Home ಇನ್ನಷ್ಟು ಕೋರ್ಟು - ಕಾನೂನು ಸಿಜೆಐ ತರಾಟೆ ಬೆನ್ನಲ್ಲೇ ಬಿಸಿಐಗೆ ಮತ್ತೊಂದು ಮುಖಭಂಗ: ಬಿಸಿಐ ಅಧ್ಯಕ್ಷರಿಗೆ NALSAR ವಿವಿ ಹಳೆ ವಿದ್ಯಾರ್ಥಿಗಳಿಂದ...

ಸಿಜೆಐ ತರಾಟೆ ಬೆನ್ನಲ್ಲೇ ಬಿಸಿಐಗೆ ಮತ್ತೊಂದು ಮುಖಭಂಗ: ಬಿಸಿಐ ಅಧ್ಯಕ್ಷರಿಗೆ NALSAR ವಿವಿ ಹಳೆ ವಿದ್ಯಾರ್ಥಿಗಳಿಂದ ಬಹಿರಂಗ ಪತ್ರ

0

ಹೈದರಾಬಾದ್/ದೆಹಲಿ: ಭಾರತೀಯ ವಕೀಲರ ಪರಿಷತ್ತು (BCI) ಮತ್ತು ಪ್ರತಿಷ್ಠಿತ ನಾಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ ನಡುವಿನ ವಿವಾದ ತಾರಕಕ್ಕೇರಿದೆ. 2026ರ ಬ್ಯಾಚ್‌ನ ವಿದ್ಯಾರ್ಥಿಗಳ ವಕೀಲ ವೃತ್ತಿ ನೋಂದಣಿಗೆ (Enrolment) ವಿಧಿಸಿದ್ದ ನಿಷೇಧವನ್ನು ಬಿಸಿಐ ಹಿಂಪಡೆದಿದ್ದರೂ, ಸಂಸ್ಥೆಯ ವರ್ತನೆಯನ್ನು ಖಂಡಿಸಿ ನಾಲ್ಸಾರ್‌ನ ಸುಮಾರು 440 ಹಳೆ ವಿದ್ಯಾರ್ಥಿಗಳು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರಿಗೆ ಕಟು ಶಬ್ದಗಳಲ್ಲಿ ಬಹಿರಂಗ ಪತ್ರ ಬರೆದಿದ್ದಾರೆ.

ವಿಶ್ವವಿದ್ಯಾಲಯಗಳ ಸ್ವಾಯತ್ತತೆ, ವಿದ್ಯಾರ್ಥಿಗಳು ಮತ್ತು ಬೋಧಕ ವರ್ಗದ ವಿಷಯದಲ್ಲಿ ಬಿಸಿಐ ನಡೆದುಕೊಳ್ಳುತ್ತಿರುವ ರೀತಿಯನ್ನು ಪತ್ರದಲ್ಲಿ ತೀವ್ರವಾಗಿ ಖಂಡಿಸಲಾಗಿದೆ. “ಬಿಸಿಐ ನಡೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗೆಗಿನ ಅಸಂವೇದನಶೀಲತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಹಾಗೂ ನಿರಂಕುಶ ಧೋರಣೆಯನ್ನು ಪ್ರತಿಬಿಂಬಿಸುತ್ತದೆ. ಕ್ಯಾಂಪಸ್‌ಗಳಲ್ಲಿ ಸ್ವತಂತ್ರ ಚಿಂತನೆ ಮತ್ತು ಮುಕ್ತ ಸಂವಾದದ ವಾತಾವರಣಕ್ಕೆ ಧಕ್ಕೆ ತರುವ ಹಕ್ಕು ಬಿಸಿಐಗೆ ಇಲ್ಲ” ಎಂದು ಹಳೆ ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

ನಾಲ್ಸಾರ್ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದನ್ನು ವಿರೋಧಿಸಿ ಸುಮಾರು 450 ವಿದ್ಯಾರ್ಥಿಗಳು ಅಭಿಯಾನ ಆರಂಭಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಬಿಸಿಐ, ನಾಲ್ಸಾರ್‌ನ 2026ರ ಬ್ಯಾಚ್‌ನ ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸದಂತೆ ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಏಕಾಏಕಿ ಆದೇಶ ಹೊರಡಿಸಿತ್ತು. ಇದು ವ್ಯಾಪಕ ವಿರೋಧಕ್ಕೆ ಕಾರಣವಾಗಿ, ಬಿಸಿಐ ಕೆಲವೇ ಗಂಟೆಗಳಲ್ಲಿ ತನ್ನ ಆದೇಶವನ್ನು ವಾಪಸ್ ಪಡೆಯಬೇಕಾಯಿತು.

ಈ ವಿಚಾರವಾಗಿ ಬಿಸಿಐ ಕ್ರಮವನ್ನು ಖುದ್ದು ಸಿಜೆಐ ಸೂರ್ಯ ಕಾಂತ್ ಅವರೇ ಕಟುವಾಗಿ ಟೀಕಿಸಿದ್ದರು. “ವಿದ್ಯಾರ್ಥಿಗಳಿಗೆ ಪ್ರತಿಭಟಿಸುವ ಹಕ್ಕಿದೆ. ವಿದ್ಯಾರ್ಥಿಗಳು ನನಗೆ ಪತ್ರ ಬರೆದಿದ್ದಾರೆ, ಇದು ನನ್ನ ಮತ್ತು ಅವರ ನಡುವಿನ ನೇರ ಸಂವಾದ. ಇದರಲ್ಲಿ ಬಿಸಿಐ ಮೂಗು ತೂರಿಸುವ ಅಗತ್ಯವೇ ಇರಲಿಲ್ಲ. ಬಿಸಿಐ ಕೈಗೊಂಡ ಕ್ರಮ ಸಂಪೂರ್ಣ ಅನಗತ್ಯ ಹಾಗೂ ಅಸಮಂಜಸ” ಎಂದು ಸಿಜೆಐ ತರಾಟೆಗೆ ತೆಗೆದುಕೊಂಡಿದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕೂಡ ಬಿಸಿಐ ಕ್ರಮವನ್ನು ಆಕ್ಷೇಪಿಸಿದ್ದು, “ಯಾರ ಪಾತ್ರವೇನು ಎಂಬುದನ್ನು ಪರಿಶೀಲಿಸದೆ ಇಡೀ ಬ್ಯಾಚ್‌ನ ವಿದ್ಯಾರ್ಥಿಗಳ ವೃತ್ತಿಜೀವನಕ್ಕೆ ತಡೆಯೊಡ್ಡುವುದು ಅನ್ಯಾಯ. ನಿಯಂತ್ರಕ ಮಂಡಳಿಗಳು ನೈಸರ್ಗಿಕ ನ್ಯಾಯದ ತತ್ವಗಳನ್ನು ಪಾಲಿಸಬೇಕು” ಎಂದು ಅಭಿಪ್ರಾಯಪಟ್ಟಿದೆ.

You cannot copy content of this page

Exit mobile version