ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸಿ ತಾಣದಲ್ಲಿ ಕೆಲಸ ಮಾಡುತ್ತಿದ್ದ ನಾಗಾಲ್ಯಾಂಡ್ ಮೂಲದ ಯುವತಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದ್ದು, ಕಿರುಕುಳ ಆರೋಪದ ಹಿನ್ನೆಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
22 ವರ್ಷದ ಲಿನ್ಸುಲಾ ಎಂಬ ಯುವತಿ ನಗರದ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದ್ದು, ಪ್ರಕರಣದ ಹಿನ್ನೆಲೆ ಹಲವು ಅನುಮಾನಗಳು ವ್ಯಕ್ತವಾಗಿವೆ. ವಿಶೇಷವಾಗಿ, ಇಬ್ಬರು ಯುವಕರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರೆಂಬ ಆರೋಪ ಕೇಳಿಬಂದಿದೆ.
ಘಟನೆಗೆ ಸಂಬಂಧಿಸಿದಂತೆ, ಮೃತ ಯುವತಿ ಬರೆದಿದ್ದ ವೈಯಕ್ತಿಕ ಡೈರಿಯಲ್ಲಿ ಕೆಲ ವ್ಯಕ್ತಿಗಳ ಹೆಸರುಗಳ ಜೊತೆಗೆ ತಾನು ಅನುಭವಿಸಿದ್ದ ಮಾನಸಿಕ ಒತ್ತಡ, ಕಿರುಕುಳದ ವಿವರಗಳು ಉಲ್ಲೇಖವಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಡೈರಿ ಇದೀಗ ತನಿಖೆಯಲ್ಲಿ ಪ್ರಮುಖ ಸಾಕ್ಷಿಯಾಗಿ ಪರಿಗಣಿಸಲಾಗಿದೆ.
ದೂರದ ನಾಗಾಲ್ಯಾಂಡ್‌ನಿಂದ ಬಂದಿದ್ದ ಲಿನ್ಸುಲಾ ಕುಟುಂಬದ ಆರ್ಥಿಕ ಹೊಣೆಗಾರಿಕೆ ಹೊತ್ತಿದ್ದರೆಂದು ತಿಳಿದುಬಂದಿದೆ. ಉದ್ಯೋಗ ಕಳೆದುಕೊಳ್ಳುವ ಭಯ ಹಾಗೂ ಕುಟುಂಬದ ಅವಲಂಬನೆ ಹಿನ್ನೆಲೆಯಲ್ಲಿ, ಎದುರಿಸುತ್ತಿದ್ದ ಸಮಸ್ಯೆಗಳನ್ನು ಬಹಿರಂಗಪಡಿಸಲು ಸಾಧ್ಯವಾಗದೆ ಮನಸ್ತಾಪದಲ್ಲಿದ್ದರು ಎನ್ನಲಾಗಿದೆ.
ಇತ್ತ, ಘಟನೆ ಕುರಿತು ಮೃತೆಯ ಬಂಧು ಲಶಿಲಾ ಇಂಚುಗರ್ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಿರುಕುಳ ನೀಡಿದರೆಂದು ಆರೋಪಿಸಲಾಗಿರುವ ವ್ಯಕ್ತಿಗಳ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದು, ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರಿದಿದೆ.
