ಈ ನೆಲದಲ್ಲಿ, ನಮ್ಮ ರಾಷ್ಟ್ರಧ್ವಜದಲ್ಲಿ ನನ್ನ ಅಮ್ಮಂದಿರರ ರಕ್ತದ ಕಲೆಗಳಿವೆ. ದಿಟ್ಟ ನಿಲುವಿದೆ, ಧೈರ್ಯದ ಪಾಠಗಳಿವೆ, ಶಾಂತಿಯ ಉಸಿರಿದೆ. ಅವರನ್ನು ಮುನ್ನಡೆಸುವ ನಾಯಕರು ಅಂದು ದಾರಾಳ ಸಂಖ್ಯೆಯಲ್ಲಿದ್ದರು. ಆದರೆ ಇಂದು ಅವರಿಟ್ಟ ಹೆಜ್ಜೆಯನ್ನು ಹಿಂದೆ ಸರಿಸುವಂತಹ ಒತ್ತಡದ ಮಾತುಗಳೇ ತುಂಬಿವೆ. ಆದರೂ ನನ್ನ ಸಹೋದರಿಯರು ಹಿಂದೆ ಸರಿಯಲಿಚ್ಛಿಸಲಾರರು
ಆಗಸ್ಟ್ 15 ನನ್ನ ಪಾಲಿಗೂ ವಿಶೇಷ ದಿನ. ಅಂದು ನನಗೆ ಹಬ್ಬದ ಸಂಭ್ರಮ. ಪ್ರತಿವರ್ಷ ಈ ದಿನ ಹತ್ತಿರವಾಗುತ್ತಿದ್ದಂತೆ ಚರಿತ್ರೆಯ ಪುಟಗಳು ಕಣ್ಣಮುಂದೆ ಸುಳಿಯುತ್ತಲೇ ಇರುತ್ತದೆ. ಆವಾಗಲೆಲ್ಲ ನನ್ನೊಳಗೊಂದು ದೇಶಪ್ರೇಮದ ಕಿಡಿ ಹೊತ್ತಿ ಉರಿಯುವಂತೆ ಭಾಸವಾಗುತ್ತಿರುತ್ತದೆ. ಪ್ರತೀ ಬಾರಿ ನಾನು ಮುಸ್ಲಿಮ್ ಅನ್ನುವ ಕಾರಣಕ್ಕೆ ಭಾರತೀಯಳು, ಕನ್ನಡಿಗಳು ಎಂಬುದನ್ನು ನಿರೂಪಿಸಿ ಪ್ರದರ್ಶಿಸುವಂತೆ ಒತ್ತಡ ಹೇರಲು ನಾನೇನು ಪ್ರದರ್ಶನಕ್ಕಿಟ್ಟ ಗೊಂಬೆಯಲ್ಲ. ರಾಷ್ಟ್ರಧ್ವಜ ಹಾರಾಡುವಾಗಲೆಲ್ಲ ನನ್ನೆದೆಯಲ್ಲಿ ಉಂಟಾಗುವ ಸಂಚಲನ ನನಗೆ ಮಾತ್ರ ಗೊತ್ತು. ಅಲ್ಲಿ ನನಗೆ ನಾಟಕೀಯದ ಪ್ರದರ್ಶನದ ಅಗತ್ಯವಿಲ್ಲ. ಸ್ವಾತಂತ್ರ್ಯ ದಿನಾಚರಣೆಯ 75ನೇ ಅಮೃತ ಮಹೋತ್ಸವವನ್ನು ಹೊಸಪರಿಯ ರಾಷ್ಟ್ರಧ್ವಜದ ಹಾರಾಟದ ಹೆಸರಿನಲ್ಲಿ ಮಾರಾಟದ ಆಟವನ್ನು ನೋಡುವಾಗ ಇಷ್ಟು ದಿನಗಳವರೆಗೆ ನನ್ನೆದೆಯನ್ನು ಸುಡುವ ಬೆಂಕಿಯು ಜ್ವಾಲಾಮುಖಿಯಾಗಿ ಸ್ಪೋಟವಾಗುವುದೊಂದು ಬಾಕಿ.
ತ್ರಿವರ್ಣ ಧ್ವಜವನ್ನು ನಾವು ಜೊತೆಯಾಗಿಯೇ ಹಾರಾಡಿಸೋಣ. ಅದನ್ನು ವಿರೋಧಿಸಲಾರೆ. ಅದು ಈ ದೇಶದಲ್ಲಿ ನನ್ನನ್ನು ಆಸ್ಮಿತೆಯಾಗಿ ಬೆಳಗಿಸಿದ ಸಂಕೇತ. ಜಗತ್ತಿನ ಯಾವ ಮೂಲೆಗೆ ಹೋದರೂ ನನ್ನನ್ನು ಗುರುತಿಸಲು ನನ್ನೊಂದಿಗಿರುವ ಸಂಗಾತಿಯದು. ಮಕ್ಕಾದ ಕಾಬಾ ಭವನದ ಮುಂದೆಯೂ ನನ್ನ ಧ್ವಜವನ್ನು ಹಾರಾಡಿಸುವ ನನ್ನವರೂ ಇರುವರು. ಆದರೆ ನನ್ನ ಆ ಧ್ವಜ ಮಾರಾಟಕ್ಕಿರುವ ನಾಟಕದ ಬಟ್ಟೆಯಲ್ಲ. ಅವಮಾನಿಸುವ ಹಾಸ್ಯಾಸ್ಪದದ ಪ್ರಹಸನವಲ್ಲ. ವ್ಯಾಪಾರ ಕುದುರಿಸುವ ಬಣ್ಣದ ವಸ್ತ್ರವಲ್ಲ. ಈ ಮಣ್ಣಿನ ಸವಿಯನ್ನುಂಡ, ಇದರ ಮಡಿಲಲ್ಲಿ ಆಡಿ ನಲಿದ ನಮ್ಮನ್ನು ನಿರ್ಮೂಲನಗೊಳಿಸಬೇಕೆಂದು ಷಡ್ಯಂತ್ರ ಹೂಡುವ ದುಷ್ಟಶಕ್ತಿಗೆ ಉತ್ತರ ನೀಡುವ ಸುಂದರ ತ್ರಿವರ್ಣ ಧ್ವಜವದು. ಮಿಸೈಲ್ ಬಾಂಬ್ ರೀತಿಯಲ್ಲಿ ಶಿಕ್ಷಣ, ವ್ಯಾಪಾರ, ಆಹಾರದ ಹೆಸರಿನಲ್ಲಿ ಅಕ್ರಮಣ ನಡೆಸಿದಾಗಲೆಲ್ಲ ನನ್ನನ್ನು ಭಾರತೀಯಳೆಂದು ಗುರುತಿಸಲು ಜೊತೆಯಾಗಿರುವ ಜೊತೆಗಾರ್ತಿ. ಪ್ರತೀ ಹೋರಾಟದ ಸಮಯದಲ್ಲಿ ನಾನದನ್ನು ಹೊತ್ತುಕೊಂಡು ನಡೆದವಳು. ಪ್ರಜಾಪ್ರಭುತ್ವ ವ್ಯವಸ್ಥೆ ಮುಳುಗಿರುವ ಈ ಸಂದರ್ಭದಲ್ಲೂ ಸಂವಿಧಾನದ ಆಶಯವಾದ ವ್ಯಕ್ತಿ ಸ್ವಾತಂತ್ರ್ಯ ಮತ್ತು ವ್ಯಕ್ತಿ ಘನತೆಯ ಛಾಪನ್ನು ನಾವು ಮೆಟ್ಟಿದ ಶಾಲೆಯ ಮೆಟ್ಟಿಲುಗಳು ಮೂಡಿಸುತ್ತಲೇ ಬಂದಿತ್ತು. ಆದರೆ ಅದಕ್ಕಿಂದು ತಡೆಯಾಗಿಸಿದ ನೀವು ಅದ್ಯಾವ ನೈತಿಕತೆಯಿಂದ “ಹರ್ ಘರ್ ಮೆ ತಿರಂಗ” ಅಭಿಯಾನವನ್ನು ಹಮ್ಮಿಕೊಂಡಿರುವಿರಿ?
ನನ್ನ ಗೆಳತಿಯರ ಬದುಕನ್ನು ಕತ್ತಲಾಗಿಸಿದ ಕೇಸರಿ ಶಾಲು, ತ್ರಿಶೂಲದ ಕತೆಗಳು ಇನ್ನೂ ಅವರ ಮನಸ್ಸಿನ ಗಾಯವನ್ನು ಅಳಿಸಿಲ್ಲ. ರಾಷ್ಟ್ರಧ್ವಜವನ್ನು ನೆಪವಾಗಿಸಿ ಅದರ ಜೊತೆ ಈ ಕೇಸರಿ ಧ್ವಜ ಹಾರಾಡುವಾಗಲೆಲ್ಲ ದ್ವೇಷದ ಪೂರಕಗಳಾಗಿ ಸುತ್ತ ಗಿರಗಿರ ತಿರುಗುತ್ತಲೇ ಇದೆ. ಕೋಮು ರಾಜಕಾರಣದ ಪ್ರತಿಫಲನದಲ್ಲಿ, ದುರುದ್ದೇಶ ಪೂರಿತ ಕಟ್ಟಳೆಗಳಲ್ಲಿ ಅಪ್ಪಚ್ಚಿಯಾಗಿರುವುದು ನನ್ನ ಸಹೋದರಿಯರ ಬದುಕು. ಶುಭ್ರಕಣ್ಣಿನಿಂದ ನೋಡಲಾಗದ ನಿಮ್ಮ ಕಣ್ಣುಗಳಿಗೆ ತ್ರಿವರ್ಣ ಧ್ವಜದ ಸಂದೇಶವನ್ನು ಅರ್ಥೈಸುವ ಹೃದಯವಾದರೂ ಹೇಗೆ ಬಂದೀತು? ಸಂವಿಧಾನ ವಿರೋಧಿ ನಡೆ ಮತ್ತು ಅಮಾನವೀಯ ತಡೆಯಲ್ಲಿ ಸಿಲುಕಿ ನಲುಗಿದ ಹಲವಾರು ಮುಸ್ಲಿಮ್ ಹೆಣ್ಣುಮಕ್ಕಳ ನೋವಿಗೆ ಯಾವ ಉತ್ತರ ಕೊಡಬಲ್ಲಿರಿ?
ಈ ರಾಷ್ಟ್ರಧ್ವಜವನ್ನು ಹೊತ್ತು ನಡೆಯುವಾಗ ದೇಶಕ್ಕಾಗಿ ಹೋರಾಡಿ ಮಡಿದ ನಮ್ಮ ಅಮ್ಮಂದಿರನ್ನು ನೆನಪಿಸಿಕೊಳ್ಳಿ. ನನ್ನ ಸಮುದಾಯವನ್ನು ದ್ವೇಷಿಸುವ ನೀವು ದೇಶಕ್ಕಾಗಿ ತ್ಯಾಗ ಮಾಡಿದ ನನ್ನವರ ಯಶೋಗಾಥೆಯನ್ನು ಓದಿ ತಿಳಿಯಿರಿ. ಒಂದು ಕಾಲದಲ್ಲಿ ನಾಲ್ಕು ಗೋಡೆಯೊಳಗೆ ಬಂಧಿತರಾಗಿದ್ದ ನನ್ನ ಗೆಳತಿಯರನ್ನು ಶಾಲಾ- ಕಾಲೇಜಿನ ಬಾಗಿಲುಗಳು ಇತಿಹಾಸದ ತಿರುವುವಂತೆ ಬದಲಾಯಿಸಿದೆ. ಇಲ್ಲದಿದ್ದರೆ ನಮ್ಮ ಅಮ್ಮಂದಿರರ ಶೌರ್ಯವನ್ನು ಅರಿಯಲು ಸಾಧ್ಯವಾಗುತ್ತಿರಲಿಲ್ಲವೇನೋ…ಆ ಬಾಗಿಲುಗಳನ್ನು ನಮ್ಮ ಪಾಲಿಗೆ ಶಾಶ್ವತವಾಗಿ ಮುಚ್ಚಲು ಹೊರಟಿರುವ ನಿಮಗೆ ಉತ್ತರ ಕೊಡುವ ಕಾಲ ಖಂಡಿತವಾಗಿ ಬಂದೇ ಬರುತ್ತದೆ. ಕೇಸರಿ ಪಡೆಗೆ ಇದಿರಾಗಿ ಅಂಜದೆ, ಅಳುಕದೆ ನೆಲಕಟ್ಟಿ ನಿಂತಿರುವ ನನ್ನ ಗೆಳತಿಯರಲ್ಲಿ ಈಗಾಗಲೇ ಹೋರಾಟದ ಕಿಚ್ಚು ಮೊಳಕೆಯೊಡೆದಿದೆ. ಅವರಲ್ಲೇ ಮತ್ತೊಬ್ಬಳು ಬೇಗಮ್ ಹಜ್ರತ್ ಮಹಲ್, ಹಾಜಿರಾ ಬೇಗಮ್ ಇದ್ದರೂ ಇರಬಹುದು. ನಮಗೆ ನಮ್ಮವರಿಂದಲೇ ಮರುಸ್ವಾತಂತ್ರ್ಯ ಪಡೆಯುವ ಕಾಲವಿದು. ಅಂದು ಬ್ರಿಟಿಷರು ನಮ್ಮ ಶತ್ರುಗಳಾಗಿದ್ದರೆ ಇಂದು ನಮ್ಮವರೇ ನಮಗೆ ಶಾಪವಾಗಿ ನಿಂತಿರುವುದು ವಿಪರ್ಯಾಸ! ಎಪ್ಪತೈದರ ಈ ಸ್ವಾತಂತ್ರ್ಯ ಸಂಭ್ರಮಾಚರಣೆಯಲ್ಲಾದರೂ ನೀವು ನಮ್ಮ ಅಮ್ಮಂದಿರ ವೀರ ಹೋರಾಟದ ಕಿಚ್ಚನ್ನು ಅರಿಯುವ ಪ್ರಯತ್ನವನ್ನಾದರು ಮಾಡಿ. ಅದನ್ನೇ ಇಂದು ನಿಮ್ಮ ಮುಂದೆ ತೆರೆದಿಡಲು ಹೊರಟಿದ್ದೇನೆ.
1858 ರಲ್ಲಿ ಅಶ್ಗರಿ ಬೇಗಮ್ ಬ್ರಿಟಿಷರ ವಿರುದ್ಧ ಹೋರಾಡಿದ ಸಂಧರ್ಭದಲ್ಲಿ ಅವರ ಸೆರೆಯಾಳಾಗಿ ಬಂಧಿತರಾದರು. ಆ ಸಮಯದಲ್ಲಿ ಬ್ರಿಟಿಷರು ಅವರನ್ನು ಜೀವಂತವಾಗಿ ಸುಟ್ಟರು. ಇತಿಹಾಸದ ಪುಟಗಳಲ್ಲಿ ಸ್ವರ್ಣಾಕ್ಷರದಲ್ಲಿ ಬರೆದಿಡಬೇಕಾದ ಮಹಿಳೆ ಇವರಾಗಿದ್ದಾರೆ. ಹಬೀಬಿ ಮತ್ತು ರಹೀಮಿ ಎಂಬ ಮುಸ್ಲಿಮ್ ಮಹಿಳೆಯರು ಮುಝಫ್ಫರ್ ನಗರದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ಧೀರ ಮಹಿಳೆಯರು. ಅವರು ಕೂಡ ಬ್ರಿಟಿಷರ ಬಂಧನಕ್ಕೊಳಗಾಗಿ ದೇಶದ ಇತರ ಹನ್ನೊಂದು ಮಂದಿ ವೀರಮಹಿಳೆಯರ ಜೊತೆ ಗಲ್ಲಿಗೇರಿಸಲ್ಪಟ್ಟರು. ದೇಶಕ್ಕಾಗಿ ವೀರ ಮರಣವನ್ನಪ್ಪಿದ ಇವರನ್ನು ಈ ಸಂದರ್ಭದಲ್ಲಿ ನಾವು ಸ್ಮರಿಸಲೇಬೇಕು.
ಬೇಗಮ್ ಹಜ್ರತ್ ಮಹಲ್ ಮುಸ್ಲಿಮ್ ಸ್ವಾತಂತ್ರ್ಯ ಹೋರಾಟಗಾರ್ತಿಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಲ್ಪಡುವ ಹೋರಾಟಗಾರ್ತಿ. ವಾಜಿದ್ ಅಲಿ ಶಾಹರ ಪತ್ನಿಯಾಗಿದ್ದ ಇವರು ತನ್ನ ಪತಿಯು ಬ್ರಿಟಿಷರ ಬಂಧನಕ್ಕೊಳಗಾದ ಸಮಯದಲ್ಲಿ
ಆಡಳಿತದ ಚುಕ್ಕಾಣಿಯನ್ನು ಕೈಗೆತ್ತಿಕೊಂಡರು. ಇವರು ಜಾನ್ಸಿ ರಾಣಿ ಲಕ್ಷ್ಮೀಬಾಯಿಯಂತೆ ಬ್ರಿಟಿಷರ ವಿರುದ್ಧ ಹೋರಾಡಿದ ಧೀರಮಹಿಳೆ.
ಬೀಉಮ್ಮ ಎಂದು ಕರೆಯಲ್ಪಡುವ ಅಬಾದಿ ಬಾನು ಬೇಗಮರು ದೇಶಕ್ಕಾಗಿ ಸಲ್ಲಿಸಿದ ಸೇವೆ ಅಪಾರ. ಶೌಕತ್ ಅಲಿ ಮತ್ತು ಮುಹಮ್ಮದಲಿಯವರ ತಾಯಿಯಾದ ಇವರು ಅತೀ ಸಣ್ಣ ಪ್ರಾಯದಲ್ಲಿ ವಿಧವೆಯಾದರು. ಆದರೆ ಧೃತಿಗೆಡದ ಈ ಬುರ್ಖಾಧಾರಿ ಮಹಾತಾಯಿ ತನ್ನ ಮಕ್ಕಳನ್ನು ದೇಶಕ್ಕಾಗಿ ಅರ್ಪಿಸುವ ಪಣತೊಟ್ಟು ಈಗಲೂ ಅಮರರಾಗಿರುವರು. ಗಾಂಧೀಜಿಯವರ ನಿರ್ದೇಶನದನ್ವಯ ಬೀಉಮ್ಮ ಅನೇಕ ಮಹಿಳೆಯರಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದರು. “ಸ್ವದೇಶ ಚಳುವಳಿ” ಯಲ್ಲಿ ಈ ಮಹಾತಾಯಿಯ ಪಾತ್ರ ಅಮೋಘ. ಆಧುನಿಕ ಇಂಗ್ಲಿಷ್ ಕಲಿಕೆಯನ್ನು ಕಲಿಯುವಂತೆ ಪ್ರೇರೇಪಿಸಿದ ಮುಸ್ಲಿಮ್ ಮಹಿಳೆಯರಲ್ಲಿ ಇವರು ಮೊದಲಿಗರು. ಹಿಂದೂ, ಮುಸ್ಲಿಮರ ನಡುವೆ ಒಡಕುಂಟಾಗಿದ್ದ ಆ ಕಾಲದಲ್ಲಿ ಅವರನ್ನು ಒಗ್ಗೂಡಿಸುವ ಕಾಯಕವನ್ನು ಬೀಉಮ್ಮರವರು ಅತ್ಯಂತ ಸೂಕ್ಷ್ಮತೆಯಿಂದ ನಿಭಾಯಿಸಿದರು. ಹಿಂದೂ ಮತ್ತು ಮುಸ್ಲಿಮ್ ಈ ದೇಶದ ಎರಡು ಕಣ್ಣುಗಳೆಂದು ಕರೆದ ವೀರಮಹಿಳೆಯೇ ಈ ಬೀಉಮ್ಮರವರು.
ಬೀಬಿ ಅಮತುಸ್ಸಲಾಮ್ ಎಂಬ ಮುಸ್ಲಿಮ್ ಹೋರಾಟಗಾರ್ತಿ ಗಾಂಧೀಜಿಯವರ ದತ್ತುಪುತ್ರಿಯೆಂದೇ ಚಿರಪರಿಚಿತರಾಗಿದ್ದರು. ಪಂಜಾಬಿನಲ್ಲಿ ಜನಿಸಿದ ಇವರು ತನ್ನ ಸಹೋದರ ಮುಹಮ್ಮದ್ ರಶೀದ್ ಖಾನ್ ಜೊತೆ ಸೇರಿ ದೇಶಕ್ಕಾಗಿ ಹೋರಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ” ಖಾದಿ ಚಳುವಳಿ”ಯಲ್ಲಿ ಭಾಗವಹಿಸಿದ ಇವರು 1931ರಲ್ಲಿ ಗಾಂಧೀಜಿಯವರ ” ಸೇವಾಗ್ರಮ್ ಆಶ್ರಮ”ವನ್ನು ಸೇರಿಕೊಂಡರು. ತನ್ನ ಬದುಕಿನ ಕೊನೆವರೆಗೂ ದೇಶಕ್ಕಾಗಿ ಸೇವೆ ಸಲ್ಲಿಸಿದ ಇವರು ಇತಿಹಾಸದ ಪುಟಗಳಲ್ಲಿ ಗುರುತಿಸಿಕೊಂಡು ಯುವಪೀಳಿಗೆಗೆ ಮಾದರಿಯಾಗಬೇಕಾದ ಮಹಿಳೆ.
ಸ್ವಾತಂತ್ರ್ಯ ಹೋರಾಟದಲ್ಲಿ ಜೊತೆಯಾದ ಮತ್ತೊಬ್ಬ ವೀರಮಹಿಳೆ ಹಾಜಿರಾ ಬೇಗಮ್. ಉತ್ತರಪ್ರದೇಶದವರಾದ ಇವರು ಪೊಲೀಸ್ ಅಧಿಕಾರಿಯಾಗಿದ್ದ ತನ್ನ ತಂದೆಯಿಂದ ತರಬೇತಿ ಪಡೆದು ನಂತರ ಉನ್ನತ ವ್ಯಾಸಂಗಕ್ಕಾಗಿ ಲಂಡನಿಗೆ ತೆರಳಿ ಅಲ್ಲಿ ಹಲವಾರು ಹೋರಾಟಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ವಿದ್ಯಾಭ್ಯಾಸ ಮುಗಿದು ಸ್ವದೇಶಕ್ಕೆ ಮರಳಿದ ಇವರು 1935ರಲ್ಲಿ “ಕರಾಮತ್ ಹುಸೈನ್” ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿ ಹುದ್ದೆಯನ್ನು ಅಲಂಕರಿಸಿ ಅನೇಕ ವಿದ್ಯಾರ್ಥಿನಿಯರಿಗೆ ಹೋರಾಟದ ಸಿದ್ಧತೆಗಾಗಿ ತರಬೇತಿ ನೀಡುತ್ತಿದ್ದರು. “Progressive writer association”ನಲ್ಲಿ ಹಲವು ವರ್ಷ ಸೇವೆ ಸಲ್ಲಿಸಿದ ಕೀರ್ತಿ ಇವರಿಗಿದೆ. ಇವರು 1935ರಲ್ಲಿ ಡಾ.ಝೈನುಲ್ ಆಬಿದೀನ್ ಅಹಮದರನ್ನು ವಿವಾಹವಾದರು. ಈ ದಂಪತಿಗಳಿಬ್ಬರು” Indian national congress”ನಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬ್ರಿಟಿಷರ ಅತಿಯಾದ ಒತ್ತಡಗಳಿಂದ ಬೇಸತ್ತ ಇವರು ಕೆಲಸಕ್ಕೆ ರಾಜಿನಾಮೆ ನೀಡಿ ಗಾಂಧೀಜಿಯೊಂದಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆ ಸಮಯದಲ್ಲಿ ಅವರು ವಿವಿಧ ವಿಷಯಗಳಲ್ಲಿ ಅಧ್ಯಯನ ಶಿಬಿರಗಳನ್ನು ನಡೆಸಿ ಜನರನ್ನು ಒಟ್ಟುಗೂಡಿಸುವ ಕಾಯಕವನ್ನು ಮುಂದುವರಿಸಿದರು. ಸಾಮಾಜಿಕ,ರಾಜಕೀಯ,ಶೈಕ್ಷಣಿಕ ಕ್ಷೇತ್ರಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡ ಇವರ ಸೇವೆಯನ್ನು ಗುರುತಿಸಿದ ಸೋವಿಯತ್ ಯೂನಿಯನ್ ಇವರಿಗೆ “ಸುಪ್ರೀಮ್ ಸೋವಿಯತ್ ಜುಬಿಲಿ” ಪ್ರಶಸ್ತಿ ನೀಡಿ ಗೌರವಿಸಿತು. ತನ್ನ ಬದುಕನ್ನು ದೇಶಕ್ಕಾಗಿ ಮುಡಿಪಾಗಿಟ್ಟ ಇವರು 2003ನೇ ಜನವರಿ 20ರಂದು ವಿಧಿವಶರಾದರು.
ನಮ್ಮ ದೇಶದ ರಾಷ್ಟ್ರಧ್ವಜದ ವಿನ್ಯಾಸಕ್ಕೆ ಅಂತಿಮವಾಗಿ ಸಲಹೆ ನೀಡಿದ ಮಹಿಳೆ ಸುರಯ್ಯ ಬದ್ರುದ್ದೀನ್ ತಯ್ಯಿಬಿಯಾದರೆ ಖಾದಿಪ್ರೇಮವನ್ನು ಬದುಕಿನುದ್ದಕ್ಕೂ ಪಾಲಿಸಿದ ಕೀರ್ತಿ ಸಕೀನತುಲ್ ಫಾತಿಮಾರಿಗಿದೆ. ಜಹಾನರ ಶಹನಾಝ್ 1938ರಲ್ಲಿ ಪಂಜಾಬಿನ ” ವಿಮನ್ಸ್ ಮುಸ್ಲಿಮ್ ಲೀಗ್”ನ ಅಧ್ಯಕ್ಷರಾಗಿ ಆಯ್ಕೆಯಾದ ಮುಸ್ಲಿಮ್ ಮಹಿಳೆ. ಆತಿಯಾ, ಝೊಹರಾ ಮತ್ತು ನಾಝ್ಲೀ ಶಿಕ್ಷಣಕ್ಕಾಗಿ ಹೋರಾಡಿದ ಒಂದೇ ಮನೆಯ ಮುಸ್ಲಿಮ್ ಸಹೋದರಿಯರು. ಬಂಗಾಳದ ಶಾಯಿಸ್ತಾ ಇಕ್ರಾಮುಲ್ಲಾ 1940ರಲ್ಲಿ ಪಿಎಚ್ ಡಿ ಮಾಡಿದ ಮೊದಲ ಮುಸ್ಲಿಮ್ ಮಹಿಳೆ. ಬರಹದ ಮೂಲಕ ತನ್ನ ಹೋರಾಟದ ಕಿಚ್ಚನ್ನು ಜಗತ್ತಿಗೆ ತೋರಿಸಿದ ಧೀರ ಮಹಿಳೆ ಇವರಾಗಿದ್ದರು. ಅದೇ ರೀತಿ ಇಸ್ಮತ್ ಚುಗ್ತಾಯಿ, ರಶೀದ್ ಜಹಾನ್ ಸಹ ತಮ್ಮ ಲೇಖನಿ ಮೂಲಕ ಹೋರಾಡಿದ ಮುಸ್ಲಿಮ್ ಮಹಿಳೆಯರು.
ಇದೂ ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಇನ್ನೂ ಅನೇಕ ಮುಸ್ಲಿಮ್ ಮಹಿಳೆಯರಿದ್ದಾರೆ. ಅದರಲ್ಲಿ ಕೆಲವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸುವೆನು. ಅಕ್ಬರ್ ಬೇಗಮ್, ಆಮಿನಾ ಖುರೈಶಿ, ಆಮಿನಾ ತ್ವಬ್ಜಿ, ಅಮ್ಜದಿ ಬೇಗಮ್, ಆಯಿಶಾ ಅಹಮದ್, ಅಝೀಝನ್ ಬೇಗಮ್, ಖುರ್ಷಿದ್ ಖ್ವಾಜಾ, ಬೇಗಮ್ ನಿಶಾತುನ್ನಿಸಾ ಮೋಹನಿ, ಬೇಗಮ್ ರಾಣಾ ಲಿಯಾಖತ್ ಅಲಿ ಖಾನ್, ಬೇಗಮ್ ಸಕೀನಾ ಲುಕ್ಮಾನಿ, ಬೇಗಮ್ ಸುಲ್ತಾನಾ ಹಯಾತ್ ಅನ್ಸಾರಿ, ಬೇಗಮ್ ಝೀನತ್ ಮಹಾಮ್, ಡಾ.ದರ್ಖಶಾನ್ ಅಂಜುಮ್, ಫಾತಿಮಾ ಇಸ್ಮಾಯೀಲ್, ಫಾತಿಮಾ ತ್ವಯ್ಯಿಬ್ ಅಲಿ, ಫಾತಿಮಾ ಖುರೈಶಿ, ಹಾಮಿದಾ ತ್ವೇಗಮ್, ಹಾಝ್ರಾ ಬೀಬಿ ಇಸ್ಮಾಯೀಲ್, ಜಮಾಲುನ್ನಿಸಾ ಬಾಜಿ, ಕನೀಝ್ ಸಾಜಿದಾ ಬೇಗಮ್, ಖದೀಜಾ ಬೇಗಮ್, ಖುರ್ಷಿದ್ ಸಾಹಿಬಾ, ಕುಲ್ಸುಮ್ ಸಯಾನಿ, ಮಾಸೂಮಾ ಬೇಗಮ್, ರೈಬಾನ್ ತ್ವಾಬ್ಜಿ, ಡಾ. ರಶೀದ್ ಜಹಾನ್, ರಝಿಯಾ ಖಾತೂನ್, ಸದಕತ್ ಬಾನು ಕಿಚ್ಲಿವ್, ಸಫಿಯಾ ಸಾದ್ ಖಾನ್, ಶಫಾತುಲ್ ನಿಸಾ ಬೀಬಿ, ಶರೀಫ ಹಮೀದ್ ಅಲಿ, ಸುಗ್ರಾ ಖಾತೂನ್, ಸುಲ್ತಾನ ಹಯಾತ್ ಅನ್ಸಬ್ಜಿ, ಸಯ್ಯದ್ ಫಕ್ರುಲ್ ಹಾಝಿಯಾ ಹಸನ್, ಝಾಹಿದಾ ಖಾತೂನ್ ಶರ್ವಾನಿ, ಝೊಹರಾ ಅನ್ಸಾರಿ, ಝುಬೈದಾ ಬೇಗಮ್ ದಾವೂದಿ, ಝುಲೈಖಾ ಬೇಗಮ್ ಇವರೆಲ್ಲರು ದೇಶಕ್ಕಾಗಿ ಹೋರಾಡಿದ ವೀರ ಅಮ್ಮಂದಿರು. ಇವರ ಸೇವೆಗಳನ್ನು ಮತ್ತು ಇವರು ದೇಶಕ್ಕಾಗಿ ಅರ್ಪಿಸಿದ ಕೊಡುಗೆಗಳನ್ನು ಮರೆಯಲಾಗದು.
ಗಾಂಧೀಜಿಯವರ ಕೃತಿಗಳನ್ನು ಆಧಾರಿಸಿ ಅನೇಕ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ವಿವರಿಸುವ ಪುಸ್ತಕಗಳು ಈಗಲೂ ಲಭ್ಯವಿದೆ. “Freedom Movement and Indian Muslim” , ಪಿ.ಎನ್. ಚೋಪ್ರಾ ಬರೆದ ” India’s struggle for freedom”, Muslims and freedom Movement in India”, ಮುಹಮ್ಮದ್ ಮುಝಫ್ಪರ್ ಇಮಾಮ್ ಬರೆದ ” Role of Muslim in the National Movement ” ಮತ್ತು ಹಸನ್ ಇಮಾಮ್ ಬರೆದ ” Indian National Movement ” ಮೊದಲಾದ ಪುಸ್ತಕಗಳಲ್ಲಿ ಮುಸ್ಲಿಮ್ ಹೋರಾಟಗಾರರ ಚರಿತ್ರೆ ಮತ್ತು ಹೋರಾಟದ ಕಿಚ್ಚನ್ನು ಕಾಣಲು ಸಾಧ್ಯ.
ಈ ಹೋರಾಟದ ಕಿಚ್ಚನ್ನು ಮತ್ತೊಮ್ಮೆ ಈ ಭೂಮಿಯಲ್ಲಿ ಜೀವಂತಗೊಳಿಸಬೇಕಾದ ಅಗತ್ಯತೆ ಎದುರಾಗಿದೆ. ಈ ನೆಲದಲ್ಲಿ, ನಮ್ಮ ರಾಷ್ಟ್ರಧ್ವಜದಲ್ಲಿ ನನ್ನ ಅಮ್ಮಂದಿರರ ರಕ್ತದ ಕಲೆಗಳಿವೆ. ದಿಟ್ಟ ನಿಲುವಿದೆ, ಧೈರ್ಯದ ಪಾಠಗಳಿವೆ, ಶಾಂತಿಯ ಉಸಿರಿದೆ. ಅವರನ್ನು ಮುನ್ನಡೆಸುವ ನಾಯಕರು ಅಂದು ದಾರಾಳ ಸಂಖ್ಯೆಯಲ್ಲಿದ್ದರು. ಆದರೆ ಇಂದು ಅವರಿಟ್ಟ ಹೆಜ್ಜೆಯನ್ನು ಹಿಂದೆ ಸರಿಸುವಂತಹ ಒತ್ತಡದ ಮಾತುಗಳೇ ತುಂಬಿವೆ. ಆದರೂ ನನ್ನ ಸಹೋದರಿಯರು ಹಿಂದೆ ಸರಿಯಲಿಚ್ಛಿಸಲಾರರು. ನಾವು ಕಳೆದುಕೊಂಡಿರುವ ಸಂವಿಧಾನದ ಆಶಯಗಳನ್ನು ಪಡೆಯಬೇಕಾದರೆ ಅವರನ್ನು ಜೊತೆ ಸೇರಿಸುವ ಹೃದಯಗಳ ಅವಶ್ಯಕತೆ ತುಂಬಾ ಇದೆ. ಎಲ್ಲರೂ ಜೊತೆಗೂಡಿ ಈ ದೇಶದ ಸ್ವಾಸ್ಥ್ಯವನ್ನು ಉಳಿಸಬೇಕಾಗಿದೆ. ಜೊತೆಗೆ ಕೋಮುವಾದ ಗರಡಿಯಲ್ಲಿ ಮುಳುಗಿದವರ ಹೃದಯ ಪರಿವರ್ತನೆಯ ಮೂಲಕ ಮುರಿದು ಬೀಳುತ್ತಿರುವ ಭಾರತವನ್ನು ಜೊತೆಯಾಗಿ ಕಟ್ಟಬೇಕಾಗಿದೆ.
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಸಿಹಾನಾ ಬಿ ಎಂ
ಶಿಕ್ಷಕಿ ಮತ್ತು ಬರಹಗಾರ್ತಿ