಂಶವನ್ನು ಮನಗಂಡ ಅವರು ಅವರ ಆದೇಶದ ಮೇರೆಗೆ ಧಾರವಾಡ ಜಿಲ್ಲಾ ಕನಸೇ ಅಧ್ಯಕ್ಷರಾದ ಗಿರೀಶ್ ಪೂಜಾರ್, ದೇವೇಂದ್ರ ಮಂತ್ರೋಡಿ, ಅಬ್ರಾರ್ ವೀರಾಪುರ, ರಮೇಶ್ ಸದಬಣ್ಣವರ, ಪೀದಾ ಹುಸೇನ್, ಬಸವರಾಜ ಅಂಗಡಿ, ರಮೇಶ್ ಕುರಿ ಹೀಗೆ ಧಾರವಾಡ ಜಿಲ್ಲಾ ಮತ್ತು ರಾಣೇಬೆನ್ನೂರು ತಾಲ್ಲೂಕು ಘಟಕದ ಪದಾಧಿಕಾರಿಗಳ ತಂಡ ಸೇರಿ ಪಾಪು ಅವರ ಸಮಾಧಿಯ ಸುತ್ತ ಸುತ್ತುವರೆದಿದ್ದ ಕಸ ಕಂಟಿಗಳನ್ನು ಕಡಿದು ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ಇಂತಹ ಧೀಮಂತ ಹಲವಾರು ಸಾಹಿತಿಗಳ ಸಮಾಧಿಗಳು ಮರೆಯಾಗಿವೆ ನೋಡಲು ಕಾಣಸಿಗದಂತಾಗಿವೆ ಮತ್ತು ಸರ್ಕಾರ ಹಾಗೂ ಸಾಹಿತ್ಯ ಪರಿಷತ್ತು ಗಮನ ಹರಿಸಿ ಸಾಹಿತಿಗಳ ಸಮಾಧಿಗಳನ್ನು ರಾಷ್ಟ್ರೀಯ ಸ್ಮಾರಕ ಮಾಡುವಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಿದೆ.

ಪಾಪು ಅವರು ಕನ್ನಡದ ಉಳಿವಿಗಾಗಿ ಹಲವಾರು ಸಾಹಿತ್ಯ ಕೃಷಿಯ ಮೂಲಕ ಕನ್ನಡವನ್ನು ಕನ್ನಡದ ಕಂಪನ್ನು ವಿಶ್ವದುದ್ದಕ್ಕೂ ಮುಟ್ಟಿಸಿದ್ದಾರೆ ಹಾಗೂ ಅವರ ಕೃತಿಗಳಾದ ” ನಮ್ಮ ದೇಶ ನಮ್ಮ ಜನ “, ನನ್ನದು ಈ ಕನ್ನಡ ನಾಡು ” ಹೀಗೆ ಹಲವಾರು ಕೃತಿ ಲೇಖನಗಳನ್ನು ಬರೆದು ಕನ್ನಡದ ಹಿರಿಮೆ ಗರಿಮೆಯನ್ನು ಕಾಪಾಡಿದಂತಹ ಸಾಹಿತಿಗಳನ್ನು ಸರ್ಕಾರ ದಿಕ್ಕರಿಸಿ ನಡೆದಿರುವುದು ಖಂಡನೀಯವಾಗಿದೆ. ಹಾಗೆಯೇ ಈ ಬಾರಿ ಪಾಪು ಅವರ ಹುಟ್ಟೂರು ಜಿಲ್ಲೆಯಾದ ಹಾವೇರಿಯಲ್ಲಿ ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂತಹ ಆಕ್ಷೇಪಣೆಗಳು ಕಳಂಕವಾಗಬಹುದು ಆದರಿಂದ ಈ ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ನಾಡೋಜ ಡಾ.ಪಾಟೀಲ್ ಪುಟ್ಟಪ್ಪ ಅವರ ಸಮಾಧಿಯನ್ನು ರಾಷ್ಟ್ರೀಯ ಸ್ಮಾರಕವಾನ್ನಾಗಿ ಮಾಡಲು ಅನುಮೋದನೆ ನೀಡಿ ಸಾಹಿತ್ಯ ಸಮ್ಮೇಳನ ನಡೆಸಬೇಕಾಗಿದೆ ಮತ್ತು ಇದು ಪ್ರತಿಯೊಬ್ಬ ಕನ್ನಡಿಗರ ಮನವಿಯೂ ಕೂಡ ಹೌದು ಸರ್ಕಾರ ತೆಗೆದುಕೊಳ್ಳಬೇಕಾದ ಕರ್ತವ್ಯವೂ ಹೌದು ಎಂದು ಹೇಳಿದ್ದಾರೆ.

ಇಂತಹ ಸಾಹಿತಿಗಳನ್ನು ಹಾಗೂ ಅವರ ಸಾಹಿತ್ಯದ ಬರಹಗಳನ್ನು ಪಡೆದ ನಾವುಗಳು ನಿಜಕ್ಕೂ ಧನ್ಯರು ಅವರ ಬರಹಗಳಿಗೆ ಹೇಗೆ ಜೀವವಿದೆಯೋ ಅವರಿರುವ ಜಾಗಕ್ಕೂ ನಾವು ಜೀವ ತುಂಬುವ ಕೆಲಸ ಮಾಡಬೇಕಿದೆ ಎಂದಿದ್ದಾರೆ.

ಈ ಕುರಿತು ಧಾರವಾಡದಲಿಂದು ಸರ್ಕಾರದ ವಿರುದ್ಧ ಜಿಲ್ಲಾಧಿಕಾರಿ ಕಚೇರಿ ಮುಂದೆ ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷರಾದ ಗಿರೀಶ್ ಪೂಜಾರ್ ಅವರ ಸಮ್ಮುಖದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಹಾಗೂ ಈ ಕೂಡಲೇ ಪಾಪು ಸಮಾಧಿಯನ್ನು ರಾಷ್ಟೀಯ ಸ್ಮಾರಕಕ್ಕೆ ಅನುಮೋದನೆ ನೀಡಬೇಕು ಇಲ್ಲದೇ ಹೋದರೆ ಇಂದಿನ ಪ್ರತಿಭಟನೆ ಮುಂದಿನ ದಿನಮಾನಗಳಲ್ಲಿ ರಾಜ್ಯದ್ಯಂತ ಬೃಹತ್ ಪ್ರತಿಭಟನೆಯಾಗಿ ಪರಿಣಮಿಸಲಿದೆ ಮತ್ತು ಜನೆವರಿ 6,7,8, 2023ರಂದು ನಡೆಯುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಜರುಗದಂತೆ ವಿರೋಧ ವ್ಯಕ್ತವಡಿಸಬೇಕಾಗುತ್ತದೆ ಎಂದು ಧಾರವಾಡ ಜಿಲ್ಲಾ ಕನಸೇ ಅಧ್ಯಕ್ಷರಾದ ಗಿರೀಶ್ ಪೂಜಾರ್ ಅವರು ಪತ್ರದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ʼಈ ವಿಚಾರವಾಗಿ ಪ್ರತಿಯೊಬ್ಬರೂ ಕನ್ನಡಿಗರಾದ ನಾವುಗಳು ಇಂತಹ ಕನ್ನಡ ಪರ ಸಂಘಟನೆಗಳಿಗೆ ಹಾಗೂ ಹಿರಿಯ ಕವಿ ಸಾಹಿತಿಗಳ ಪರವಾಗಿ ದ್ವನಿ ಎತ್ತಿ ಅವರ ಸಾಹಿತ್ಯವನ್ನು ಜೀವಂತವಾಗಿ ಉಳಿಸಿಕೊಳ್ಳಬೇಕಿದೆ ಕನ್ನಡ ರಾಜ್ಯೋತ್ಸವ ಬಂದಾಗ ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವುದರ ಜೊತೆಗೆ ಅವರ ಜೀವನದುದ್ದಕ್ಕೂ ಕ್ಷೇಮದ ಬಗ್ಗೆ ನೋಡಿಕೊಳ್ಳಬೇಕು ಹಾಗೂ ಎಲ್ಲೋ ವೇದಿಕೆ ಮೇಲೆ ಕುಳಿತು ನಾಡಿನ ಬಗ್ಗೆ ಸಾಹಿತಿಗಳ ಬಗ್ಗೆ ಆ ಕ್ಷಣದ ಮಹತ್ತರ ನುಡಿಗಳನ್ನಾಡುವುದು ಮುಖ್ಯವಲ್ಲ. ಇಂತಹ ಪ್ರತಿಯೊಬ್ಬ ಸಾಹಿತಿಗಳ ಬದುಕನ್ನು ಅರಿಯಬೇಕು ಅವರು ನೀಡಿರುವ ಕೊಡುಗೆಯೊಂದಿಗೆ ನಾವು ಅವರ ಸಾಹಿತ್ಯದ ಜೊತೆಗೆ ಅವರ ಕುರುಹುಗಳನ್ನೂ ಕಾಪಾಡಿಕೊಳ್ಳಬೇಕಿದೆ ಇದು ನಮ್ಮ ನಿಮ್ಮೆಲರ ಆದ್ಯ ಕರ್ತವ್ಯʼ ಎಂದು ಯುವ ಸಾಹಿತಿ ಬರಹಗಾರರಾದ ಹಾಗೂ ಕನಸೇ ಜಿಲ್ಲಾ ವಿದ್ಯಾರ್ಥಿ ಘಟಕದ ಕಾರ್ಯದರ್ಶಿಗಳಾದ ಹನುಮಂತ ದಾಸರ ಹೊಗರನಾಳ ವ್ಯಕ್ತಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು